ಭಟ್ಕಳ ತಾಲೂಕಿನ ಮುಂಡಳ್ಳಿಯ ನೀರಗದ್ದೆಯಲ್ಲಿ ವ್ಯಾಪಕ ಪ್ರಮಾಣದಲ್ಲಿ ಚೀರೆಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಯಾವುದೇ ಪರವಾನಿಗೆ ಪಡೆಯದೇ ರಾಜಾರೋಷವಾಗಿ ಕೆಂಪು ಕಲ್ಲು ತೆಗೆಯುವ ಕೆಲಸದ ಬಗ್ಗೆ ಸಾರ್ವಜನಿಕರು ದೂರಿದರೂ, ಸರ್ಕಾರ ಮಾತ್ರ ಪತ್ರ ವ್ಯವಹಾರದಲ್ಲಿಯೇ ಪ್ರಕರಣ ಮುಗಿಸುವ ಲಕ್ಷಣ ಕಾಣಿಸುತ್ತಿದೆ.
ಇಲ್ಲಿನ ಸರ್ವೆ ನಂಬರ 207/2 ಹಾಗೂ ಸುತ್ತಲಿನ ಪ್ರದೇಶದಲ್ಲಿ ಅನೇಕ ವರ್ಷಗಳಿಂದ ಕಲ್ಲು ತೆಗೆಯಲಾಗುತ್ತಿದೆ. ಈ ಬಗ್ಗೆ ಅಲ್ಲಿನ ಜನ ಜಿಲ್ಲಾಡಳಿತಕ್ಕೆ ದೂರು ಸಲ್ಲಿಸಿದ್ದು, ಗಣಿ ಇಲಾಖೆಯವರು ಭೇಟಿ ನೀಡಿದ್ದಾರೆ. ಕಂದಾಯ ಅಧಿಕಾರಿಗಳು ಸಹ ಭೇಟಿ ನೀಡಿದ್ದು, 15 ಗುಂಟೆ ಜಾಗದಲ್ಲಿ ಕಲ್ಲು ತೆಗೆದಿರುವ ಬಗ್ಗೆ ವರದಿ ಸಲ್ಲಿಸಿದ್ದಾರೆ. ಪೊಲೀಸರು ಸಹ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೆ, ತಪ್ಪಿತಸ್ಥರ ಬಗ್ಗೆ ಕ್ರಮ ಜರುಗಿಸುವ ಬದಲು ಒಂದು ಇಲಾಖೆಯಿಂದ ಇನ್ನೊಂದು ಇಲಾಖೆಗೆ ಪತ್ರ ಬರೆಯುವ ಕೆಲಸ ಮಾತ್ರ ನಡೆಯುತ್ತಿದೆ.
ಈ ನಡುವೆ ಆ ಭೂಮಿಯ ಮಾಲಕ ಪ್ರವೀಣ ಕಿಣಿ ಎಂಬಾತರು `ಈ ಭೂಮಿಯನ್ನು ನಾನು ಅರ್ಜುನ್ ಎಂಬಾತರಿಗೆ ಸಮದಟ್ಟು ಮಾಡಿಕೊಡುವಂತೆ ತಿಳಿಸಿದ್ದೇನೆ. ಅವರೇ ಅಲ್ಲಿ ಗಣಿಗಾರಿಕೆ ನಡೆಸುತ್ತಿದ್ದಾರೆ’ ಎಂದು ಪೊಲೀಸ್ ದೂರು ನೀಡಿದ್ದಾರೆ. ಪೊಲೀಸರು ಆ ದೂರಿನ ಅನ್ವಯ ಗಣಿ ಇಲಾಖೆಗೆ ಪತ್ರ ಬರೆದಿದ್ದಾರೆ. ಗಣಿ ಇಲಾಖೆಯವರು ಪೊಲೀಸರಿಗೆ ಮತ್ತೊಂದು ಪತ್ರ ಬರೆದಿದ್ದಾರೆ. ಆದರೆ, ಯಾರಿಂದಲೂ ಅಕ್ರಮ ನಡೆಸಿದವರ ವಿರುದ್ಧ ಕಠಿಣ ಕ್ರಮ ಜರುಗಿಸಲು ಸಾಧ್ಯವಾಗಿಲ್ಲ. ಅಧಿಕಾರಿಗಳು ದಾಳಿ ನಡೆಸಿದಾಗ ಅಕ್ರಮ ಚಟುವಟಿಕೆಗೆ ಸಹಕರಿಸಿದ ಯಂತ್ರಗಳು ಸ್ಥಳದಲ್ಲಿದ್ದವು. ಆದರೆ, ಅದನ್ನು ಯಾರೂ ವಶಕ್ಕೆ ಪಡೆಯಲಿಲ್ಲ.
