ಅರಣ್ಯ ಹಕ್ಕು ಅರ್ಜಿ ಸಲ್ಲಿಸಿ ಪಟ್ಟಾಗಾಗಿ ಕಾದಿರುವ ಜನರ ಕ್ಷೇತ್ರದಲ್ಲಿಯೂ ಅರಣ್ಯ ಸಿಬ್ಬಂದಿ ಗಿಡ ನೆಡುವ ತಯಾರಿ ನಡೆಸಿದ್ದಾರೆ. ಇದಕ್ಕಾಗಿ ಹೊನ್ನಾವರದ ಕೆಲವು ಕಡೆ ಗುಂಡಿ ತೋಡಿರುವುದು ಗಮನಕ್ಕೆ ಬಂದಿದೆ.
ಅನೇಕ ವರ್ಷಗಳಿಂದ ಅರಣ್ಯ ಭೂಮಿ ಸಾಗುವಳಿ ಮಾಡಿದ ಅತಿಕ್ರಮಣದಾರರು ಅರಣ್ಯ ಹಕ್ಕು ಪಟ್ಟಾ ವಿತರಣೆಗಾಗಿ ಹೋರಾಟ ನಡೆಸುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಅತಿಕ್ರಮಣ ಕ್ಷೇತ್ರವನ್ನು ಸರ್ಕಾರ ಜಿಪಿಎಸ್ ಪ್ರಕ್ರಿಯೆಗೆ ಒಳಪಡಿಸಿದೆ. ಸದ್ಯ ತಲತಲಾಂತರದಿ0ದ ಉಳುಮೆ ಮಾಡಿ ಬದುಕುತ್ತಿರುವ ಜನರ ಹೊಲ-ಗದ್ದೆಗಳಲ್ಲಿ ಅರಣ್ಯ ಸಿಬ್ಬಂದಿ ಗುಂಡಿ ತೋಡಿದ್ದಾರೆ.
ಹೊನ್ನಾವರ ತಾಲೂಕಿನ ಮಾಗೋಡ, ಜಲವಳ್ಳಿ, ಕರ್ಕಿ, ಹಡಿನಬಾಳ ಮೊದಲಾದ ಕಡೆ ಗುಂಡಿ ತೋಡಿರುವುದು ಕಾಣಿಸುತ್ತಿದೆ. ಈ ಭಾಗದಲ್ಲಿ ಅರಣ್ಯವಾಸಿಗಳು ನೆಟ್ಟ 30 ವರ್ಷ ಹಿಂದಿನ ಗೇರು ಮರಗಳಿದ್ದರೂ ಅದನ್ನು ಲೆಕ್ಕಿಸದೇ ಅರಣ್ಯ ಇಲಾಖೆಯವರು ಹೊಸ ಗಿಡ ನಾಟಿಗಾಗಿ ಗುಂಡಿ ತೆಗೆಯುತ್ತಿದ್ದಾರೆ. ಕಳೆದ ಮೂರು ವಾರಗಳಿಂದ ಈ ಕೆಲಸ ನಡೆಯುತ್ತಿದೆ. ಮಳೆಗಾಲಕ್ಕೂ ಮುನ್ನ ಇಲ್ಲಿ ಅರಣ್ಯ ಜಾತಿಯ ಗಿಡಗಳನ್ನು ನಾಟಿ ಮಾಡುವ ತಯಾರಿ ಬರದಿಂದ ಸಾಗಿದೆ.
`ಕಳೆದ ಸಲ ಗುಂಡಿ ತೆಗೆದು ಗಿಡ ನಾಟಿ ಮಾಡಿದ ಸ್ಥಳದಲ್ಲಿಯೇ ಈ ಬಾರಿ ಮತ್ತೆ ಗುಂಡಿ ತೋಡಿ ಗಿಡ ನೆಡುವ ಪ್ರಯತ್ನ ನಡೆದಿದೆ. ನಡುತೋಪುಗಳ ಮಾಹಿತಿ ಪ್ರಕಟಿಸಲು ಅರಣ್ಯಾಧಿಕಾರಿಗಳ ಬಳಿ ಪ್ರಶ್ನಿಸಲಾಗಿದೆ’ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದ್ದಾರೆ.
