ಅರಣ್ಯ ರಕ್ಷಣೆ, ಹೋರಾಟ, ಜನಪರ ಕಾಳಜಿ ಮೂಲಕ ಜನಪ್ರಿಯತೆಗಳಿಸಿ ಪದ್ಮಶ್ರೀ ಪ್ರಶಸ್ತಿಪಡೆದು ಉತ್ತರ ಕನ್ನಡ ಜಿಲ್ಲೆಯ ಹೆಮ್ಮೆ ಹೆಚ್ಚಿಸಿದ್ದ ಸುಕ್ರಿ ಗೌಡ ಹಾಗೂ ತುಳಸಿ ಗೌಡ ಅವರಿಗೆ ಅರಣ್ಯ ಅತಿಕ್ರಮಣದಾರರು ಗೌರವ ನಮನ ಸಲ್ಲಿಸಿದ್ದಾರೆ. ಗುರುವಾರ ಅಂಕೋಲಾದಲ್ಲಿ ನಡೆದ ಕಾನೂನು ಜಾಗೃತಿ ಜಾಥಾದಲ್ಲಿ ಪದ್ಮಶ್ರಿ ಪುರಸ್ಕೃತರ ಭಾವಚಿತ್ರಗಳಿಗೆ ನ್ಯಾಯವಾದಿ ರವೀಂದ್ರ ನಾಯ್ಕ ಪುಷ್ಪ ಅರ್ಪಿಸಿದರು.
`ಅರಣ್ಯ ಭೂಮಿ ಹಕ್ಕಿಗಾಗಿ ನಡೆಯುತ್ತಿರುವ ಕಾನೂನು ಜಾಗೃತಿ ಜಾಥಾ ಹೊಸ ಕಾನೂನು ಅಥವಾ ತಿದ್ದುಪಡಿಗಾಗಿ ಅಲ್ಲ. ಪ್ರಸ್ತುತ ಜಾರಿಯಲ್ಲಿರುವ ಕಾನೂನು ಅನುಷ್ಠಾನಕ್ಕಾಗಿ ಈ ಹೋರಾಟ’ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಸ್ಪಷ್ಠಪಡಿಸಿದರು. `ಕಾನೂನು ಜಾರಿಗೆ ಬಂದು 18 ವರ್ಷವಾದರೂ ಕಾನೂನಿನ ವಿಧಿ ವಿಧಾನ ಅನುಸರಿಸಿಲ್ಲ. ಇದರ ಪರಿಣಾಮ ಅರಣ್ಯವಾಸಿಗಳು ಸಮಸ್ಯೆಗೆ ಸಿಲುಕಿದ್ದಾರೆ. ಈ ಬಗ್ಗೆ ಅರಿವು ಮೂಡಿಸುವ ಉದ್ದೇಶ ಜಾಗೃತಿ ಜಾಥಾದಾಗಿದೆ’ ಎಂದರು.
ಸoಘಟನೆಯ ಅಂಕೋಲಾ ತಾಲೂಕಾ ಅಧ್ಯಕ್ಷ ರಮಾನಂದ ನಾಯ್ಕ ಅಚವೆ ಅಧ್ಯಕ್ಷತೆವಹಿಸಿದರು. ಹೋರಾಟವನ್ನ ಬಲಗೊಳಿಸುವಂತೆ ಅವರು ಕರೆ ನೀಡಿದರು. ಹಿರಿಯ ಚಿಂತಕ ಪಾಂಡುರoಗ ಗೌಡ ಸಭೆಯನ್ನುದ್ದೇಶಿಸಿ ಮಾತನಾಡಿದ್ದರು. ಪ್ರಾಸ್ತಾವಿಕವಾಗಿ ಬಾಲಚಂದ್ರ ಶೆಟ್ಟಿ ಮಾತನಾಡಿದ್ದರು. ವಿನಾಯಕ ಮರಾಠಿ ದೊಡ್ಮನೆ ಮತ್ತು ವಿನಾಯಕ ಮರಾಠಿ ಕೊಡಿಗದ್ದೆ ನಿರ್ವಹಿಸಿದರು.
ಶಂಕರ ಕೊಡಿಯಾ, ನಾಗರಾಜ ನಾಯ್ಕ, ಗೌರೀಶ ಗೌಡ ಮುಂತಾದವರು ಮಾತನಾಡಿದರು. ಕೊನೆಯಲ್ಲಿ ರಾಜೇಶ ಮಿತ್ರ ವಂದಿಸಿದರು. ಸಂಘಟನೆ ಜಿಲ್ಲಾ ಸಂಚಾಲಕ ರಾಜೇಶ ಮಿತ್ರ ನಾಯ್ಕ, ಸಂಚಾಲಕರಾದ ವಿಜು ಪಿಲ್ಲೆ, ಅರವಿಂದ ಗೌಡ, ವಿನೋದ ನಾಯ್ಕ ಹಟ್ಟಿಕೇರಿ, ಶಂಕರ ನಾಯ್ಕ, ಹೊಸಗದ್ದೆ, ವೆಂಕಟರಮಣ ನಾಯ್ಕ ಮಂಜುಗುಣಿ ಉಪಸ್ಥಿತರಿದ್ದರು.





