ಬನವಾಸಿಯಲ್ಲಿ ಪದೇ ಪದೇ ವಿದ್ಯುತ್ ಕಡಿತವಾಗುತ್ತಿದೆ. ಇದರಿಂದ ದುಡಿದು ತಿನ್ನುವ ರೈತರ ಹೊಲ-ಗದ್ದೆಗಳಿಗೂ ನೀರುಣಿಸಲು ಸಾಧ್ಯವಾಗುತ್ತಿಲ್ಲ. ಹೆಸ್ಕಾಂ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ರೊಚ್ಚಿಗೆದ್ದ ರೈತರು ಕದಂಬ ಉತ್ಸವವನ್ನು ಬಹಿಷ್ಕರಿಸುವುದಾಗಿ ಎಚ್ಚರಿಸಿದ್ದಾರೆ.
ಶಿರಸಿ ತಾಲೂಕಿನ ಬನವಾಸಿಯಲ್ಲಿ ಏಪ್ರಿಲ್ 12 ಹಾಗೂ 13ಕ್ಕೆ ಕದಂಬ ಉತ್ಸವ ಆಚರಿಸಲು ಸಿದ್ಧತೆ ನಡೆದಿದೆ. ಆದರೆ, `ವಿದ್ಯುತ್ ಸಮಸ್ಯೆ ಬಗೆಹರಿಸದೇ ಉತ್ಸವ ಆಚರಿಸಲು ಬಿಡುವುದಿಲ್ಲ’ ಎಂದು ಆ ಭಾಗದ ರೈತರು ಹೇಳಿದ್ದಾರೆ. ಬುಧವಾರ ಬನವಾಸಿಯ ಪಂಪ ವೃತ್ತದಲ್ಲಿ ರೈತರು ಪ್ರತಿಭಟನೆ ನಡೆಸಿದ್ದು, ಇದಕ್ಕೆ ಆ ಭಾಗದ ಅಂಗಡಿ ವ್ಯಾಪಾರಸ್ಥರು ಬೆಂಬಲ ನೀಡಿದರು. ವಾಣಿಜ್ಯ ಮಳಿಗೆಗಳನ್ನು ಬಂದ್ ಮಾಡಿ ವಿದ್ಯುತ್ ಕಡಿತದ ವಿರುದ್ಧ ಆಕ್ರೋಶವ್ಯಕ್ತಪಡಿಸಿದರು.
`ಹೊಸ ಗ್ರಿಡ್ ಸ್ಥಾಪನೆಗೆ ಅರಣ್ಯ ಇಲಾಖೆ ಅಡ್ಡಗಾಲು ಹಾಕುತ್ತಿದೆ. ಹೀಗಾಗಿ ಹೆಸ್ಕಾಂ ಅಧಿಕಾರಿಗಳು ಅರಣ್ಯ ಇಲಾಖೆ ಕಚೇರಿಗೆ ವಿದ್ಯುತ್ ಸರಬರಾಜು ನಿಲ್ಲಿಸಬೇಕು. ಆಗ ಅವರಿಗೆ ವಿದ್ಯುತ್ ಕಡಿತದ ಸಮಸ್ಯೆ ಅರ್ಥವಾಗುತ್ತದೆ’ ಎಂದು ಪ್ರತಿಭಟನಾಕಾರರು ಹೇಳಿದರು. ಹೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಬಂದು ರಯತರನ್ನು ಸಮಾಧಾನ ಮಾಡಲು ಪ್ರಯತ್ನಿಸಿದರು. ಆದರೆ, ಪ್ರಯೋಜನವಾಗಲಿಲ್ಲ. ಕದಂಬ ಉತ್ಸವದ ಒಳಗೆ ವಿದ್ಯುತ್ ಸಮಸ್ಯೆ ಬಗೆಹರಿಸದೇ ಇದ್ದರೆ ಉತ್ಸವದ ದಿನವನ್ನು ಕರಾಳ ದಿನ ಎಂದು ಆಚರಿಸುವುದಾಗಿ ಎಚ್ಚರಿಸಿದರು. ಉತ್ಸವಕ್ಕೆ ಬರುವ ಗಣ್ಯರ ಮುಂದೆಯೂ ಪ್ರತಿಭಟಿಸುವುದಾಗಿ ಎಚ್ಚರಿಸಿದರು.
`2008ರಿಂದಲೂ ವಿದ್ಯುತ್ ಸಮಸ್ಯೆ ಈಡೇರಿಸುವಂತೆ ಒತ್ತಾಯಿಸುತ್ತಿದ್ದೇವೆ. ಆದರೆ, ಈವರೆಗೂ ಸಮಸ್ಯೆ ಆಲಿಸಿದವರಿಲ್ಲ. ವಿದ್ಯುತ್ ಸಮಸ್ಯೆ ಬಗೆಹರಿಯದೇ ಉತ್ಸವ ಆಚರಿಸುವುದು ಬೇಡ. ನಮಗೆ ಸಮಸ್ಯೆ ಮೊದಲು ಬಗೆಹರಿಯಬೇಕು’ ಎಂದು ಪ್ರತಿಭಟನಾಕಾರರು ಪಟ್ಟುಹಿಡಿದರು. ಸದ್ಯ ತಾತ್ಕಾಲಿಕವಾಗಿ ಪರ್ಯಾಯ ವ್ಯವಸ್ಥೆ ಮಾಡಿಕೊಡುವುದಾಗಿ ಹೆಸ್ಕಾಂ ಅಧಿಕಾರಿಗಳು ಭರವಸೆ ನೀಡಿದರು. ಅದಾಗಿಯೂ, `ಶಾಶ್ವತ ಪರಿಹಾರ ಕಲ್ಪಿಸಬೇಕು’ ಎಂದು ಎಂದು ಪಟ್ಟು ಹಿಡಿದರು. ಕೊನೆಗೆ ತಾಲೂಕಾಡಳಿತದ ಅಧಿಕಾರಿಗಳು ಆಗಮಿಸಿ ರೈತರ ಮನವೊಲೈಕೆ ಮಾಡಿದರು. ತಹಶೀಲ್ದಾರ್ ಶೈಲೇಶ ಪರಮಾನಂದ ಅವರ ಮಾತಿಗೆ ಬೆಲೆಕೊಟ್ಟು ರೈತರು ಪ್ರತಿಭಟನೆ ಹಿಂಪಡೆದರು.