ಇಲ್ಲಿನ ಕೆಂಪು ಕಲ್ಲು ಗಣಿಗಾರಿಕೆಯಿಂದ ಸರ್ಕಾರಕ್ಕೂ ರಾಜಧನ ಪಾವತಿ ಆಗಿಲ್ಲ. ಅಕ್ರಮ ಚಿರೇ ಕಲ್ಲು ಗಣಿಗಾರಿಕೆ ದಂದೆ ನಡೆಯುವ ಪ್ರದೇಶದಲ್ಲಿ ನೂರಾರು ಮನೆಗಳಿದ್ದು, ಅಲ್ಲಿನವರಿಗೂ ನೆಮ್ಮದಿಯಿಲ್ಲ. ಸಮೀಪದ ಸರ್ಕಾರಿ ಪ್ರೌಢಶಾಲೆ ಮಕ್ಕಳಿಗೆ ಸಹ ಸಮಸ್ಯೆ ತಪ್ಪಿಲ್ಲ. ಇಲ್ಲಿ ಜೋರಾಗಿ ಓಡಾಡುವ ಲಾರಿಗಳಿಗೆ ಕಡಿವಾಣ ಹಾಕಿ ಎಂದು ಜನ ಬೊಬ್ಬೆ ಹೊಡೆದರೂ ಅದನ್ನು ಯಾರೂ ಕೇಳಿಸಿಕೊಂಡಿಲ್ಲ.
ಅಲ್ಲಿಯೂ ಅಕ್ರಮ.. ಇಲ್ಲಿಯೂ ಅಕ್ರಮ: ದೂರು ನೀಡಿದವರ ವಿರುದ್ಧವೇ ಕಾನೂನುಬಾಹಿರ ಕ್ರಮ!
`ಯಲ್ಲಾಪುರದ ಕಳಚೆ ಭೂ ಕುಸಿತ ಪರಿಣಾಮ ಸರ್ಕಾರ 15 ಕೋಟಿ ರೂ ಅನುದಾನ ನೀಡಿದ್ದು, ಅದನ್ನು ಕಳಚೆಹೊರತುಪಡಿಸಿ ಬೇರೆ ಬೇರೆ ಗ್ರಾಮಗಳಿಗೆ ಬಳಸಲಾಗಿದೆ. ಆ ಅನುದಾನ ಬಳಕೆಯಲ್ಲಿ ಸಹ ಅಕ್ರಮ ನಡೆದಿದೆ’ ಎಂದು ಆರ್‌ಟಿಐ ಕಾರ್ಯಕರ್ತ ಧೀರಜ್ ತಿನೇಕರ್ ದೂರಿದ್ದಾರೆ. `ಈ ಬಗ್ಗೆ ತಾನು ಲೋಕಾಯುಕ್ತ ದೂರು ನೀಡಿದ್ದು, ತನಿಖೆ ವೇಳೆ 30ಕ್ಕೂ ಅಧಿಕ ಜನ ತಮ್ಮ ಮೇಲೆ ಹಲ್ಲೆಗೆ ಆಗಮಿಸಿದ್ದರು. ಈ ಬಗ್ಗೆಯೂ ಪೊಲೀಸ್ ದೂರು ನೀಡಿದ್ದೇನೆ’ ಎಂದವರು ಹೇಳಿದ್ದಾರೆ.
