ಹೊನ್ನಾವರದ ತೊಳಸಾಣಿ-ಚಿಕ್ಕೋಣಿ ರಸ್ತೆಯಲ್ಲಿ ವೇಗವಾಗಿ ಚಲಿಸಿದ ಬೈಕು ಮರಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಸುರೇಶ ಭಂಡಾರಿ ಎಂಬಾತರು ಅಲ್ಲಿಯೇ ಸಾವನಪ್ಪಿದ್ದಾರೆ.
ಕುಮಟಾದ ಬಾಡದಲ್ಲಿ ಸುರೇಶ ಭಂಡಾರಿ (73) ವಾಸವಾಗಿದ್ದರು. ಬ್ಯಾಂಕ್ ನೌಕರರಾಗಿದ್ದ ಅವರು ನಿವೃತ್ತಿ ನಂತರ ಮನೆಯಲ್ಲಿದ್ದರು. ಏಪ್ರಿಲ್ 10ರಂದು ಕುಮಟಾ ಹೊಲನಗದ್ದೆಯ ರಾಘವೇಂದ್ರ ನಾಯ್ಕ (19) ಅವರ ಜೊತೆ ಸುರೇಶ ಭಂಡಾರಿ ಅವರು ಬೈಕ್ ಸಂಚಾರ ನಡೆಸಿದ್ದರು.
ರಾಘವೇಂದ್ರ ನಾಯ್ಕರನ್ನು ಹಿಂದೆ ಕೂರಿಸಿಕೊಂಡ ಸುರೇಶ ಭಂಡಾರಿ ಅವರು ಜೋರಾಗಿ ಬೈಕ್ ಓಡಿಸುತ್ತಿದ್ದರು. ಹೊನ್ನಾವರದ ಚಿಕ್ಕೊಳ್ಳಿಯ ಬಂಗಾರಗುAಡಿ ರಸ್ತೆ ಕಡೆ ಅವರು ಚಲಿಸಿದರು. ರಸ್ತೆ ಇಳಿಜಾರು ಹಾಗೂ ತಿರುವನ್ನು ಲೆಕ್ಕಿಸದೇ ಜೋರಾಗಿ ಬೈಕು ಓಡಿಸಿದರು. ರಸ್ತೆ ಅಂಚಿನಲ್ಲಿದ್ದ ಮರಕ್ಕೆ ಬೈಕ್ ಗುದ್ದಿದರು.
ಬೈಕ್ ಮರಕ್ಕೆ ಗುದ್ದಿದ ರಭಸಕ್ಕೆ ಸುರೇಶ ಭಂಡಾರಿ ಅವರ ಕಣ್ಣು, ಕಾಲಿಗೆ ಗಂಭೀರ ಪ್ರಮಾಣದಲ್ಲಿ ಗಾಯವಾಯಿತು. ಚೇತರಿಸಿಕೊಳ್ಳುವುದರೊಳಗೆ ಅವರು ಅಲ್ಲಿಯೇ ಕೊನೆ ಉಸಿರೆಳೆದರು. ಬೈಕ್ ಹಿಂದೆ ಕೂತಿದ್ದ ರಾಘವೇಂದ್ರ ನಾಯ್ಕ ಅವರು ಈ ಅಪಘಾತದಿಂದ ಗಾಯಗೊಂಡರು. ಮೊಣಕಾಲು ಹಾಗೂ ಹೊಟ್ಟೆಗೆ ಗಾಯ ಮಾಡಿಕೊಂಡ ರಾಘವೇಂದ್ರ ನಾಯ್ಕ ಅವರು ಹೊನ್ನಾವರ ಪೊಲೀಸ್ ಠಾಣೆಗೆ ತೆರಳಿ ಅಪಘಾತದ ಬಗ್ಗೆ ವಿವರಿಸಿ, ದೂರು ದಾಖಲಿಸಿದರು.
ಪಕ್ಕದಮನೆಯವರ ಹೊಟ್ಟೆ ಉರಿಸಿದ ಕಾರಿನ ಓಡಾಟ: ಅವರಿವರ ನಡುವೆ ಹೊಡೆದಾಟ!
ಸ್ವಂತ ಕಾರು ಖರೀದಿಸಲು ಸಾಧ್ಯವಾಗದ ಕಾರಣ ಸಂಜಯ ಹೆಗಡೆಕರ್ ಅವರಿಗೆ ಅಕ್ಕಪಕ್ಕದ ಮನೆಯವರು ವ್ಯಂಗ್ಯವಾಡುತ್ತಿದ್ದು, ಇದೇ ವಿಷಯ ಹೊಡೆದಾಟಕ್ಕೆ ಕಾರಣವಾಗಿದೆ.
