ಉತ್ತರ ಕನ್ನಡ ಜಿಲ್ಲೆಯ ಅರಣ್ಯ ಸಂಚಾರಕ್ಕೆ ಜಿಲ್ಲಾಡಳಿತ ಸ್ಪಷ್ಠ ಮಾರ್ಗಸೂಚಿ ರಚನೆಗೆ ಸಿದ್ಧತೆ ನಡೆಸಿದೆ. ಎಲ್ಲೆಂದರಲ್ಲಿ ಕಾಡು ಸುತ್ತಿ ದಾರಿ ತಪ್ಪುವವರ ಸಂಖ್ಯೆ ತಪ್ಪಿಸುವುದಕ್ಕಾಗಿ 32 ಚಾರಣ ದಾರಿಯ ನಕ್ಷೆಯನ್ನು ಜಿಲ್ಲಾಡಳಿತ ಸಿದ್ಧಪಡಿಸಿದೆ. ಪ್ರವಾಸೋದ್ಯಮ ಅಭಿವೃದ್ದಿಯ ಜೊತೆ ಸುರಕ್ಷಿತ ಚಾರಣ ನಡೆಸುವವರಿಗೆ ಉತ್ತೇಜನ ನೀಡಲು ಜಿಲ್ಲಾಡಳಿತ ಆಸಕ್ತಿವಹಿಸಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಪರಿಸರ ಪ್ರವಾಸೋದ್ಯಮಕ್ಕೆ ಸಾಕಷ್ಟು ಅವಕಾಶಗಳಿವೆ. ಸಾಹಸ ಪ್ರವಾಸೋದ್ಯಮಗಳಿಗಾಗಿ ಇಲ್ಲಿ ಸಾವಿರಾರು ಜನ ಬರುತ್ತಾರೆ. ಆದರೆ, ಕಾಡಿನ ದಾರಿ ಅರಿವಿಲ್ಲದಿರುವಿಕೆ, ಸೂಕ್ತ ಮಾರ್ಗದರ್ಶಿಗಳ ಕೊರತೆ, ಮಾಹಿತಿ ನೀಡುವವರ ಅಭಾವದಿಂದ ಪ್ರವಾಸೋದ್ಯಮದ ಮುಖ ತೆರೆದುಕೊಂಡಿಲ್ಲ. ಈ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಠಿಗೆ ಅಪಾರ ಅವಕಾಶವಿದ್ದರೂ, ಅದಕ್ಕೆ ಯಾರೂ ಒತ್ತು ನೀಡಿಲ್ಲ.
ಸದ್ಯ, ಉತ್ತರ ಕನ್ನಡ ಜಿಲ್ಲಾಡಳಿತ ಪರಿಸರ ಪ್ರವಾಸೋದ್ಯಮದ ಮೂಲಕ ಪ್ರವಾಸಿಗರನ್ನು ಆಕರ್ಷಿಸಲು ತಯಾರಿ ನಡೆಸಿದೆ. ವಿವಿಧ ಅರಣ್ಯ ವಿಭಾಗಗಳಲ್ಲಿ ಒಟ್ಟು 32 ಚಾರಣ ಪಥಗಳನ್ನು ಗುರುತಿಸಲಾಗಿದೆ. ಅವುಗಳಲ್ಲಿ ಚಾರಣಿಗರ ಸಂಚಾರಕ್ಕೆ ಅಧಿಕೃತವಾಗಿ ಅವಕಾಶ ಮಾಡಿಕೊಡುವ ಸಂಬoಧ ಯೋಜನೆ ಸಿದ್ಧಗೊಂಡಿದೆ. ಪಶ್ಚಿಮ ಘಟ್ಟದ ಗಿರಿ ಕಂದರಗಳು, ಬೇಸಿಗೆಯಲ್ಲೂ ಹರಿಯುವ ನದಿಗಳು, ಸಮುದ್ರದ ತಡಿ ವಿಶಿಷ್ಟ ಜೀವ ಸಂಕುಲಗಳನ್ನು ಪ್ರಪಂಚಕ್ಕೆ ಪರಿಚಯಿಸುವ ತಯಾರಿ ಜೋರಾಗಿ ನಡೆದಿದೆ.
ಸಾತೊಡ್ಡಿ ಜಲಪಾತ, ಯಾಣ, ಸಿಂಥೇರಿ ರಾಕ್’ನ್ನು ಒಳಗೊಂಡು ಕರಾವಳಿಯ ಕಡಲತೀರಗಳು ಜಗತ್ತಿನ ಎಲ್ಲಡೆ ಪ್ರಸಿದ್ಧಿ ಪಡೆದಿದೆ. ಇವುಗಲ ವೀಕ್ಷಣೆಗೆ ಪ್ರವಾಸಿಗರು ಆಗಮಿಸಿದರೂ, ಪರಿಸರ ಪೂರಕ ಚಟುವಟಿಕೆಗಳು ಸರಿಯಾಗಿಲ್ಲ. ಅವುಗಳನ್ನು ಶಿಸ್ತುಬದ್ಧವನ್ನಾಗಿಸುವ ಜೊತೆ ಪ್ರವಾಸಿಗರನ್ನು ಆಕರ್ಷಿಸುವ ಉದ್ದೇಶ ಜಿಲ್ಲಾಡಳಿತಕ್ಕಿದೆ.
