ಮೀನುಗಾರಿಕೆಗಾಗಿ ಗೋವಾ ಕಡೆ ಹೊರಟಿದ್ದ ಬೇಲೆಹಿತ್ತಲದ ಅನಂತ ಅಂಬಿಗ ಅನುಮಾನಾಸ್ಪದವಾಗಿ ಸಾವನಪ್ಪಿದ್ದಾರೆ. ಬೋಟಿನ ಮಿಶನ್ ಅಡಿ ಅನಂತ ಅಂಬಿಗ ಅವರ ಶವ ಸಿಕ್ಕಿದೆ. ಶವ ಕೊಳೆತಿರುವುದನ್ನು ನೋಡಿ ನಾಲ್ಕು ದಿನದ ಹಿಂದೆ ಅನಂತ ಅಂಬಿಗ ಸಾವನಪ್ಪಿರುವ ಬಗ್ಗೆ ಶಂಕಿಸಲಾಗಿದ್ದು, ಬೋಟಿನ ಯಂತ್ರದ ಅಡಿ ಸಾವನಪ್ಪಿದರೂ ಆ ಬಗ್ಗೆ ಉಳಿದವರಿಗೆ ಹೇಗೆ ಅರಿವಾಗಿಲ್ಲ? ಎಂಬ ಪ್ರಶ್ನೆ ಉದ್ಬವಿಸಿದೆ.
`ಆ ಬೋಟಿನ ಮಾಲಕ ಬರುವವರೆಗೂ ದೋಣಿಯಿಂದ ಶವ ತೆಗೆಯುವುದಿಲ್ಲ’ ಎಂದು ಮೀನುಗಾರರು ಪಟ್ಟು ಹಿಡಿದಿದ್ದಾರೆ. ಗೋವಾದ ಬೋಟ್ ಮಾಲಕ ಅನೇಕರಿಗೆ ಅನ್ಯಾಯ ಮಾಡಿದ ಆರೋಪಗಳಿವೆ. ಸಂಜೆಯವರೆಗೂ ಮೀನುಗಾರರು ಪ್ರತಿಭಟನೆ ನಡೆಸಿದ್ದು, `ಬಡ ಮೀನುಗಾರನಿಗೆ ಯೋಗ್ಯ ಪರಿಹಾರ ನೀಡಬೇಕು’ ಎಂದು ಅಲ್ಲಿನವರು ಒತ್ತಾಯಿಸಿದ್ದಾರೆ. ಜೊತೆಗೆ `ಈ ಸಾವಿನ ನೈಜ ಕಾರಣ ಹೊರಬರಬೇಕು’ ಎಂದು ಆಗ್ರಹಿಸಿದ್ದಾರೆ.
ಮೀನುಗಾರರಿಗೆ ಅನೇಕ ರಾಜಕೀಯ ಮುಖಂಡರು ಬೆಂಬಲವ್ಯಕ್ತಪಡಿಸಿದ್ದಾರೆ. ಪ್ರಮುಖರಾದ ಉಮಾಕಾಂತ ಹೊಸ್ಕಟ್ಟ, ಸೂರಜ್ ನಾಯಕ ಸೋನಿ, ಪ್ರದೀಪ ನಾಯಕ ದೇವರಭಾವಿ, ಆನಂದ ಕವರಿ, ರಾಜಗೋಪಾಲ ಅಡಿಗುರೂಜಿ, ಮೋಹನ ನಾಯಕ, ಮಂಜುನಾಥ ಜನ್ನು ಇನ್ನಿತರರು ಸ್ಥಳದಲ್ಲಿಯೇ ಬೀಡು ಬಿಟ್ಟಿದ್ದಾರೆ. ಪ್ರತಿಭಟನಾಕಾರರ ಕೂಗಿಗೆ ಗೋವಾದ ಬೋಟ್ ಮಾಲಕ ಆಗಮಿಸಿದ್ದು, ಪ್ರತಿಭಟನಾಕಾರರನ್ನು ಪೊಲೀಸ್ ಠಾಣೆಗೆ ಕರೆದರು. ಅದಕ್ಕೆ ಮೀನುಗಾರರು ಒಪ್ಪಲಿಲ್ಲ.
`ಬೆಳಗ್ಗೆಯಿಂದ ಶವದ ಮುಂದೆ ಕಾಯುತ್ತಿದ್ದೇವೆ. ಬೋಟ್ ಮಾಲಕ ಇಲ್ಲಿಯೇ ಬರಲಿ’ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು. ಕೊನೆಗೆ ಕೆಲ ಮುಖಂಡರು ಪ್ರತಿಭಟನಾಕಾರರ ಮನವೊಲೈಸಿ ಪೊಲೀಸ್ ಠಾಣೆಯಲ್ಲಿ ಮಾತುಕಥೆ ನಡೆಸಿದರು. ಈ ವೇಳೆ ಅನೇಕರು ಬೋಟ್ ಮಾಲಕನ ವಿರುದ್ಧ ಆಕ್ರೋಶವ್ಯಕ್ತಪಡಿಸಿದರು. ಈ ಹಿಂದೆ ಅನೇಕ ಮೀನುಗಾರರನ್ನು ಬೋಟ್ ಮಾಲಕ ಕೆಲಸಕ್ಕೆ ಕರೆಯಿಸಿಕೊಂಡಿದ್ದು, ದುಡಿತಕ್ಕೆ ತಕ್ಕ ವೇತನ ನೀಡದೇ ವಂಚಿಸಿದ ಬಗ್ಗೆ ಜನ ದೂರಿದರು. `ಆ ಪ್ರಕರಣವನ್ನು ಬಗೆಹರಿಸಿಕೊಡಬೇಕು’ ಎಂದು ಒತ್ತಾಯಿಸಿದರು.
ಇನ್ನೂ ಮೊದಲು ಆ ಬೋಟು ಹೊನ್ನಾವರಕ್ಕೆ ಹೋಗಿದ್ದು, ಅಲ್ಲಿನವರು `ಸಾವನಪ್ಪಿದ ವ್ಯಕ್ತಿ ಗೋಕರ್ಣ ವ್ಯಾಪ್ತಿಯವ’ ಎಂದು ಹೇಳಿದ್ದಾರೆ. ಹೀಗಾಗಿ ಆ ಬೋಟಿನಲ್ಲಿಯೇ ಶವ ಹಾಕಿಕೊಂಡು ಗೋಕರ್ಣದ ಕಡೆ ಬರಲಾಗಿದೆ. ತದಡಿ ಬಂದರಿನಲ್ಲಿ ಬೋಟು ನಿಲ್ಲಿಸಿರುವುದನ್ನು ಅರಿತು ಮೀನುಗಾರರು ಅಲ್ಲಿ ಜಮಾಯಿಸಿದರು. ಈ ಸಾವಿನ ಬಗ್ಗೆ ಅನುಮಾನವಿರುವುದಾಗಿ ಅನಂತ ಅಂಬಿಗ ಅವರ ಸಹೋದರ ವಸಂತ ಅಂಬಿಗ ದೂರಿದ್ದಾರೆ.