ಉತ್ತರ ಕನ್ನಡ | ಬೆಳಕಿಗೆ ಬಂದಿತು ಇನ್ನೊಂದು ಫೈನಾನ್ಸ್ ಹಗರಣ!
ಕುಮಟಾದ ಸ್ಪಂದನಾ ಸ್ಪೂರ್ತಿ ಫೈನಾನ್ಸಿನಲ್ಲಿ ಬ್ರಾಂಚ್ ಮ್ಯಾನೇಜರ್ ಆಗಿದ್ದ ಗಣೇಶ ನಾಯಕ ಅವರು ಫೈನಾನ್ಸ್ ಕಂಪನಿಗೆ 17.79 ಲಕ್ಷ ರೂ ವಂಚಿಸಿ ಪರಾರಿಯಾಗಿದ್ದಾರೆ.
ಭಟ್ಕಳದ ಮುಟ್ಟಳ್ಳಿಯ ಗಣೇಶ ನಾಯಕ ಅವರು ಕುಮಟಾ ಶಾಖೆಯಲ್ಲಿ ಕೆಲಸಕ್ಕಿದ್ದರು. ಕುಮಟಾದ ಅಳ್ವೆಕೊಡಿಯ ಮಾರುತಿ ಶೋ ರೂಂ ಬಳಿಯಿರುವ ಸ್ಪಂದನಾ ಸ್ಪೂರ್ತಿ ಫೈನಾನ್ಸಿಗೆ ಅವರನ್ನು ಬ್ಯಾಂಚ್ ಮ್ಯಾನೇಜರ್ ಆಗಿ ಕಂಪನಿ ನೇಮಿಸಿತ್ತು. 2025ರ ಫೆಬ್ರವರಿ 10ರಂದು ಅವರು ಬ್ಯಾಂಕಿನ ಲಾಕರಿನಲ್ಲಿದ್ದ ಎರಡುವರೆ ಲಕ್ಷ ರೂ ಹಣ ಎಗರಿಸಿದ್ದರು. ನಂತರ ಸರಿಯಾಗಿ ಲೆಕ್ಕಾಚಾರ ಮಾಡಿದಾಗ 256426ರೂ ಹಣ ಕಾಣೆಯಾಗಿರುವುದು ಗಮನಕ್ಕೆ ಬಂದಿತ್ತು.
ಅದಾದ ನಂತರ ಇನ್ನಷ್ಟು ಹಗರಣಗಳು ಹೊರಬಿದ್ದಿತು. ಗ್ರಾಹಕರು ಸಾಲ ಮರುಪಾವತಿ ಮಾಡಿದ ಹಣದಲ್ಲಿಯೂ ವ್ಯತ್ಯಾಸವಾಯಿತು. ಆ ಲೆಕ್ಕಾಚಾರ ಗಮನಿಸಿದಾಗ 1522724ರೂ ಹಣವನ್ನು ಗಣೇಶ ನಾಯಕ ಸ್ವಂತಕ್ಕೆ ಬಳಸಿಕೊಂಡಿರುವುದು ಬೆಳಕಿಗೆ ಬಂದಿತು. ಈ ಹಿನ್ನಲೆ ಸಂಸ್ಥೆಗೆ ಮೋಸ ಮಾಡಿ, ಗ್ರಾಹಕರಿಗೂ ಅನ್ಯಾಯ ಮಾಡಿದ ಬಗ್ಗೆ ಸ್ಪಂದನ ಸ್ಪೂರ್ತಿ ಫೈನಾನ್ಸಿನ ಎವಿಪಿ ಚಂದ್ರಹಾಸ ನಾಯಕ ಕುಮಟಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಗಡಿ ಜಗಳ: ಎಂಟು ತಿಂಗಳ ಹಿಂದಿನ ಬೈಗುಳಕ್ಕೆ ಇದೀಗ ಪೊಲೀಸ್ ಪ್ರಕರಣ!
