ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಉದ್ಯಮಿ ಬಾಲಕೃಷ್ಣ ನಾಯಕ ಅವರು ಇದೀಗ ರಾಜಕೀಯ ಪ್ರವೇಶಿಸುವ ಸಾಧ್ಯತೆ ಹೆಚ್ಚಾಗಿದೆ. `ಬಾಲಕೃಷ್ಣ ನಾಯಕ ಅವರು ರಾಜಕೀಯಕ್ಕೆ ಬರಬೇಕು’ ಎಂದು ಅವರ ಬೆಂಬಲಿಗರು ಪಟ್ಟು ಹಿಡಿದಿದ್ದಾರೆ. `ಅವಕಾಶ ಸಿಕ್ಕರೆ ರಾಜಕೀಯ ಪ್ರವೇಶಕ್ಕೆ ಸಿದ್ಧ’ ಎಂದು ಬಾಲಕೃಷ್ಣ ನಾಯ್ಕ ಅವರು ಹೇಳಿದ್ದಾರೆ.
ಈಚೆಗೆ ಯಲ್ಲಾಪುರಕ್ಕೆ ಭೇಟಿ ನೀಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಯಲ್ಲಾಪುರ ವಿಧಾನಸಭಾ ಕ್ಷೇತ್ರಕ್ಕೆ ಹೊಸಮುಖ ಪರಿಚಯಿಸುವ ಬಗ್ಗೆ ಮಾತನಾಡಿದ್ದರು. `ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ನೀಡಿ ಅವರನ್ನು ಗೆಲ್ಲಿಸುವ ಹೊಣೆಯನ್ನು ತಾನು ಹೋರುವೆ’ ಎಂದಿದ್ದರು. ಆ ಸಾಮಾನ್ಯ ಕಾರ್ಯಕರ್ತ ಯಾರು? ಎನ್ನುವುದರ ಬಗ್ಗೆ ಅನೇಕ ಕಡೆ ಚರ್ಚೆ ನಡೆದಿದ್ದು, ತೆರೆಮರೆಯಲ್ಲಿ ಕೆಲಸ ಮಾಡುತ್ತಿರುವ ಬಾಲಕೃಷ್ಣ ನಾಯಕ ಅವರನ್ನು ಉದ್ದೇಶಿಸಿ ವಿಜಯೇಂದ್ರ ಮಾತನಾಡಿದ್ದಾರೆ ಎಂದು ಉದ್ಯಮನಗರದ ಉದ್ಯಮಿ ಮಾಹಂತೇಶ ಬಿ ಜಲಧಿ ಅನಿಸಿಕೆ ಹಂಚಿಕೊoಡರು.
ಅಚ್ಚರಿಯ ಅಭ್ಯರ್ಥಿ: ಬಿಜೆಪಿಗೆ ಹೊಸತಲ್ಲ!
