ಪಿಯುಸಿ ಪರೀಕ್ಷೆಯಲ್ಲಿ ಶೇ 62ರ ಸಾಧನೆ ಮಾಡಿದ್ದರೂ ತೃಪ್ತಿಯಾಗದ ದೀಪಿಕಾ ಪೂಜಾರ್ ಬಾವಿಗೆ ಹಾರಿದ್ದಾರೆ. ಪೊಲೀಸರ ಜೊತೆ ಅಗ್ನಿಶಾಮಕ ಸಿಬ್ಬಂದಿ ಸೇರಿ ದೀಪಿಕಾ ಅವರ ಶವವನ್ನು ಬಾವಿಯಿಂದ ಮೇಲೆತ್ತಿದ್ದಾರೆ.
ಬೈಂದೂರಿನ ದೀಪಿಕಾ ಮಂಜುನಾಥ ಪೂಜಾರ್ (18) ಅವರು ಯಲ್ಲಾಪುರ ತಾಲೂಕಿನ ಬಿಸಗೋಡಿನ ಬರಗದ್ದೆಯಲ್ಲಿ ವಾಸವಾಗಿದ್ದರು. ಅವರು ದ್ವಿತೀಯ ಪಿಯುಸಿ ಪರೀಕ್ಷೆಗಾಗಿ ಅವರು ಸಾಕಷ್ಟು ತಯಾರಿ ನಡೆಸಿದ್ದರು. ಪರೀಕ್ಷೆ ಎದುರಿಸಿದ ನಂತರ ಹೆಚ್ಚಿನ ಅಂಕ ಬರುವ ನಿರೀಕ್ಷೆಯಲ್ಲಿದ್ದರು. ಆದರೆ, ಫಲಿತಾಂಶ ಪ್ರಕಟವಾದಾಗ ಶೇ 62ರಷ್ಟು ಅಂಕ ದೊರೆತಿರುವುದು ಗೊತ್ತಾಯಿತು. ಇದರಿಂದ ಬೇಸರಗೊಂಡ ದೀಪಿಕಾ ತೋಟದ ಬಾವಿಗೆ ಹಾರಿ ಜೀವ ಬಿಟ್ಟರು.
ಏಪ್ರಿಲ್ 8ರ ಮಧ್ಯಾಹ್ನ 2 ಗಂಟೆಯಿ0ದ ದೀಪಿಕಾ ಕಾಣಿಸುತ್ತಿರಲಿಲ್ಲ. ರಾತ್ರಿ 10 ಗಂಟೆ ವೇಳೆಗೆ ಅವರು ಬಾವಿಗೆ ಹಾರಿರುವುದು ಗೊತ್ತಾಯಿತು. ಶವ ಮೇಲೆತ್ತಿದ ನಂತರ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಅಂತ್ಯಕ್ರಿಯೆಗಾಗಿ ಬೈಂದೂರಿಗೆ ಕಳುಹಿಸಲಾಯಿತು. ಮಂಜುನಾಥ ಪೂಜಾರ್ ಅವರು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೇರಂ ಆಡಲು ಬಂದ ನಾಗರ!
ಕೇರಂ ಬೋರ್ಡಿನ ಅಡಿ ಅಡಗಿದ್ದ ನಾಗರ ಹಾವನ್ನು ಅವರ್ಸಾದ ಮಹೇಶ ನಾಯ್ಕ ಅವರು ಹಿಡಿದು ಕಾಡಿಗೆ ಬಿಟ್ಟಿದ್ದಾರೆ.
ಅಂಕೋಲಾ ತಾಲೂಕಿನ ಪುಜಗೇರಿಯಲ್ಲಿ ಗಾಂವಕರ ಮನೆಗೆ ಹಾವು ಬಂದಿತ್ತು. ಇದರಿಂದ ಕುಟುಂಬದವರು ಆತಂಕಕ್ಕೆ ಒಳಗಾಗಿದ್ದರು. ಹಾವು ಬಂದ ವಿಷಯವನ್ನು ಊರಿನ ಪ್ರಮುಖರಾದ ರವಿ ಗಾಂವಕರ ಮತ್ತು ರತ್ನಾಕರ ಗಾಂವಕರ ಅವರು ಮಹೇಶ ನಾಯ್ಕರಿಗೆ ತಿಳಿಸಿದರು.
ಕೇರಂ ಬೋಡಿನ ಅಡಿಗೆ ಅವಿತಿದ್ದ ಹಾವನ್ನು ಮಹೇಶ ನಾಯ್ಕರು ಉಪಾಯವಾಗಿ ಹಿಡಿದರು. ಹೆಡೆ ಎತ್ತಿ ಬುಸ್ ಎಂದ ಹಾವನ್ನು ಅವರು ಹಂತ ಹಂತವಾಗಿ ಪಳಗಿಸಿ ಸಮಾಧಾನ ಮಾಡಿದರು. ಹಾವನ್ನು ಚೀಲದಲ್ಲಿ ತುಂಬಿದ ಮಹೇಶ ನಾಯ್ಕರು ಅದನ್ನು ಕಾಡಿಗೆ ಬಿಟ್ಟರು.