ಕುಮಟಾದ ಹೆಗಡೆಯ ಜನಮಕ್ಕಿಯಲ್ಲಿ ಸಂಜಯ ಹೆಗಡೆಕರ್ ವಾಸವಾಗಿದ್ದಾರೆ. ಅವರ ಪತ್ನಿ ಸುಧಾ ಹೆಗಡೆಕರ್ ಬಿಸಿಯೂಟ ತಯಾರಿಸಿ ಬದುಕು ಕಟ್ಟಿಕೊಂಡಿದ್ದಾರೆ. ಪಕ್ಕದ ಮನೆಯ ನಾಗರಾಜ ನಾಯ್ಕ ಅವರು ಝರಾಕ್ಸ ಅಂಗಡಿ ನಡೆಸುತ್ತಾರೆ. `ಸಂಜಯ ಹೆಗಡೆಕರ್ ಅವರಲ್ಲಿ ಸ್ವಂತದೊoದು ಕಾರಿಲ್ಲ’ ಎಂಬುದು ನಾಗರಾಜ ನಾಯ್ಕ ಅವರ ಕೊರಗು!
ಇದೇ ವಿಷಯವಾಗಿ ನಾಗರಾಜ ನಾಯ್ಕ ಅವರು ಸಂಜಯ ಹೆಗಡೆಕರ್ ಅವರಿಗೆ ಪದೇ ಪದೇ ಹಿಯಾಳಿಸುತ್ತಾರೆ. `ಸ್ವಂತ ಕಾರು ಖರೀದಿಸಲು ಯೋಗ್ಯತೆ ಇಲ್ಲ. ಬೇರೆಯವರ ಕಾರು ಓಡಿಸುತ್ತೀಯಾ?’ ಎಂದು ಸಿಕ್ಕಾಗಲೆಲ್ಲ ವ್ಯಂಗ್ಯವಾಗಿ ಮಾತನಾಡುತ್ತಾರೆ. ಅದರಂತೆ ಏಪ್ರಿಲ್ 9ರಂದು ಸಹ ಸಂಜಯ ಹೆಗಡೆಕರ್ ಅವರು ಬೇರೆಯವರ ಕಾರು ತೆಗೆದುಕೊಂಡು ಹೋಗುವಾಗ ನಾಗರಾಜ ನಾಯ್ಕ ಎದುರಾದರು. `ಸ್ವಂತ ಕಾರಿಲ್ಲ’ ಎಂದು ಮತ್ತೆ ವ್ಯಂಗ್ಯವಾಡಿದರು. ಇದೇ ವಿಷಯವಾಗಿ ಸಣ್ಣ ಪ್ರಮಾಣದಲ್ಲಿ ಜಗಳವೂ ನಡೆಯಿತು.
ಏಪ್ರಿಲ್ 10ರಂದು ಸಂಜಯ ಅವರ ಪತ್ನಿ ಸುಧಾ ಹೆಗಡೆಕರ್ ಅವರು ನಾಗರಾಜ ನಾಯ್ಕ ಅವರಿಗೆ ಎದುರಾದರು. `ನನ್ನ ಪತಿಗೆ ಏಕೆ ಹಿಯಾಳಿಸುವುದು?’ ಎಂದು ಸುಧಾ ಹೆಗಡೆಕರ್ ಪ್ರಶ್ನಿಸಿದರು. ಇದರಿಂದ ಸಿಟ್ಟಾದ ನಾಗರಾಜ ನಾಯ್ಕರು ಕೆಟ್ಟದಾಗಿ ಬಯ್ಯಲು ಶುರು ಮಾಡಿದರು. ಜೊತೆಗೆ ಸುಧಾ ಅವರ ತಲೆಕೂದಲು ಹಿಡಿದು ಎಳೆದರು. ಈ ಬೊಬ್ಬೆ ಕೇಳಿ ಅಲ್ಲಿ ಅದೇ ಊರಿನ ನಿವೃತ್ತ ನೌಕರ ಸುಬ್ರಾಯ ನಾಯ್ಕ ಬಂದರು. ಅವರು ಸಹ ಸುಧಾ ಹೆಗಡೆಕರ್ ಅವರಿಗೆ ಬಡಿಗೆಯಿಂದ ಬಾರಿಸಿದರು.
