ಶಿರಸಿಯ ಮಾಂತೇಶ ಅವರ ಪ್ಯಾಂಟಿನ ಒಳಗೆ ನಾಗರ ಹಾವು ಸಿಕ್ಕಿಬಿದ್ದಿದ್ದು, ಉರಗತಜ್ಞ ಪ್ರಶಾಂತ ಹುಲೆಕಲ್ ಹಾವನ್ನು ರಕ್ಷಿಸಿ ಮಾಂತೇಶ ಅವರ ಪ್ರಾಣವನ್ನು ಉಳಿಸಿದ್ದಾರೆ.
ಶಿರಸಿ ನಾರಾಯಣಗುರು ನಗರದ ಮಾಂತೇಶ ಅವರು ಶುಕ್ರವಾರ ಸಂಜೆ ಪೇಟೆಗೆ ಹೋಗುವವರಿದ್ದರು. ಅಂಗಿ ಧರಿಸಿದ ಅವರು ಪ್ಯಾಂಟಿಗಾಗಿ ಕೈ ಹಾಕಿದರು. ಆಗ, ಅದರೊಳಗಿದ್ದ ನಾಗರ ಬುಸ್ ಎಂದಿದ್ದು, ಮಾಂತೇಶ್ ಅವರು ಬೆಚ್ಚಿ ಬಿದ್ದರು.
ತಕ್ಷಣ ಆ ಪ್ಯಾಂಟನ್ನು ನೆಲದ ಮೇಲೆ ಎಸೆದು ದೂರ ಸರಿದರು. ಕಂಗಾಲಾದ ಮಾಂತೇಶ ಅವರು ಜೋರಾಗಿ ಬೊಬ್ಬೆ ಹೊಡೆದರು. ಅದನ್ನು ಕೇಳಿ ಅಕ್ಕ-ಪಕ್ಕದವರು ಸಹ ಆಗಮಿಸಿದರು. ಬಳಿಕ ಉರಗತಜ್ಞ ಪ್ರಶಾಂತ ಹುಲೆಕಲ್ ಅವರನ್ನು ಜನ ಸ್ಥಳಕ್ಕೆ ಕರೆಯಿಸಿದರು.
ಪ್ಯಾಂಟಿನ ಒಳಗೆ ಸಿಲುಕಿಕೊಂಡಿದ್ದ ಹಾವನ್ನು ಪ್ರಶಾಂತ ಹುಲೆಕಲ್ ಹೊರತೆಗೆದರು. ನಂತರ ಅದನ್ನು ಕಾಡಿಗೆ ಬಿಟ್ಟರು. ಮಾಂತೇಶ ಕುಟುಂಬದವರು ಸಹ ಇದರಿಂದ ನೆಮ್ಮದಿಯ ನಿಟ್ಟುಸಿರು ಬಿಟ್ಟರು.
ಊರಿನ ಅಭಿವೃದ್ಧಿಗೆ ಶಾಲಾ ಶಿಕ್ಷಕನ ಕೊಡುಗೆ
ಕಾರವಾರದ ನಗೆ ಗ್ರಾಮದ ಅಭಿವೃದ್ಧಿಗೆ ಅಲ್ಲಿನ ಶಾಲೆಯ ಮುಖ್ಯ ಶಿಕ್ಷಕ ಅಖ್ತರ್ ಸೆಯ್ಯದ್ ಅವರು ಸರಿ ಸುಮಾರು 1 ಲಕ್ಷ ರೂ ಹಣ ವ್ಯಯಿಸಿದ್ದಾರೆ. ರಸ್ತೆ ಅಭಿವೃದ್ಧಿ, ದೇವಾಲಯಗಳ ಜೀರ್ಣೋದ್ದಾರಕ್ಕಾಗಿ ಅವರು ತಾವು ದುಡಿದ ಹಣವನ್ನು ವಿನಿಯೋಗಿಸಿದ್ದಾರೆ.
ಕಾರವಾರ ತಾಲೂಕಿನ ಕುಗ್ರಾಮಗಳಲ್ಲಿ ನಗೆ ಗ್ರಾಮವೂ ಒಂದು. ದಟ್ಟ ಅರಣ್ಯವನ್ನು ಹೊಂದಿರುವ ಈ ಊರಿಗೆ ಸರಿಯಾದ ರಸ್ತೆ ವ್ಯವಸ್ಥೆಗಳಿಲ್ಲ. ಇದರಿಂದ ಮಕ್ಕಳು ಶಾಲೆಗೆ ಬರಲು ಸಮಸ್ಯೆ ಆಗುವುದನ್ನು ಅರಿತ ಅಕ್ತರ್ ಸಯ್ಯದ್ ಅವರು ಅದನ್ನು ದೂರ ಮಾಡುವ ಪ್ರಯತ್ನ ನಡೆಸಿದ್ದಾರೆ. ಕೋಳಿಮಂಕೆ ಮಜರೆಯ ಮಕ್ಕಳು ಮಳೆಗಾಲದಲ್ಲಿ ಶಾಲೆಗೆ ಬರುವಾಗ ನಗೆ ಹಾಗೂ ಮಚ್ಚಳ್ಳಿ ಗುಡ್ಡದಿಂದ ಬರುವ ನೀರು ಅಡ್ಡವಾಗುವುದನ್ನು ಅರಿತು ಆ ಭಾಗದಲ್ಲಿ ಅಖ್ತರ ಸೈಯ್ಯದ ಅವರು 20 ಟಿಪ್ಪರ್ ಮಣ್ಣು ಹಾಕಿಸಿದ್ದಾರೆ. ಇದರೊಂದಿಗೆ ನಗೆ ಗ್ರಾಮದ ಶ್ರೀ ಉದ್ಭವಲಿಂಗ ದೇವಸ್ಥಾನದ ಆವರಣಕ್ಕೆ ಸಹ ಅಗತ್ಯ ಮಣ್ಣು ಪೂರೈಸಿ ನೆಲವನ್ನು ಸಮದಟ್ಟು ಮಾಡಿ ಕೊಟ್ಟಿದ್ದಾರೆ.
