ಅನಾಧಿಕಾಲದಿಂದಲೂ ಅರಣ್ಯ ಅತಿಕ್ರಮಣದಾರರು ಸಾಗುವಳಿ ಮಾಡಿಕೊಂಡು ಬಂದಿರುವ ಕ್ಷೇತ್ರದಲ್ಲಿ ಹೊನ್ನಾವರ ಅರಣ್ಯ ಸಿಬ್ಬಂದಿ ಗುಂಡಿ ತೋಡಿದ ಪ್ರದೇಶಕ್ಕೆ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯವರು ಭೇಟಿ ನೀಡಲಿದ್ದಾರೆ. ಏಪ್ರಿಲ್ 24ರ ಮುಂಜಾನೆ 7 ಗಂಟೆಗೆ ಹೋರಾಟಗಾರರು ಅಲ್ಲಿ ಹಾಜರಿದ್ದು, ಜನರ ಸಮಸ್ಯೆ ಆಲಿಸಲಿದ್ದಾರೆ.
ಹೋರಾಟಗಾರರ ವೇದಿಕೆಯ ಸಂಚಾಲಕ ರಾಮ ಮರಾಠಿ ಯಲಕೋಟಗಿ ಮತ್ತು ಮಹೇಶ ನಾಯ್ಕ ಕಾನಳ್ಳಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. `ಈಚೆಗೆ ಅರಣ್ಯ ಸಿಬ್ಬಂದಿಯ ದಬ್ಬಾಳಿಕೆ ಹೆಚ್ಚಾಗಿದೆ. ಸಾಗುವಳಿ ಮಾಡುತ್ತಿರುವ ಕ್ಷೇತ್ರವನ್ನು ಅರಣ್ಯ ಸಿಬ್ಬಂದಿ ಅತಿಕ್ರಮಿಸಿ ಗಿಡ ನೆಡುವ ತಯಾರಿ ನಡೆಸಿದ್ದಾರೆ. ಈ ಹಿನ್ನಲೆಯಲ್ಲಿ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧಿಕಾರಿಗಳಿಗೆ ತಕ್ಕ ಉತ್ತರ ನೀಡಲಿದೆ’ ಎಂದು ಹೋರಾಟಗಾರರು ಹೇಳಿದ್ದಾರೆ.
`ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಅವರು ಅಲ್ಲಿನವರ ಸಮಸ್ಯೆ ಆಲಿಸಲಿದ್ದಾರೆ. ಅದಾದ ನಂತರ ಕಾನೂನುಕ್ರಮದ ಬಗ್ಗೆ ಚರ್ಚೆ ನಡೆಯಲಿದೆ. ಸ್ಥಳ ಪರಿಶೀಲನೆ ತರುವಾಯ ಅರಣ್ಯಾಧಿಕಾರಿಗಳ ಜೊತೆ ಸಭೆಯನ್ನು ಆಯೋಜಿಸಲಾಗಿದೆ’ ಎಂದವರು ಮಾಹಿತಿ ನೀಡಿದ್ದಾರೆ. `ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಸಲ್ಲಿಸಿದರೂ ಅರಣ್ಯ ಸಿಬ್ಬಂದಿ ಅಲ್ಲಿ ಹಸ್ತಕ್ಷೇಪ ಮಾಡಿದ್ದಾರೆ’ ಎಂದವರು ದೂರಿದ್ದಾರೆ.
`ಮೊದಲು ಸೌಹಾರ್ದಯುತವಾಗಿ ಪ್ರಕರಣ ಬಗೆಹರಿಸಲು ಒತ್ತು ನೀಡಲಾಗುತ್ತದೆ. ಅದು ಆಗದೇ ಇದ್ದರೆ ಅರಣ್ಯವಾಸಿಗಳಿಗೆ ಆತಂಕ ಮಾಡಿದ ಬಗ್ಗೆ ಹೋರಾಟ ನಡೆಸಲಾಗುತ್ತದೆ’ ಎಂದವರು ವಿವರಿಸಿದ್ದಾರೆ.