ಯಲ್ಲಾಪುರದಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು `ಕಳೆದ ಮೂರು ವರ್ಷಗಳ ಹಿಂದೆ ಪೃಕೃತಿ ವಿಕೋಪದಡಿಯಲ್ಲಿ ಮಂಜೂರಾದ ಕಾಮಗಾರಿಗಳಲ್ಲಿ ಅವ್ಯವಹಾರ ನಡೆದಿದೆ. ಈ ಬಗ್ಗೆ ದಾಖಲೆಗಳ ಜೊತೆ ಲೋಕಾಯುಕ್ತರಿಗೆ ದೂರು ನೀಡಲಾಗಿದ್ದು, ಏಪ್ರಿಲ್ 7ರಂದು ಲೋಕಾಯುಕ್ತ ಅಧಿಕಾರಿ ಅಶೋಕ ಎಂಬಾತರು ದೇಹಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಗೆ ತನಿಖೆಗೆ ಬಂದಿದ್ದರು. ಆ ವೇಳೆ ತನ್ನನ್ನು ಸ್ಥಳಕ್ಕೆ ಕರೆಯಲಾಗಿದ್ದು, ದೂರುದಾರನಾದ ನನ್ನ ಮೇಲೆ ಅಲ್ಲಿನ ಕೆಲವರು ದಾಳಿಗೆ ಮುಂದಾದರು’ ಎಂದು ಧೀರಜ್ ತಿನ್ನೇಕರ್ ವಿವರಿಸಿದರು.
`ಅಲ್ಲಿ ನಡೆದ ರಸ್ತೆ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದೆ. ಕ್ರಿಯಾ ಯೋಜನೆ ಪ್ರಕಾರ ರಸ್ತೆ ಮಾಡದೇ ಹಣ ಹೊಡೆಯಲಾಗಿದೆ. ಒಂದೇ ರಸ್ತೆಗೆ ಬೇರೆ ಬೇರೆ ಬಿಲ್ ಅಳವಡಿಸಿ ಅವ್ಯವಹಾರ ನಡೆಸಲಾಗಿದೆ. ಅಗತ್ಯವಿರುವಲ್ಲಿ ಪೈಪ್ ಅಳವಡಿಸದೇ ಪೈಪ್ ಅಳವಡಿಸಿರುವ ದಾಖಲೆ ಸೃಷ್ಠಿಸಿ ಸರ್ಕಾರಕ್ಕೆ ವಂಚಿಸಲಾಗಿದೆ’ ಎಂದು ದೂರಿದರು. `ತನ್ನ ಮೇಲೆ ಹಲ್ಲೆಗೆ ಬಂದ ಜನ ಗುತ್ತಿಗೆದಾರ ಗಣಪತಿ ಮುದ್ದೆಪಾಲ ಅವರಿಗೆ ಜೈಕಾರ ಹಾಕುತ್ತಿದ್ದು, ಅವರ ಕುಮ್ಮಕ್ಕಿನಲ್ಲಿ ಈ ಘಟನೆ ನಡೆದಿರುವುದು ಸ್ಪಷ್ಠವಾಗುತ್ತದೆ. ಲೋಕಾಯುಕ್ತ ತನಿಖೆ ವೇಳೆ ಇಂಜನೀಯರ್ ಅಜೀಜ, ಜಿ ಪಂ ಎಇಇ ಅಶೋಕ ಬಂಟ ಅವರು ಸಹ ಕಾಮಗಾರಿ ನಡೆದ ಸ್ಥಳ ತೋರಿಸಲು ವಿಫಲರಾಗಿದ್ದಾರೆ’ ಎಂದು ದೂರಿದರು.
`ಈ ಹಿನ್ನಲೆಯಲ್ಲಿ ಸರಕಾರದ ಹಣ ದುರುಪಯೋಗ ಮಾಡಿದ ಗುತ್ತಿಗೆದಾರ ಮತ್ತು ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು. ನನ್ನ ಮೇಲೆ ಹಲ್ಲೆಗೆ ಮುಂದಾದವರ ಪೈಲಿ 16 ಜನರ ವಿವಿರವನ್ನು ಪೊಲೀಸರಿಗೆ ನೀಡಿದ್ದು, ಅವರ ವಿರುದ್ಧ ಕ್ರಮವಾಗಬೇಕು’ ಎಂದು ಆಗ್ರಹಿಸಿದರು. ಘಟನಾವಳಿಗೆ ಸಂಬoಧಿಸಿದ ಆಡಿಯೋ ಹಾಗೂ ವಿಡಿಯೋವನ್ನು ಪ್ರದರ್ಶಿಸಿದರು.