ಪ್ರವಾಸಿಗರು ಯಾವುದೇ ಇಲಾಖೆಗಳಿಗೆ ಮಾಹಿತಿ ನೀಡದೇ ಕಾಡಿನಲ್ಲಿ ಚಾರಣ ಮಾಡುವುದು ಸಹ ವಿವಿಧ ಇಲಾಖೆಗೆ ದೊಡ್ಡ ತಲೆನೋವಾಗಿದೆ. ಅದನ್ನು ತಪ್ಪಿಸಲು ಮಾರ್ಗದರ್ಶಿ ಕೈಪಿಡಿ ಬಿಡುಗಡೆ ಮಾಡುವ ಸಾಧ್ಯತೆಗಳು ಇವೆ. ಜಲಪಾತಗಳಲ್ಲಿ ಬಿದ್ದು ಪ್ರವಾಸಿಗರು ಸಾವನ್ನವುವುದು, ಕಾಡಿನ ನಡುವೆ ಸಿಲುಕಿ ಮರಳಲು ಮಾರ್ಗ ತಿಳಿಯದೇ ತೊಂದರೆಗಾಗುವುದನ್ನು ತಪ್ಪಿಸಲು ಯೋಜನೆ ರೂಪಿಸಲಾಗುತ್ತಿದೆ. ಕಾಡಿನಲ್ಲಿ ಗಿಡ, ಮರಗಳಿಗೆ ಹಾನಿ ಮಾಡುವುದು, ಕಾಡು ಪ್ರಾಣಿಗಳ ಬೇಟೆ, ಬೆಂಕಿ ಹಚ್ಚುವುದು, ಪ್ಲಾಸ್ಟಿಕ್‌ನಂಥ ಅಪಾಯಕಾರಿ ತ್ಯಾಜ್ಯಗಳನ್ನು ಎಸೆಯುವುದು, ಜಲಮೂಲಗಳನ್ನು ಮಲಿನ ಮಾಡುವುದು, ಬಂಡೆಗಳ ಮೇಲೆ ಚಿತ್ರಕಲೆ ಮುಂತಾದ ಹಲವು ವಿಕೃತಿಗಳ ತಡೆಯ ಬಗ್ಗೆಯೂ ಅರಿವು ಮೂಡಿಸಲಾಗುತ್ತಿದೆ.
ಇನ್ನೂ ದಾಂಡೇಲಿ, ಶಿರಸಿ, ಯಲ್ಲಾಪುರ ಸೇರಿ ಹಲವೆಡೆ ರೆಸಾರ್ಟ್, ಹೋಂ ಸ್ಟೇ ಮುಂತಾದವುಗಳ ಪ್ರವಾಸೋದ್ಯಮಿಗಳು ಕಾಡಿನಲ್ಲಿ ಪ್ರವಾಸಿಗರಿಗೆ ಚಾರಣ ಮಾಡಿಸುತ್ತಿದ್ದಾರೆ. ಆದರೆ, ಇದರಿಂದ ಸರ್ಕಾರಕ್ಕೆ ದೊಡ್ಡ ಆದಾಯವೂ ಇಲ್ಲ. ಅವರ ಮೇಲೆ ನಿಯಂತ್ರಣವೂ ಇಲ್ಲ. ಚಾರಣಿಗರು ಅಪಾಯಕ್ಕೆ ಸಿಲುಕಿದಾಗ ಮಾತ್ರ ಸರ್ಕಾರಿ ನೆರವು ಯಾಚಿಸುತ್ತಿದ್ದು, ಅರಣ್ಯ ಇಲಾಖೆ ಗುರುತಿಸಿದ ಚಾರಣ ಪಥದಲ್ಲಿ ಮಾತ್ರ ಚಾರಣ ನಡೆಸಲು ಅವಕಾಶ ನೀಡುವ ಸಿದ್ಧತೆ ನಡೆದಿದೆ. ಇದರಿಂದ ಪ್ರತಿ ಪ್ರವಾಸಿಗರ ಚಲನ-ವಲನದ ಬಗ್ಗೆ ಸರ್ಕಾರಕ್ಕೂ ಲೆಕ್ಕ ಸಿಗಲಿದೆ.
ಪ್ರವಾಸಿ ಮಾರ್ಗದರ್ಶಿ ನೇಮಕಕ್ಕಾಗಿ ಈಗಾಗಲೇ ಹಲವು ಪರಿಸರಾಸಕ್ತರಿಗೆ ಅರಣ್ಯ ಇಲಾಖೆಯಿಂದ ತರಬೇತಿ ನೀಡಲಾಗಿದೆ. `ನೇಚರ್ ಗೈಡ್’ ಹೆಸರಿನ ಈ ಮಾರ್ಗದರ್ಶಕರು ಈ ಚಾರಣ ಮಾರ್ಗದಲ್ಲಿ ಅರಿವು ಮೂಡಿಸಲಿದ್ದಾರೆ. ಅರಣ್ಯದ ವಿಶೇಷಗಳ ಬಗ್ಗೆಯೂ ಅವರು ಚಾರಣಿಗರಿಗೆ ಮಾಹಿತಿ ನೀಡಲಿದ್ದಾರೆ. ಇನ್ನೂ, ಕಾಳಿ ಹುಲಿ ಸಂರಕ್ಷಿತ ಅಭಯಾರಣ್ಯದಲ್ಲಿ ಸಹ ಚಾರಣ ಪಥಗಳನ್ನು ಗುರುತಿಸಿ, ಅಲ್ಲಿ ಪ್ರವಾಸಿಗರ ಸಂಚಾರಕ್ಕೆ ಅನುಮತಿ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ, ಅದಕ್ಕೆ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಒಪ್ಪಿಗೆ ಕೊಟ್ಟಿಲ್ಲ.