ಪಾತಿ ದೋಣಿ ಮೂಲಕ ಅರಬ್ಬಿ ಸಮುದ್ರಕ್ಕೆ ಹೋದ ಗಣಪತಿ ಮೊಗೇರ್ (47) ದೋಣಿಯಿಂದ ನೀರಿಗೆ ಬಿದ್ದು ಸಾವನಪ್ಪಿದ್ದಾರೆ.
ಭಟ್ಕಳ ತಾಲೂಕಿನ ಮುರುಡೇಶ್ವರ ಬಳಿಯ ಕಾಯ್ಕಿಣಿ ಮಠದ ಹಿತ್ಲು ಸಮೀಪದ ತಂಡ್ಲಮನೆಯಲ್ಲಿ ಗಣಪತಿ ಮೊಗೇರ್ ವಾಸವಾಗಿದ್ದರು. ಏಪ್ರಿಲ್ 16ರ ಸಂಜೆ ಅವರು ದೋಣಿ ಮೂಲಕ ಮೀನು ಹಿಡಿಯಲು ಸಮುದ್ರಕ್ಕೆ ಹೋಗಿದ್ದರು. ದೊಡ್ಡ ಅಲೆಯೊಂದು ದೋಣಿಗೆ ಅಪ್ಪಳಿಸಿದ್ದರಿಂದ ಗಣಪತಿ ಮೊಗೇರ್ ಆಯತಪ್ಪಿ ನೀರಿಗೆ ಬಿದ್ದರು. ಮತ್ತೆ ಮೇಲೆಳಲು ಅವರಿಗೆ ಸಾಧ್ಯವಾಗಲಿಲ್ಲ. ಅವರ ಸಹೋದರ ನಾಗೇಶ ತಂಡ್ಲಮನೆ ಈ ಬಗ್ಗೆ ಮುರುಡೇಶ್ವರ ಪೊಲೀಸ್ ಠಾಣೆಗೆ ಮಾಹಿತಿ ನೀಡಿ, ಪ್ರಕರಣ ದಾಖಲಿಸಿದರು.
ನೇಣಿಗೆ ಶರಣಾದ ಕೃಷಿಕ
ಶಿರಸಿಯ ಕೃಷಿಕ ಲಿಂಗಯ್ಯ ಪೂಜಾರಿ ಅವರು ತಮ್ಮ 65ನೇ ವಯಸ್ಸಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಹಲಸಿನಕೊಪ್ಪದ ಮೆಣಸಿ ಗ್ರಾಮದ ಸರನಗದ್ದೆಯಲ್ಲಿ ವಾಸವಾಗಿದ್ದ ಅವರು ಏಪ್ರಿಲ್ 16ರಂದು ಮನೆ ಸಮೀಪದ ಮರಕ್ಕೆ ನೇಣು ಹಾಕಿಕೊಂಡಿದ್ದಾರೆ. ಅವರ ಪುತ್ರ ಪವನ್ ಪೂಜಾರಿ ಈ ಬಗ್ಗೆ ಶಿರಸಿ ಗ್ರಾಮೀಣ ಠಾಣೆ ಪೊಲೀಸರಿಗೆ ಮಾಹಿತಿ ನೀಡಿ, ಪ್ರಕರಣ ದಾಖಲಿಸಿದ್ದಾರೆ.
ಬಸ್ಸಿಗೆ ಗುದ್ದಿದ ಲಾರಿ: ಚಾಲಕ ಸಾವು
ಯಲ್ಲಾಪುರದ ಶಿರಲೆ ಕ್ರಾಸಿನ ಬಳಿ ಲಾರಿಯೊಂದು ಬಸ್ಸಿಗೆ ಗುದ್ದಿದ ಪರಿಣಾಮ ಲಾರಿ ಚಾಲಕ ಶಂಬು ಯಾದವ್ (30) ಸಾವನಪ್ಪಿದ್ದಾರೆ.
ಏಪ್ರಿಲ್ 16ರಂದು ಈ ಅಪಘಾತ ನಡೆದಿದೆ. ಯಲ್ಲಾಪುರದಿಂದ ಅಂಕೋಲಾ ಕಡೆ ತೆರಳುತ್ತಿದ್ದ ಲಾರಿ ಅಂಕೋಲಾ ಕಡೆಯಿಂದ ಯಲ್ಲಾಪುರ ಕಡೆ ಬರುತ್ತಿದ್ದ ಬಸ್ಸಿಗೆ ಡಿಕ್ಕಿಯಾಗಿದೆ. ಬಸ್ಸಿನ ಡಿಸೇಲ್ ಟ್ಯಾಂಕಿಗೆ ಲಾರಿ ಗುದ್ದಿದ್ದು, ನಂತರ 30ಮೀ ಮುಂದೆ ಚಲಿಸಿದೆ. ಅದಾದ ಮೇಲೆ ಲಾರಿ ಪಲ್ಟಿಯಾಗಿದೆ. ಈ ಅಪಘಾತದಲ್ಲಿ ಲಾರಿ ಚಾಲಕ ರಾಜಕುಮಾರ್ ಸಿಂಗ್ ಸಹ ಗಾಯಗೊಂಡಿದ್ದಾರೆ. ಸಾವನಪ್ಪಿದ ಲಾರಿ ಚಾಲಕ ಶಂಬು ಯಾದವ್ ಜಾರ್ಖಂಡ್ ರಾಜ್ಯದವರಾಗಿದ್ದಾರೆ. ಅಂಕೋಲಾ ಹುಲಿದೇವರವಾಡದ ಬಸ್ ಚಾಲಕ ಸಯ್ಯದ್ ಬುಡನ್ ಪೊಲೀಸರಿಗೆ ಮಾಹಿತಿ ನೀಡಿ ಪ್ರಕರಣ ದಾಖಲಿಸಿದ್ದಾರೆ.





