ಆರ್ಥಿಕ ಪರಿಸ್ಥಿತಿಯ ಅನಾನುಕೂಲತೆ ನಡುವೆಯೂ ಧನಗರಗೌಳಿ ಸಮಾಜದ ಲಕ್ಷ್ಮೀ ಪಾಂಡ್ರಮಿಸೆ ಅವರು ಪಿಯುಸಿ ಪರೀಕ್ಷೆಯಲ್ಲಿ ಮಹತ್ವದ ಸಾಧನೆ ಮಾಡಿದ್ದಾರೆ. ಈಚೆಗೆ ಪ್ರಕಟವಾದ ಪಿಯು ಪರೀಕ್ಷೆಯಲ್ಲಿ ಲಕ್ಷ್ಮೀ ಪಾಂಡ್ರಮಿಸೆ ಅವರು ಶೇ 91.5ರ ಫಲಿತಾಂಶ ದಾಖಲಿಸಿದ್ದಾರೆ.
ಲಕ್ಷ್ಮೀ ಪಾಂಡ್ರಮಿಸೆ ಅವರು ಯಲ್ಲಾಪುರ ತಾಲೂಕಿನ ಕಿರವತ್ತಿ ಬಳಿಯ ಖಾರೆವಾಡದವರು. ಬಾಲ್ಯದಿಂದಲೂ ಪ್ರತಿಭಾನ್ವಿತ ವಿದ್ಯಾರ್ಥಿನಿ. ಓದಿನ ಜೊತೆ ಆಟ-ಓಟಗಳಲ್ಲಿ ಸಹ ಲಕ್ಷ್ಮೀ ಸಾಕಷ್ಟು ಸಾಧನೆ ಮಾಡಿದ್ದಾರೆ. ಸಾಪ್ಟವೇರ್ ಇಂಜಿನಿಯರ್ ಆಗಬೇಕು ಎಂಬುದು ಅವರ ಕನಸು. ಆದರೆ, ಮನೆಯಲ್ಲಿನ ಬಡತನವೇ ಅವರಿಗೆ ಮೊದಲ ಶತ್ರು. ಲಕ್ಷ್ಮೀ ಅವರಿಗೆ ತಂದೆ ಇಲ್ಲ. ಹೀಗಾಗಿ ತಾಯಿ ಸವಿತಾ ಪಾಂಡ್ರಮಿಸೆ ಅವರೇ ಲಕ್ಷ್ಮೀ ಅವರಿಗೆ ಆಸರೆ. ಹಾಸ್ಟೇಲಿನಲ್ಲಿ ಓದಿದ ಲಕ್ಷ್ಮೀ ಪಾಂಡ್ರಮಿಸೆ ಬಡತನ ದೂರ ಮಾಡುವುದಕ್ಕಾಗಿ ರಜಾ ಅವಧಿಯಲ್ಲಿ ತಾಯಿ ಜೊತೆ ಕೂಲಿ ಕೆಲಸಕ್ಕೆ ಹೋದ ದಿನಗಳು ಸಾಕಷ್ಟಿವೆ. ಆದರೆ, ಬಡತನ ಮಾತ್ರ ದೂರವಾಗಿರಲಿಲ್ಲ.
ಓದಿನ ಬಗ್ಗೆ ಅಪಾರ ಆಸಕ್ತಿ ಬೆಳೆಸಿಕೊಂಡಿರುವ ಲಕ್ಷ್ಮೀ ಪಾಂಡ್ರಮಿಸೆ ಅವರು ಬಡತನದ ಬಗ್ಗೆ ಹೆಚ್ಚಿಗೆ ತಲೆಕೆಡಿಸಿಕೊಳ್ಳಲಿಲ್ಲ. ಲಕ್ಷ್ಮೀ ಪಾಂಡ್ರಮಿಸೆ ಅವರ ಅಣ್ಣ ಭರತ್ ಸಹ ಕೂಲಿ ಕೆಲಸ ಮಾಡಿ ಸಹೋದರಿಯ ಓದಿಗೆ ನೆರವಾದರು. ಮುರಾರ್ಜಿ ದೇಸಾಯಿ ಹೈಸ್ಕೂಲಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಎದುರಿಸಿದ ಅವರು ಆಗಲೂ ಶೇ 92.23ರ ಸಾಧನೆ ಮಾಡಿದ್ದರು. ತಂಗಿಗೆ ಉನ್ನತ ಶಿಕ್ಷಣ ಕೊಡಿಸಬೇಕು ಎಂಬುದು ಆ ಕುಟುಂಬದವರ ಬಯಕೆ. ಹೀಗಾಗಿ ಲಕ್ಷ್ಮೀ ಪಾಂಡ್ರಮಿಸೆ ಅವರನ್ನು ವಿಶ್ವದರ್ಶನ ವಿದ್ಯಾಲಯಕ್ಕೆ ಸೇರಿಸಿದರು.
ವಿಜ್ಞಾನ ವಿಭಾಗ ಆಯ್ದುಕೊ0ಡ ಅವರು ಪಿಯುಸಿ ಫಲಿತಾಂಶದಲ್ಲಿ ಸಾಧನೆ ಮಾಡಿ, ಊರಿನವರ ಪ್ರೀತಿಗೆ ಪಾತ್ರರಾದರು. ಲಕ್ಷ್ಮೀ ಪಾಂಡ್ರಮಿಸೆ ಅವರ ಸಾಧನೆಗೆ ಇದೀಗ ಎಲ್ಲಾ ಕಡೆಯಿಂದ ಮೆಚ್ಚುಗೆ ಸಿಗುತ್ತಿದೆ. ಬಡತನವಿದ್ದರೂ ಶೈಕ್ಷಣಿಕ ಸಾಧನೆ ಮಾಡಿದ ಅವರ ಬಗ್ಗೆ ಧನಗರಗೌಳಿ ಸಮಾಜ ಸಹ ಹೆಮ್ಮೆವ್ಯಕ್ತಪಡಿಸಿದೆ.