ಭೂ ದಾಖಲೆಗಳ ಸಂರಕ್ಷಣೆ: ರಾಜ್ಯಕ್ಕೆ ಮಾದರಿಯಾದ ಹೊನ್ನಾವರ!
ಭೂ ದಾಖಲೆಗಳ ಸಂರಕ್ಷಣೆ ವಿಷಯವಾಗಿ ಸರ್ಕಾರ ಮುತುವರ್ಜಿವಹಿಸಿದ್ದು, ದಾಖಲೆಗಳನ್ನು ಸಂರಕ್ಷಿಸುವಲ್ಲಿ ಹೊನ್ನಾವರ ತಾಲೂಕು ರಾಜ್ಯಕ್ಕೆ ಮಾದರಿಯಾಗಿದೆ. ಈವರೆಗೆ 15,57,896 ಕಡತವನ್ನು ಸಂರಕ್ಷಿಸಿದ ಇಲ್ಲಿನ ಅಧಿಕಾರಿ-ಸಿಬ್ಬಂದಿ ಅವೆಲ್ಲವನ್ನು ಗಣಕಿಯಂತ್ರ ವ್ಯವಸ್ಥೆಯಲ್ಲಿ ಸಿಗುವಂತೆ ಮಾಡಿದ್ದಾರೆ.
ಇಲ್ಲಿ ಕೈಬರಹ ಪಹಣಿ, ಮ್ಯುಟೇಶನ್ ವಹಿ, ಭೂ ಮಂಜೂರಾತಿ ಕಡತಗಳು, ಭೂಪರಿವರ್ತನೆ ಕಡತಗಳು, ಭೂ ಸುಧಾರಣೆ ಕಡತಗಳನ್ನು ಸ್ಕಾನ್ ಮಾಡಿ ಸಂರಕ್ಷಿಸಲಾಗಿದೆ. ಸಾರ್ವಜನಿಕರಿಗೆ ಭೂ ದಾಖಲೆಗಳು ಒಂದು ನಿರ್ಣಾಯಕ ದಾಖಲೆಯಾಗಿದ್ದು, ಅದನ್ನು ಶಾಶ್ವತವಾಗಿ ಕಾಪಾಡಿಕೊಳ್ಳುವ ಪ್ರಯತ್ನ ಮುಂದುವರೆದಿದೆ. ಸಾರ್ವಜನಿಕರಿಗೆ ಅಗತ್ಯವಿರುವ ಭೂ ದಾಖಲೆಗಳನ್ನು ತ್ವರಿತವಾಗಿ ಮತ್ತು ಸುಲಭವಾಗಿ ಒದಗಿಸುವುದು ಬಹಳ ಮುಖ್ಯ ಎಂದು ಅರಿತ ಅಲ್ಲಿನ ಅಧಿಕಾರಿಗಳು ಅನೇಕ ಕೊರತೆಗಳ ನಡುವೆಯೂ ಸಾಧನೆ ಮಾಡಿದ್ದಾರೆ.
ಇಷ್ಟು ದಿನಗಳ ಕಾಲ ಸರಿಯಾದ ಸೂಚ್ಯಂಕದ ಕೊರತೆಯಿಂದಾಗಿ ಸಮಸ್ಯೆಯಾಗಿತ್ತು. ದಾಖಲೆಗಳನ್ನು ಪದೇ ಪದೇ ನಿರ್ವಹಿಸುವಾಗ ತಪ್ಪಾದ ಸ್ಥಳದಲ್ಲಿ ಇಡುವುದರಿಂದ ಪ್ರಮುಖ ದಾಖಲೆಗಳು ಸಿಗುತ್ತಿರಲಿಲ್ಲ. ದಾಖಲೆಯ ಪ್ರತಿಗಾಗಿ ಅರ್ಜಿ ಸಲ್ಲಿಸಿದ ನಂತರ ಜನ ಅನೇಕ ದಿನಗಳವರೆಗೆ ಕಾಯಬೇಕಿತ್ತು. ಆದರೆ, ಇದೀಗ 50 ವರ್ಷ ಹಿಂದಿನ ದಾಖಲೆಗಳನ್ನು ಸಹ ಸಕಾಲದಲ್ಲಿ ಪಡೆಯಲು ಸಾಧ್ಯವಾಗುತ್ತಿದೆ. `ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಈ ಯೋಜನೆಯನ್ನು ಪ್ರಾಯೋಗಿಕವಾಗಿ ಆರಂಭಿಸಲಾಗಿದ್ದು, 12 ತಾಲೂಕಿನಲ್ಲಿಯೂ ಭೂ ಸುರಕ್ಷಾ ಕೆಲಸ ನಡೆಯುತ್ತಿದೆ. ಜನ ಮನೆಯಲ್ಲಿಯೇ ಕುಳಿತು ಅಗತ್ಯ ದಾಖಲೆಪಡೆಯಲು ಈ ಯೋಜನೆ ಅನುಕೂಲವಾಗಲಿದೆ’ ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅನಿಸಿಕೆ ಹಂಚಿಕೊoಡಿದ್ದಾರೆ.
