ಉತ್ತರ ಕನ್ನಡ ಜಿಲ್ಲೆಯ ಅನೇಕ ಯುವಕರು ಉದ್ಯೋಗಕ್ಕಾಗಿ ಮಹಾನಗರ ಸೇರಿದ್ದು, ಗ್ರಾಮೀಣ ಭಾಗದಲ್ಲಿ ವಾಸವಾಗಿರುವ ಪಾಲಕರು ಅನಾಥ ಪ್ರಜ್ಞೆ ಅನುಭವಿಸುತ್ತಿದ್ದಾರೆ. ಇನ್ನೂ ಅನೇಕ ಕಡೆ ವಯಸ್ಸಾದ ಪಾಲಕರನ್ನು ಮಕ್ಕಳು ಮನೆಯಿಂದ ಹೊರ ಹಾಕುತ್ತಿದ್ದಾರೆ. ಪಾಲಕರ ರಕ್ಷಣೆಯಲ್ಲಿ ವಿಫಲವಾದ ಮಕ್ಕಳಿಗೆ ಕಾನೂನಿನಲ್ಲಿ ಕಠಿಣ ಶಿಕ್ಷೆಯಿದೆ.
ಈ ಕುರಿತು ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡಿಗ್ರಸ್ ಮಾಹಿತಿ ಹಂಚಿಕೊoಡಿದ್ದಾರೆ. ಪಾಲಕರನ್ನು ಸಲಹದ ಮಕ್ಕಳ ಬಗ್ಗೆ ತಮ್ಮ ಕೇಂದ್ರಕ್ಕೆ ತಿಳಿಸಿದಲ್ಲಿ ಅವರ ವಿರುದ್ಧ ಸರ್ಕಾರಕ್ಕೆ ದೂರು ಸಲ್ಲಿಸುವುದಾಗಿ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರ ಹೇಳಿದೆ. `ಪಾಲಕರ ಆಸ್ತಿ ಅನುಭವಿಸುವ ಮಕ್ಕಳಿಗೆ ಅವರ ಸಂಪೂರ್ಣ ಜವಾಬ್ದಾರಿಯಿರುತ್ತದೆ. ಪಾಲಕರ ಆಸ್ತಿಪಡೆದು ಅವರನ್ನು ಮನೆಯಿಂದ ಹೊರಹಾಕುವ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಈ ರೀತಿ ಶೋಷಣೆ ಮಾಡುವವರ ವಿರುದ್ಧ ಜನ ಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರವೂ ಸರ್ಕಾರಕ್ಕೆ ದೂರು ದಾಖಲಿಸುತ್ತದೆ’ ಎಂದು ಆಗ್ನೇಲ್ ರೋಡಿಗ್ರಸ್ ಹೇಳಿದ್ದಾರೆ.
`ವೃದ್ಧರನ್ನು ಬೀದಿಯಲ್ಲಿ ಬಿಡುವುದು, ಆಸ್ಪತ್ರೆಗೆ ದಾಖಲಿಸಿ ಪರಾರಿಯಾಗುವುದು, ಅವರ ಯೋಗ-ಕ್ಷೇಮ ವಿಚಾರಿಸಿಕೊಳ್ಳದಿರುವುದು ಗಮನಕ್ಕೆ ಬಂದರೆ ಅಕ್ಕ-ಪಕ್ಕದ ಜನರು ತಮಗೆ ಮಾಹಿತಿ ಕೊಡಬಹುದು. ಸುಪ್ರೀಂ ಕೋರ್ಟ್ ಆದೇಶ ಹಾಗೂ 2007ರ ಕಾಯಿದೆ ಅಡಿ ಹಿರಿಯ ನಾಗರಿಕನ ಪಾಲನೆ ಪೋಷಣೆ ಮಕ್ಕಳ ಜವಾಬ್ದಾರಿಯಾಗಿದೆ’ ಎಂದು ಆಗ್ನೇಲ್ ರೋಡಿಗ್ರಸ್ ವಿವರಿಸಿದ್ದಾರೆ. `ಈ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವವರಿಗೆ 5 ಸಾವಿರ ದಂಡ ಹಾಗೂ ಮೂರು ತಿಂಗಳ ಜೈಲು ಶಿಕ್ಷೆಯಿದೆ. ಈ ಕಾನೂನು ಪಾಲನೆಗಾಗಿ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ’ ಎಂದವರು ವಿವರಿಸಿದ್ದಾರೆ.
`ಹಿರಿಯ ನಾಗರಿಕರು ಸಮಸ್ಯೆ ಅನುಭವಿಸುತ್ತಿರುವುದು ಕಂಡು ಬಂದರೆ 7892221590ಗೆ ಫೋನ್ ಮಾಡಿ ಮಾಹಿತಿ ಕೊಡಿ’ ಎಂದು ಅವರು ಮನವಿ ಮಾಡಿದ್ದಾರೆ. ಮಾಹಿತಿ ಕೊಡುವವರ ಹೆಸರನ್ನು ಗೌಪ್ಯವಾಗಿಡುವುದರ ಜೊತೆ ಹಿರಿಯ ನಾಗರಿಕರಿಗೆ ನ್ಯಾಯ ಕೊಡಿಸುವವರೆಗೂ ಹೋರಾಡುವುದಾಗಿ ಅವರು ಹೇಳಿದ್ದಾರೆ.