ಇದನ್ನು ಸಹಿಸಲಾಗದ ಸುಧಾ ಹೆಗಡೆಕರ್ ಅವರು ತಮಗಾದ ಅವಮಾನ ಹಾಗೂ ನೋವಿನ ವಿರುದ್ಧ ಪೊಲೀಸ್ ಠಾಣೆಯ ಮೆಟ್ಟಿಲೇರಿದರು. ಕುಮಟಾ ಪೊಲೀಸ್ ಠಾಣೆಯಲ್ಲಿ ನಾಗರಾಜ ನಾಯ್ಕ ಹಾಗೂ ಸುಬ್ರಾಯ ನಾಯ್ಕರ ವಿರುದ್ಧ ದೂರು ನೀಡಿ, ಪ್ರಕರಣ ದಾಖಲಿಸಿದರು. ಪೊಲೀಸರು ಇದೀಗ ತನಿಖೆ ನಡೆಸುತ್ತಿದ್ದಾರೆ.
ಮದ್ಯ ಮಾರಾಟ ತಡೆದ ಮಹಿಳಾ ಪೊಲೀಸ್!
ಸಿದ್ದಾಪುರದ ಶರಳಗಿಯಲ್ಲಿ ಗೋವಿಂದ ನಾಯ್ಕ ತಮ್ಮ ಮನೆಯಲ್ಲಿ ಮದ್ಯ ಮಾರಾಟ ಮಾಡುತ್ತಿರುವುದನ್ನು ಪಿಎಸ್‌ಐ ಗೀತಾ ಶಿರ್ಶಿಕರ್ ಅವರು ಪತ್ತೆ ಹಚ್ಚಿದ್ದಾರೆ. ಮದ್ಯ ಮಾರಾಟಕ್ಕೆ ತಡೆ ಒಡ್ಡಿದ ಅವರು ಅಕ್ರಮ ಮದ್ಯ ಮಾರಾಟದಿಂದ ಸಂಪಾದಿಸಿದ್ದ 160ರೂ ಹಣವನ್ನು ವಶಕ್ಕೆಪಡೆದು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.
75 ವರ್ಷದ ಗೋವಿಂದ ನಾಯ್ಕ ಅವರು ತಮ್ಮ ಮನೆಯಲ್ಲಿ ಮದ್ಯವನ್ನು ದಾಸ್ತಾನು ಮಾಡುತ್ತಿದ್ದರು. ಮನೆ ಮುಂದೆ ಅವರು ಮದ್ಯಪ್ರಿಯರಿಗೆ ಉಪಚರಿಸುತ್ತಿದ್ದರು. ಕಾನೂನುಬಾಹಿರವಾಗಿ ಅವರು ಮದ್ಯ ಮಾರಾಟ ಹಾಗೂ ಸೇವನೆಗೆ ಅವಕಾಶ ಮಾಡಿಕೊಟ್ಟಿದ್ದರು. ಈ ವಿಷಯ ಅರಿತ ಸಿದ್ದಾಪುರ ಪಿಎಸ್‌ಐ ಗೀತಾ ಶಿರ್ಶಿಕರ್ ಏಪ್ರಿಲ್ 10ರ ಸಂಜೆ ಅವರು ಶಿರಳಗಿಯ ಗೋವಿಂದ ನಾಯ್ಕ ಅವರ ಮನೆ ಮೇಲೆ ದಾಳಿ ಮಾಡಿದರು.
ಕೆಲವರು ಕುಡಿದು ಬಿಟ್ಟಿದ್ದ ಮದ್ಯದ ಪ್ಯಾಕೇಟ್‌ಗಳು ಮನೆ ಮುಂದೆ ಬಿದ್ದಿದ್ದವು. ಪ್ಲಾಸ್ಟಿಕ್ ಲೋಟಗಳು ಅಲ್ಲಿ ಕಾಣಿಸಿದವು. ಮದ್ಯ ಮಾರಾಟವನ್ನು ಖಚಿತಪಡಿಸಿಕೊಂಡ ಅವರು ಅಲ್ಲಿದ್ದ ಇನ್ನಿತರ ಮದ್ಯದ ಪ್ಯಾಕೇಟ್’ಗಳನ್ನು ವಶಕ್ಕೆಪಡೆದರು. `ಅಕ್ರಮ ಮದ್ಯ ಮಾರಾಟ ತಪ್ಪು’ ಎಂದು ತಿಳುವಳಿಕೆ ನೀಡಿ, ಪ್ರಕರಣವನ್ನು ದಾಖಲಿಸಿದರು.