ಬಿಜೆಪಿಯಿಂದ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ಸ್ವಾಗತ!
`ದಿನ ಬಳಕೆ ವಸ್ತುಗಳ ಬೆಲೆ ಏರಿಕೆ ನಡೆಸಿದ ಕೇಂದ್ರ ಬಿಜೆಪಿ ಸರ್ಕಾರವೂ ಇದೀಗ ಬೆಲೆ ಏರಿಕೆ ವಿರುದ್ಧ ಜನಾಕ್ರೋಶ ಯಾತ್ರೆ ನಡೆಸಲು ಸಜ್ಜಾಗಿದೆ. ಈ ಜನಾಕ್ರೋಶ ಯಾತ್ರೆ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿರದೇ, ಎಲ್ಲಾ ರಾಜ್ಯಕ್ಕೂ ಅನ್ವಯಿಸಿದರೆ ಕಾಂಗ್ರೆಸ್ ಅದನ್ನು ಸ್ವಾಗತಿಸುತ್ತದೆ’ ಎಂದು ಯಲ್ಲಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್ ಕೆ ಭಟ್ಟ ಮೆಣಸುಪಾಲ್ ಹೇಳಿದ್ದಾರೆ.
ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು `ಕೇಂದ್ರ ಸರಕಾರ ಪೆಟ್ರೋಲ್, ಸಿಲೆಂಡರ್ ಸೇರಿ ಅಗತ್ಯ ವಸ್ತು ಬೆಲೆ ಏರಿಕೆ ಮಾಡಿದ ಬಗ್ಗೆ ಬಿಜೆಪಿಗರು ಮಾತನಾಡುತ್ತಿಲ್ಲ. ರಾಜ್ಯ ಸರ್ಕಾರ ರೈತರ ಅನುಕೂಲಕ್ಕಾಗಿ ಹಾಲಿನ ಬೆಲೆ ಏರಿಕೆ ಮಾಡಿದರೆ ಅದನ್ನು ಬಿಜೆಪಿ ವಿರೋಧಿಸುತ್ತಿದೆ’ ಎಂದು ಆಕ್ರೋಶವ್ಯಕ್ತಪಡಿಸಿದರು. `ಹಾಲಿನ ದರ ಏರಿಕೆಯಿಂದ ನೇರವಾಗಿ ರೈತರಿಗೆ ಲಾಭವಾಗಿದೆ. ಪ್ರತಿ ಲೀಟರಿಗೆ 4 ರೂ ರೈತರಿಗೆ ಹೆಚ್ಚುವರಿಯಾಗಿ ಸಿಗುತ್ತಿದೆ. ಇದನ್ನು ಸಹಿಸದ ಬಿಜೆಪಿ ರೈತ ವಿರೋಧಿಯಾಗಿದೆ’ ಎಂದು ದೂರಿದರು. `ಬಿಜೆಪಿಗರು ಅಲ್ಪ ಸಂಖ್ಯಾತ ತುಷ್ಠಿಕರಣ ಎಂದು ಹೇಳುತ್ತಾರೆ. ರಂಜಾನ್ ಸಂದರ್ಭದಲ್ಲಿ ಕೇಂದ್ರ ಸರಕಾರ ಮುಸ್ಲಿಮರಿಗೆ ಕೊಡುಗೆ ನೀಡಿದ್ದು, ಬಿಜೆಪಿಗರಿಗೆ ಗೊತ್ತಿಲ್ಲವೇ? ಎಂದು ಪ್ರಶ್ನಿಸಿದರು.
