ಮೂರು ತಿಂಗಳ ನಂತರ ಮಾವನ ಮನೆಗೆ ಹೋಗಿದ್ದ ಮಹಮದ್ ಗೌಸ್ ಅವರಿಗೆ ಅತ್ತೆ-ಮಾವನ ಜೊತೆ ಭಾವನೂ ಸೇರಿ ಧರ್ಮದೇಟು ನೀಡಿದ್ದಾರೆ. ಎಲ್ಲರೂ ಸೇರಿ ಒಬ್ಬನಿಗೆ ಒಡೆಯುವುದನ್ನು ನೋಡಿದ ಊರಿನ ಜನ `ತಾವು ಯಾರಿಗೂ ಕಡಿಮೆಯಿಲ್ಲ’ ಎಂದು ತೋರಿಸುವುದಕ್ಕಾಗಿ ಮಹಮದ್ ಗೌಸ್ ಅವರಿಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ. ಅದಾದ ನಂತರ `ಮಹಮದ್ ಗೌಸ್ ದೊಡ್ಡ ತಪ್ಪೇನೂ ಮಾಡಿಲ್ಲ’ ಎಂದು ಅರಿವಾಗಿದ್ದು, ಹೊಡೆದವರೆಲ್ಲರೂ ಅಲ್ಲಿಂದ ಪರಾರಿಯಾಗಿದ್ದಾರೆ!
ಹಳಿಯಾಳದ ಗೋಲೆಹಳ್ಳಿಯ ಮಹಮದ್ ಗೌಸ್ ಗೌಂಡಿ ಕೆಲಸ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ. ಮೂರು ತಿಂಗಳ ಹಿಂದೆ ಅವರು ದುಡಿಯುವುದಕ್ಕಾಗಿ ಮಹಾರಾಷ್ಟçಕ್ಕೆ ಹೋಗಿದ್ದರು. ಈ ವೇಳೆ ಅವರ ಪತ್ನಿ ಮೀರಾಮಾಬಿ ಮಹಮದ್ ಗೌಸ್ ಮನೆಯಲ್ಲಿ ಇರಲಿಲ್ಲ. ಬದಲಾಗಿ ತಮ್ಮ ತವರು ಮನೆಗೆ ಹೋಗಿದ್ದರು. ಮೂರು ತಿಂಗಳ ನಂತರ ಅಂದರೆ, ಮಾರ್ಚ 27ರಂದು ಮನೆಗೆ ಬಂದ ಮಹಮದ್ ಗೌಸ್ ಮನೆಯಲ್ಲಿ ಪತ್ನಿ ಇಲ್ಲದ ಕಾರಣ ಆತಂಕಕ್ಕೆ ಒಳಗಾದರು. ಅಲ್ಲಿಂದ ಅವರು ನೇರವಾಗಿ ಮಾವನ ಮನೆಗೆ ಹೋದರು.
ಮೀರಾಮಾಬಿ ಮಹಮದ್ ಗೌಸ್ ಅವರು ತವರು ಮನೆಯಲ್ಲಿರುವುದನ್ನು ಕಂಡು ಮಹಮದ್ ಗೌಸ್ ಸಮಾಧಾನವಾದರು. `ನಮ್ಮ ಮನೆಗೆ ಹೋಗೋಣ ಬಾ’ ಎಂದು ಪತ್ನಿಯ ಮನವೊಲೈಸಿದರು. ಪತಿ ಮೇಲೆ ಮುನಿಸಿಕೊಂಡಿದ್ದ ಮೀರಾಮಾಬಿ ಅವರು ಮಹಮದ್ ಗೌಸ್ ಅವರನ್ನು ಉದ್ದೇಶಿಸಿ ಒಮ್ಮೆ ಕೆಟ್ಟದಾಗಿ ಬೈದರು. ಈ ಬೈಗುಳ ಕೇಳಿಸಿಕೊಂಡ ಮೀರಾಮಾಬಿ ಅವರ ತಂದೆ ನಜೀರ ಜಮಾದಾರ್ ತಮ್ಮ ಮಗಳಿಗೆ ಏನೋ ಸಮಸ್ಯೆಯಾಗಿದೆ ಎಂದು ಭಾವಿಸಿದರು. ನಜೀರ ಜಮಾದಾರ್ ಅವರು ತಮ್ಮ ಮಗ ಮೋದಿನಸಾಬ್ ಜಮಾದಾರ್ ಜೊತೆ ಸೇರಿ ಅಳಿಯ ಮಹಮದ್ ಗೌಸ್ ಅವರಿಗೆ ಎರಡು ಬಾರಿಸಿದರು. ಮಹಮದ್ ಗೌಸ್ ಅವರ ಅತ್ತೆ ಸಹ ಇದೇ ಸರಿಯಾದ ಸಮಯ ಎಂದು ತಿಳಿದು ಒಂದು ಏಟು ಕೊಟ್ಟರು.