ಎಂಟು ತಿಂಗಳ ಹಿಂದೆ ನಡೆದ ಭೂ ವ್ಯಾಜ್ಯದ ಬೆದರಿಕೆ ಪ್ರಕರಣ ವಿಷಯವಾಗಿ ದತ್ತ ನಾಯ್ಕ ಅವರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ನ್ಯಾಯಾಲಯದ ಸೂಚನೆ ಮೇರೆಗೆ ಗಣೇಶ ಪಟಗಾರ ಹಾಗೂ ಕುಪ್ಪಯ್ಯ ಪಟಗಾರ ಎಂಬಾತರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕುಮಟಾದ ಬರ್ಗಿಯಲ್ಲಿ ದತ್ತ ನಾಯ್ಕ ಅವರು ವಾಸವಾಗಿದ್ದಾರೆ. ಬರ್ಗಿ ಗ್ರಾಮದ ಸರ್ವೇ ನಂ 36ಎ1/2ಅ ಕ್ಷೇತ್ರಕ್ಕೆ ಅವರು ಬೇಲಿ ನಿರ್ಮಿಸಿಕೊಂಡಿದ್ದು, ಇದನ್ನು ಬರ್ಗಿ ನಾಡವರಕೊಪ್ಪದ ಗಣೇಶ ಪಟಗಾರ ಹಾಗೂ ಕುಪ್ಪಯ್ಯ ಪಟಗಾರ ವಿರೋಧವ್ಯಕ್ತಪಡಿಸಿದ್ದಾರೆ. ಇದೇ ವಿಷಯವಾಗಿ ಅವರ ನಡುವೆ ಜಗಳ ನಡೆದಿದೆ.
2024ರ ಜುಲೈ 7ರಂದು ಗಣೇಶ ಪಟಗಾರ ಹಾಗೂ ಕುಪ್ಪಯ್ಯ ಪಟಗಾರ ಸೇರಿ ದತ್ತ ನಾಯ್ಕ ಅವರು ನಿರ್ಮಿಸಿದ ಬೇಲಿಯನ್ನು ನಾಶ ಮಾಡಿದ್ದಾರೆ. ಈ ಬಗ್ಗೆ ಪ್ರಶ್ನಿಸಿದ ದತ್ತಾ ನಾಯ್ಕ ಅವರಿಗೆ ಬೆದರಿಸಿದ್ದಾರೆ. `ಇದು ನಮ್ಮ ಜಾಗ’ ಎಂದು ಗಣೇಶ ಪಟಗಾರ ಹಾಗೂ ಕುಪ್ಪಯ್ಯ ಪಟಗಾರ ವಾದಿಸಿದ್ದಾರೆ. ಗಡಿ ಜಗಳವಾಗಿ ನ್ಯಾಯಾಲಯದಲ್ಲಿ ಸಿವಿಲ್ ಪ್ರಕರಣ ಬಾಕಿಯಿದ್ದು, ಈ ಅವಧಿಯಲ್ಲಿ ಬೇಲಿ ಕಡಿಯದಂತೆ ತಿಳಿಸಿದರೂ ಬೇಲಿ ಹಾಳು ಮಾಡಿದ ಕಾರಣ ದತ್ತಾ ನಾಯ್ಕ ಸಹ ಸಿಟ್ಟಾಗಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದಿದ್ದು ಗಣೇಶ ಪಟಗಾರ ಹಾಗೂ ಕುಪ್ಪಯ್ಯ ಪಟಗಾರ ಸೇರಿ `ಇಲ್ಲಿ ಬೇಲಿ ನಿರ್ಮಿಸಿದರೆ ಕಡಿದು ಹಾಕುವೆ’ ಎಂದು ಎಚ್ಚರಿಕೆ ನೀಡಿದ್ದಾರೆ.
ಈ ವಿಷಯವಾಗಿ ಕುಮಟಾ ನ್ಯಾಯಾಲಯದ ಮೊರೆ ಹೋದ ದತ್ತ ನಾಯ್ಕ ಅವರು ಎಂಟು ತಿಂಗಳ ಅಲೆದಾಟ ನಡೆಸಿ ಗಣೇಶ ಪಟಗಾರ ಹಾಗೂ ಕುಪ್ಪಯ್ಯ ಪಟಗಾರ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸಿದ್ದಾರೆ. ನ್ಯಾಯಾಲಯದ ಸೂಚನೆ ಮೇರೆಗೆ ಗೋಕರ್ಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಶುರು ಮಾಡಿದ್ದಾರೆ.