`ಅಲ್ಪ ಸಂಖ್ಯಾತ ಎಂದರೆ ಮುಸ್ಲಿಂ ಮಾತ್ರವಲ್ಲ. ದಡ್ಡ ಪರದೇಶಿ ಬಿಜೆಪಿಗರಿಗೆ ಈ ಸತ್ಯ ಗೊತ್ತಿಲ್ಲ’ ಎಂದು ಟೀಕಿಸಿದರು. `ಈಚೆಗೆ ಆ ಸಮುದಾಯದವರು ಜಾತ್ರೆಯಲ್ಲಿ ಅಂಗಡಿ ಹಾಕುವುದು ಬೇಡ. ಈ ಸಮುದಾಯದವರ ಬಳಿ ವ್ಯಾಪಾರ ಬೇಡ ಎನ್ನುವ ವಾದ ಹೆಚ್ಚಾಗಿದೆ. ಮಸೀದಿ ಮುಂದೆ ಹನುಮಾನ್ ಚಾಲಿಸ್ ಓದುವವರು, ರಸ್ತೆ ಅಂಚಿನಲ್ಲಿ ಭಗವದ್ಗೀತೆ ಪಠಿಸುವವರಿಂದ ಧರ್ಮ ಬೀದಿಗೆ ಬರುವಂತಾಗಿದೆ. ದೇವಾಲಯಗಳಲ್ಲಿಯೇ ಪೂಜೆಗೆ ಅರ್ಚಕರು ಸಿಗದಿರುವಾಗ ಮಸೀದಿಯಲ್ಲಿನ ದೇವಾಲಯ ಹುಡುಕುವ ಅವಶ್ಯಕತೆ ಏನಿದೆ? ಎಂದು ಎನ್ ಕೆ ಭಟ್ಟ ಮೆಣಸುಪಾಲ್ ಪ್ರಶ್ನಿಸಿದರು.
ಗ್ಯಾರಂಟಿ ತಾಲೂಕಾ ಅಧ್ಯಕ್ಷ ಉಲ್ಲಾಸ ಶಾನಭಾಗ ಮಾತನಾಡಿ `ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಲು ಕೇಂದ್ರ ಬಿಜೆಪಿ ಕಾರಣ. ಅಭಿವೃದ್ದಿ ಸಾಧನೆ ಆಧಾರದಲ್ಲಿ ಪಕ್ಷ ಬೆಳಸುವ ಬದಲು ಧರ್ಮ ಧರ್ಮದ ನಡುವೆ ಕಿಚ್ಚು ಹಚ್ಚುವ ಪ್ರಯತ್ನ ಸರಿಯಲ್ಲ’ ಎಂದು ಅಸಮಾಧಾನ ಹೊರಹಾಕಿದರು. ರವಿ ಭಟ್ಟ ಬರಗದ್ದೆ ಮಾತನಾಡಿ `ಧರ್ಮ ರಾಷ್ಟ್ರೀಯತೆ ಪ್ರಜ್ಞೆ ಎಂಬುದು ಬಿಜೆಪಿಗರಿಗೆ ಮಾತ್ರ ಸೀಮಿತವಲ್ಲ’ ಎಂದರು. ಪ್ರಶಾಂತ ಸಭಾಹಿತ ಮಾತನಾಡಿ `ಹಾಲು ದರ ಏರಿಸಿದ್ದರಿಂದ ರೈತರಿಗೆ ಲಾಭವಾಗಿದೆ’ ಎಂದು ಪುನರುಚ್ಚರಿಸಿದರು. ಕಾಂಗ್ರೆಸ್ ಪ್ರಮುಖರಾದ ಟಿ ಸಿ ಗಾಂವ್ಕಾರ, ವಿ ಎಸ್ ಭಟ್ಟ, ಮುಶರತ್ ಖಾನ್ ಇದ್ದರು.