ಆಡಳಿತಾತ್ಮಕ ದೃಷ್ಠಿಯಿಂದ ಉತ್ತರ ಕನ್ನಡ ಜಿಲ್ಲೆಯನ್ನು ಎರಡು ಹೋಳು ಮಾಡುವ ಹೋರಾಟ ಮುಂದುವರೆದಿದೆ. ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ಅವರು ಮನೆ ಮನೆಗೂ ಭೇಟಿ ನೀಡಿ `ಸಾರ್ವಜನಿಕ ಸಹಿ ಅಭಿಯಾನ’ ನಡೆಸುವುದಾಗಿ ಘೋಷಿಸಿದ್ದಾರೆ.
ಎಲ್ಲವೂ ಅವರು ಹೇಳಿದಂತೆಯೇ ನಡೆದರೆ, ರಾಮನವಮಿ ದಿನದಿಂದಲೇ ಈ ಹೋರಾಟಕ್ಕೆ ಹೊಸ ರೂಪರೇಶೆ ಸಿದ್ಧವಾಗಲಿದೆ. ಪ್ರತಿ ಗ್ರಾಮ ಪಂಚಾಯತ ಮಟ್ಟದಲ್ಲಿ ಆಂದೋಲನ ನಡೆಸಿ, ಮನೆ ಮನೆ ಭೇಟಿ ನೀಡುವುದಾಗಿ ಅನಂತಮೂರ್ತಿ ಹೆಗಡೆ ಸಿದ್ದಾಪುರದಲ್ಲಿ ಘೋಷಿಸಿದ್ದಾರೆ. `ಉತ್ತರ ಕನ್ನಡ ಜಿಲ್ಲೆಯ ಘಟ್ಟದ ಮೇಲಿನ ತಾಲೂಕುಗಳ ಅಭಿವೃದ್ಧಿಗಾಗಿ ಪ್ರತ್ಯೇಕ ಜಿಲ್ಲೆ ಅನಿವಾರ್ಯ’ ಎಂದು ಅವರು ಪ್ರತಿಪಾದಿಸಿದ್ದಾರೆ. ಇದಕ್ಕಾಗಿ ಏಪ್ರಿಲ್ 6ರಂದು ಸಿದ್ದಾಪುರದ ಹೇರೂರಿನ ಶ್ರೀರಾಮಲಿಂಗೇಶ್ವರ ದೇವಾಲಯದಲ್ಲಿ ಮನೆ ಮನೆ ಭೇಟಿಗೆ ಚಾಲನೆ ನೀಡುವ ತಯಾರಿ ನಡೆಸಿದ್ದಾರೆ.
`ಜನರ ಒಮ್ಮತದ ಅಭಿಪ್ರಾಯವಿದ್ದಾಗ ಮುಖ್ಯಮಂತ್ರಿ ಸಹ ನಮ್ಮ ಮಾತು ಕೇಳಬೇಕು. ಶಾಸಕರು, ಸಚಿವರು ಎಲ್ಲರೂ ನಮ್ಮ ಜೊತೆಯಾಗಬೇಕು. ಪ್ರತ್ಯೇಕ ಜಿಲ್ಲೆ ಆಗಬೇಕು ಎಂಬ ಅಭಿಪ್ರಾಯ ಪ್ರತಿಯೊಬ್ಬರಲ್ಲಿಯೂ ಇದ್ದು, ಅದನ್ನು ಇನ್ನಷ್ಟು ಜಾಗೃತಗೊಳಿಸುವುದಕ್ಕಾಗಿ ಅಭಿಯಾನ ನಡೆಯಲಿದೆ’ ಎಂದು ಅನಂತಮೂರ್ತಿ ಹೆಗಡೆ ಹೇಳಿದ್ದಾರೆ. `ಪ್ರತ್ಯೇಕ ಜಿಲ್ಲೆಗಾಗಿ ತಳಮಟ್ಟದಿಂದ ಹೋರಾಟ ನಡೆಸಲಾಗುತ್ತದೆ. ಪ್ರತಿಯೊಬ್ಬರ ಅಭಿಪ್ರಾಯಪಡೆದು ಚರ್ಚಿಸಲಾಗುತ್ತದೆ’ ಎಂದು ಅವರು ಸುದ್ದಿಗಾರರಿಗೆ ಹೇಳಿದ್ದಾರೆ.