ಗೋವಾ ಪ್ರವಾಸಿಗರಿಗೆ ಹೊಸ ನಿಯಮ!
ಗೋವಾ ಪ್ರವಾಸಕ್ಕೆ ಬರುವ ಪ್ರವಾಸಿಗರಿಗೆ ಅಲ್ಲಿನ ಸರ್ಕಾರ ಹೊಸ ನಿಯಮವನ್ನು ಜಾರಿಗೆ ತಂದಿದೆ. ಪ್ರವಾಸಿಗರು ರಸ್ತೆ ಪಕ್ಕ ಅಡುಗೆ ಮಾಡಿ ಊಟ ಮಾಡುವುದನ್ನು ನಿಷೇಧಿಸಲಾಗಿದ್ದು, ಅಲ್ಲಿನ ಖಾಸಗಿ ಹೊಟೇಲ್ ಅಭಿವೃದ್ಧಿಗೆ ಸರ್ಕಾರವೇ ಆಸಕ್ತಿವಹಿಸಿದೆ.
ಇದಕ್ಕಾಗಿ ಗೋವಾ ಪ್ರವೇಶದಲ್ಲಿಯೇ ವಾಹನ ತಪಾಸಣೆ ನಡೆಸಲಾಗುತ್ತದೆ. ವಾಹನದಲ್ಲಿ ಸಿಲೆಂಡರ್, ಊಟದ ಸಾಮಗ್ರಿ ಸಿಕ್ಕರೆ ಅದನ್ನು ಜಪ್ತು ಮಾಡುವುದಾಗಿ ಸರ್ಕಾರ ಆದೇಶಿಸಿದೆ. ಅದಾಗಿಯೂ, ರಸ್ತೆ ಪಕ್ಕ ಅಡುಗೆ ಮಾಡಿ ಊಟ ಮಾಡುವುದು ಕಂಡರೆ ಜೈಲಿಗೆ ಹಾಕುವುದಾಗಿ ಎಚ್ಚರಿಸಲಾಗುತ್ತಿದೆ.
ಪ್ರವಾಸೋದ್ಯಮ ವಿಷಯದಲ್ಲಿ ಗೋವಾಗೆ ವಿಶೇಷ ಹೆಸರಿದೆ. ದೇಶ-ವಿದೇಶಗಳ ಜನ ಅಲ್ಲಿಗೆ ಆಗಮಿಸುತ್ತಾರೆ. ಕಾರು-ಬೈಕಿನಲ್ಲಿ ಬರುವ ಅನೇಕರು ತಾವೇ ಅಡುಗೆ ತಯಾರಿಸಿಕೊಂಡು ಊಟ ಮಾಡುತ್ತಿದ್ದು, ಇದಕ್ಕೆ ಅಲ್ಲಿನ ಸರ್ಕಾರ ನಿಷೇಧ ಹೇರಿದೆ. ಪ್ರವಾಸಿಗರು ರಸ್ತೆ ಬದಿಯಲ್ಲಿ ಅಡುಗೆ ತಯಾರಿಸಿ ಊಟ ಮಾಡಬಾರದು ಎಂದು ಗೋವಾ ಸರ್ಕಾರ ಕಟ್ಟುನಿಟ್ಟಾಗಿ ಆದೇಶಿಸಿದೆ.
ಸ್ವಚ್ಛತೆ ಕಾಪಾಡುವ ಉದ್ದೇಶದಿಂದ ಈ ನಿಯಮ ಜಾರಿಗೆ ತಂದಿರುವುದಾಗಿ ಹೇಳಿದರೂ, ಅಲ್ಲಿನ ಹೊಟೇಲ್ ಹಾಗೂ ರೆಸಾರ್ಟ ಲಾಭಿ ಇಲ್ಲಿ ಎದ್ದು ತೋರುತ್ತಿದೆ. ಹೊಟೇಲ್ ಊಟ ಋಚಿಸದಿದ್ದರೂ ಗೋವಾಗೆ ಬಂದವರು ಇದೀಗ ಹೊಟೇಲ್ ಮೊರೆ ಹೋಗುವುದು ಅನಿವಾರ್ಯವಾಗಿದೆ.
ತಮ್ಮ ಊರಿನ ಆಹಾರ ಪದ್ಧತಿಯನ್ನು ಅನುಸರಿಸಿ ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸಿ ಅಡುಗೆ ಮಾಡಿ ಊಟ ಮಾಡುವವರಿಗೆ ಇದರಿಂದ ಸಮಸ್ಯೆಯಾಗಿದೆ. ರಸ್ತೆ ಬದಿ ವಾಹನ ನಿಲ್ಲಿಸಿ ಅಡುಗೆ ಮಾಡುವುದು ಕಂಡರೆ ಆ ವಾಹನವನ್ನು ವಶಕ್ಕೆ ಪಡೆಯುವುದಾಗಿ ಪೊಲೀಸರು ಎಚ್ಚರಿಸುತ್ತಿದ್ದಾರೆ.