ಇದನ್ನು ನೋಡಿದ ಊರಿನ ಅಲ್ಲಾಭಕ್ಷ ಪಾಟೀಲ ಸಹ ಅಲ್ಲಿಗೆ ಬಂದರು. ಮೂವರು ಸೇರಿ ಒಬ್ಬನಿಗೆ ಹೊಡೆಯುವುದನ್ನು ನೋಡಿ, ಅವರು ಸಹ ಮಹಮದ್ ಗೌಸ್ ಅವರ ಹೊಟ್ಟೆಗೆ ಕಾಲಿನಿಂದ ಒದ್ದರು. ಇದನ್ನು ನೋಡಿದ ಗೋಲೆಹಳ್ಳಿ ಗ್ರಾಮದ ಮೋದಿನಸಾಬ್ ಪಾಟೀಲ, ಜಯನಾಬಿ ಜಮಾದಾರ್, ದಾವುದ್ ಜಮಾದಾರ್, ರಪಿಕ್ ಜಮಾದಾರ್, ಭಾಷಾಸಾಬ್ ಜಮಾದಾರ್ ಹಾಗೂ ಗುಲ್ಜಾರ್ ಜಮಾದಾರ್ ಅಪರೂಪಕ್ಕೆ ಮನೆಗೆ ಬಂದಿದ್ದ ಅಳಿಯನಿಗೆ ಹಿಗ್ಗಾಮುಗ್ಗ ಥಳಿಸಿದರು.
ಮಹಮದ್ ಗೌಸ್ ಅವರಿಗೆ ಮಾತನಾಡಲು ಅವಕಾಶವೇ ಸಿಗಲಿಲ್ಲ. ಆಗ, ಅಲ್ಲಿಗೆ ಮಹಮದ್ ಗೌಸ್ ಅವರ ಅಕ್ಕ ಹಾಗೂ ಮಾವ ಅಲ್ಲಿಗೆ ಆಗಮಿಸಿ ಈ ಹೊಡೆದಾಟ ತಪ್ಪಿಸಿದರು. ಕೌಟುಂಬಿಕ ಕಾರಣಕ್ಕಾಗಿ ಮಹಮದ್ ಗೌಸ್ ಅವರ ಪತ್ನಿ ಮೀರಾಮಾಬಿ ಮುನಿಸಿಕೊಂಡಿರುವೇ ಮಹಮದ್ ಗೌಸ್ ಅವರಿಗೆ ಧರ್ಮದೇಟು ಬೀಳಲು ಕಾರಣವಾಯಿತು. ಮಹಮದ್ ಗೌಸ್ ಅವರ ಅಕ್ಕ-ಮಾವನನ್ನು ನೋಡಿದ ಊರಿನ ಜನ ಅಲ್ಲಿಂದ ಪರಾರಿಯಾದರು. ಅದಾಗಿಯೂ, ತಮ್ಮ ಮೇಲೆ ಅನಗತ್ಯ ಹಲ್ಲೆ ನಡೆಸಿದ ಅತ್ತೆ-ಮಾವ-ಪತ್ನಿ-ಭಾವ ಹಾಗೂ ಊರಿನ ಕೆಲವರ ವಿರುದ್ಧ ಮಹಮದ್ ಗೌಸ್ ಪೊಲೀಸ್ ದೂರು ನೀಡಿದರು.