ದಾಂಡೇಲಿ ನಗರದಲ್ಲಿ ಸಂಚರಿಸುತ್ತಿದ್ದವರ ಮೇಲೆ ಹೆಜ್ಜೇನು ದಾಳಿ ನಡೆಸಿದೆ. ಜೇನು ಹುಳ ದಾಳಿಯಿಂದ ತತ್ತರಿಸಿದ ಜನ ಬೆಟ್ಟದ ಕಡೆ ಓಡಿದ್ದು, ಅಲ್ಲಿಯವರೆಗೂ ಬೆನ್ನಟ್ಟಿದ ದುಂಬಿಗಳು ಮೂವರ ಮೇಲೆ ಆಕ್ರಮಣ ನಡೆಸಿವೆ.
ಕಟ್ಟಡ, ಟವರ್ ಹಾಗೂ ದೊಡ್ಡ ದೊಡ್ಡ ಮರಗಳ ಮೇಲೆ ಹೆಜ್ಜೆನು ಗೂಡು ನಿರ್ಮಿಸುತ್ತದೆ. ಮಕರಂದದ ಮೇಲಿನ ಆಸೆಯಿಂದ ಕೆಲವರು ಜೇನು ಹುಳಗಳಿಗೆ ತೊಂದರೆ ನೀಡುತ್ತಿದ್ದಾರೆ. ಕಟ್ಟಡಗಳ ಮೇಲೆ ಹೆಜ್ಜೇನು ಗೂಡು ನಿರ್ಮಿಸಿದಾಗಲೂ ಆತಂಕದಿ0ದ ಅವುಗಳ ಬದುಕಿಗೆ ಸಮಸ್ಯೆ ಮಾಡುತ್ತಿದ್ದಾರೆ. ಹೀಗಾಗಿ ಜೇನು ಹುಳುಗಳು ಸಹಜವಾಗಿ ಪ್ರತಿ ದಾಳಿ ನಡೆಸುತ್ತಿವೆ.
ಜೇನು ಹುಳುಗಳು ತಾವಾಗಿಯೇ ಮನುಷ್ಯರ ಮೇಲೆ ದಾಳಿ ನಡೆಸುವ ಸಾಧ್ಯತೆ ಕಡಿಮೆ. ಜೇನು ಗೂಡುಗಳಿಗೆ ಕಲ್ಲು ಹೊಡೆಯುವುದು, ಗೂಡಿನ ಕಡೆ ಬೆಳಕು ಚೆಲ್ಲುವುದು, ಬೆಂಕಿಯನ್ನು ಹತ್ತಿರ ತೆಗೆದುಕೊಂಡು ಹೋಗುವುದು ಮಾಡುವುದರಿಂದ ಅವು ರೊಚ್ಚಿಗೇಳುತ್ತವೆ. ಆ ವೇಳೆ ಅವರು ಪ್ರತಿ ದಾಳಿ ನಡೆಸಲಿದ್ದು, ಸಿಕ್ಕ ಸಿಕ್ಕವರಿಗೆ ಸೂಚಿ ಬಿಡುತ್ತವೆ. ಸದ್ಯ ದಾಂಡೇಲಿಯಲ್ಲಿ ಸಹ ಅನಗತ್ಯವಾಗಿ ಜೇನಿಗೆ ತೊಂದರೆ ನೀಡಿದವರು ಪರಾರಿಯಾಗಿದ್ದು, ಆ ಪ್ರದೇಶದಲ್ಲಿದ್ದ ಉಳಿದವರಿಗೆ ಹೆಜ್ಜೇನು ಕಚ್ಚಿದೆ.
ಬುಧವಾರ ಮಧ್ಯಾಹ್ನ ಹಳಿಯಾಳ ರಸ್ತೆಯ 3ನಂಬರ ಗೇಟ್ ಹತ್ತಿರ ಮೂವರ ಮೇಲೆ ಹೆಜ್ಜೇನು ದಾಳಿ ಮಾಡಿದೆ. ಮಹಮ್ಮದ ಇಸಾಕ್, ಬಹಾದ್ದೂರ ಖಾನ ಮತ್ತು ಮನೋಜಕುಮಾರ ದಾಳಿಯಿಂದ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದಾರೆ. ಇನ್ನಿತರರನ್ನು ಜೇನು ಹುಳಗಳು ಬೆನ್ನಟ್ಟಿ ಬಂದಿದ್ದು, ಒಂದೆರಡು ಹುಳ ಕಚ್ಚಿಸಿಕೊಂಡವರು ಮನೆಯಲ್ಲಿಯೇ ವಿಶ್ರಾಂತಿ ಪಡೆದಿದ್ದಾರೆ. ಕೆಲವರು ಹುಳಗಳ ದಾಳಿಯಿಂದ ತಪ್ಪಿಸಿಕೊಂಡು ಮನೆ ಸೇರಿದ್ದಾರೆ.