`ಶಾಲೆ ಹಾಗೂ ದೇವಾಲಯದ ಬಗ್ಗೆ ಮುಖ್ಯಶಿಕ್ಷಕ ಅಖ್ತರ ಸೈಯ್ಯದ ಅವರು ಅಪಾರ ನಂಬಿಕೆಯಿರಿಸಿಕೊoಡಿದ್ದಾರೆ. ದೇವರ ಬಗ್ಗೆ ವಿಶೇಷ ಕಾಳಜಿವಹಿಸಿ ಅಖ್ತರ ಜೆ ಸೈಯದ್ ಅವರು ಊರಿನವರ ಮನಗೆದ್ದಿದ್ದಾರೆ’ ಎಂದು ಕೋಳಿಮಂಕೆಯ ಮಜರೆಯ ಗ್ರಾಮ ಅರಣ್ಯ ಸಮಿತಿಯ ಅಧ್ಯಕ್ಷ ರಾಮಾ ಗೋರಖ್ಯಾ ಗೌಡ ಅಭಿಪ್ರಾಯವ್ಯಕ್ತಪಡಿಸಿದರು. `ನಗೆ ಗ್ರಾಮದ ಸುಗ್ಗಿ ಕೋಲು ಕುಣಿಯುವ ದೇವಸ್ಥಾನ, ಬಲಿದೇವರ ಕಟ್ಟೆಗೂ ಅವರು ಸ್ವಂತ ಖರ್ಚಿನಿಂದ ಕೆಲಸ ಮಾಡಿಕೊಟ್ಟಿದ್ದಾರೆ’ ಎಂದವರು ವಿವರಿಸಿದರು.
ಇಂಜಿನ್ ಕಳ್ಳತನ: ಬೋಟಿಗೆ ಇಲ್ಲ ದೇವರ ಅನುಗ್ರಹ!
`ದುರ್ಗಾ ಪರಮೇಶ್ವರಿ ಅನುಗ್ರಹ’ ಎಂಬ ಹೆಸರಿನ ಯಾಂತ್ರಿಕೃತ ಬೋಟಿನಲ್ಲಿದ್ದ ಇಂಜಿನ್ ಕಳ್ಳತನವಾಗಿದೆ. 1.40 ಲಕ್ಷ ರೂ ಮೌಲ್ಯದ ಇಂಜಿನ್’ನ್ನು ಕಳ್ಳರು ಅಪಹರಿಸಿದ್ದಾರೆ.
ಭಟ್ಕಳ ಹೆಬಳೆ ಬಳಿಯ ಗಾಂಧಿನಗರ ಜಾಣನಮನೆಯ ಕುಮಾರ ಹೆಬಳೆ ಅವರು `ದುರ್ಗಾ ಪರಮೇಶ್ವರಿ ಅನುಗ್ರಹ’ ಎಂಬ ಬೋಟನ್ನು ಹೊಂದಿದ್ದರು. ಈ ಬೋಟಿನಲ್ಲಿ ಅವರು ಯಮಹಾ ಕಂಪನಿಯ 9.9 ಎಚ್.ಪಿ ಇಂಜಿನ್’ನ್ನು ಅಳವಡಿಸಿದ್ದರು. ಏಪ್ರಿಲ್ 7ರಂದು ಅವರು ಮೀನುಗಾರಿಕೆಗೆ ತೆರಳಿದ್ದು, ಸಂಜೆ ಬಂದರಿಗೆ ಮರಳಿದ್ದರು. ಆ ವೇಳೆ ಬೋಟಿನ ಇಂಜಿನ್ ಸರಿಯಾಗಿಯೇ ಇತ್ತು.
ಮರುದಿನ ಬೆಳಗ್ಗೆ ಬೋಟಿನ ಬಳಿ ತೆರಳಿದಾಗ ಅಲ್ಲಿ ಇಂಜಿನ್ ಇರಲಿಲ್ಲ. ಎಲ್ಲಿ ಹುಡುಕಿದರೂ ಇಂಜಿನ್ ಕಾಣಲಿಲ್ಲ. ಅದನ್ನು ಅಪಹರಿಸಿದವರು ಯಾರು? ಎಂದು ಸಹ ಗೊತ್ತಾಗಲಿಲ್ಲ. ಹೀಗಾಗಿ ಕುಮಾರ ಹೆಬಳೆ ಅವರು ಪೊಲೀಸ್ ದೂರು ನೀಡಿದ್ದು, ಭಟ್ಕಳ ಗ್ರಾಮೀಣ ಠಾಣೆಯ ಪೊಲೀಸರು ಬೋಟಿನ ಇಂಜಿನ್ ಕದ್ದವರಿಗಾಗಿ ಹುಡುಕಾಟ ನಡೆಸಿದ್ದಾರೆ.