ತಮ್ಮ ಪಾಡಿಗೆ ತಾವಿದ್ದ ಗುಡ್ಡಗಾಡಿನ ಶಾಂತರಾಮ ಸಿದ್ದಿ ಅವರನ್ನು ಬಿಜೆಪಿ ವಿಧಾನ ಪರಿಷತ್ ಸದಸ್ಯರನ್ನಾಗಿಸುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಲೋಕಸಭೆ ಚುನಾವಣೆಯಲ್ಲಿ ನಿರಂತರವಾಗಿ ಗೆದ್ದಿರುವ ಅನಂತಕುಮಾರ ಹೆಗಡೆ ಅವರನ್ನು ಬಿಜೆಪಿ ದೂರ ಮಾಡಿದನ್ನು ಅನೇಕ ಬಿಜೆಪಿಗರಿಂದ ಅರಗಿಸಿಕೊಳ್ಳಲಾಗಿರಲಿಲ್ಲ. ದೇಶದ ಹಲವು ಕಡೆ ಅಚ್ಚರಿಯ ಅಭ್ಯರ್ಥಿಗಳನ್ನು ಅಖಾಡಕ್ಕೀಳಿಸಿ ಎದುರಾಳಿಗಳಿಗೆ ಮಣ್ಣು ಮುಕ್ಕಿಸುವ ತಂತ್ರ ಬಿಜೆಪಿಗೆ ಹೊಸತಲ್ಲ. ಇದೀಗ ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿಯೂ ಬಿಜೆಪಿ ಅಂಥಹುದೇ ಸಾಹಸಕ್ಕೆ ಕೈ ಹಾಕುವ ಬಗ್ಗೆ ಚರ್ಚೆ ನಡೆದಿದೆ. ಬಾಲಕೃಷ್ಣ ನಾಯಕ ಅವರೇ ಬಿಜೆಪಿಯ ಅಚ್ಚರಿಯ ಅಭ್ಯರ್ಥಿಯಾಗಿ ಹೊರಹೊಮ್ಮಲಿದ್ದಾರೆ ಎಂಬುದು ಅವರ ಮುಂಡಗೋಡಿನ ಮುಂಡಗೋಡಿನ ರವಿಕುಮಾರ ಹಾಗೂ ಎಂ ಶಿವರಾಜ ಅವರ ನಂಬಿಕೆ.

ಬಾಲಕೃಷ್ಣ ನಾಯಕ ಅವರಿಗೆ ರಾಜಕೀಯ ಹೊಸದು. ಆದರೆ, ರಾಜಕೀಯ ತಂತ್ರಗಾರಿಕೆ ಅವರಿಗೆ ಹೊಸತಲ್ಲ. ವಿಧಾನಸಭಾ ಚುನಾವಣೆಗಳಲ್ಲಿ ಶಿವರಾಮ ಹೆಬ್ಬಾರ್ ಅವರ ಗೆಲುವಿನ ಹಿಂದಿನ ಶಕ್ತಿ ಬಾಲಕೃಷ್ಣ ನಾಯಕ ಎಂಬುದು ಗುಟ್ಟಾಗಿ ಉಳಿದಿಲ್ಲ. ಜಾತಿ ಬಲ, ಹಣ ಬಲ, ತೋಳ್ಬಲದ ಜೊತೆ ಜನ ಬೆಂಬಲದಲ್ಲಿಯೂ ಬಾಲಕೃಷ್ಣ ನಾಯಕ ಹಿಂದೆ ಬಿದ್ದಿಲ್ಲ. ಕೊರೊನಾ ಲಾಕ್ ಡೌನ್ ಅವಧಿಯಲ್ಲಿ ಬಾಲಕೃಷ್ಣ ನಾಯಕ ಅವರು ನೆರವಾಗಿದ್ದು ಒಬ್ಬಿಬ್ಬರಿಗಲ್ಲ. ಕಷ್ಟ ಹೇಳಿಕೊಂಡು ಬಂದವರನ್ನು ಅವರು ಎಂದಿಗೂ ಬರಿಗೈಯಲ್ಲಿ ಕಳುಹಿಸಿಲ್ಲ.
‘ರಿಯಲ್ ಎಸ್ಟೇಟ್ ಮೂಲಕ ಉದ್ದಿಮೆ ಶುರು ಮಾಡಿದ ಅವರು ಪರಿಸರ ಪ್ರವಾಸೋದ್ಯಮ ಚಟುವಟಿಕೆಯಲ್ಲಿಯೂ ಸಕ್ರಿಯವಾಗಿದ್ದಾರೆ. ನಿಸರ್ಗದ ನಡುವೆ ಐಷಾರಾಮಿ ರೆಸಾರ್ಟ ಹೊಂದಿದ ಅವರು ಗೋವಾದ ಪ್ರವಾಸೋದ್ಯಮ ನಕ್ಷೆಗೂ ದೊಡ್ಡ ಕೊಡುಗೆ ನೀಡಿದ್ದಾರೆ. ವಿದ್ಯಾವಂತರೂ ಆಗಿರುವ ಬಾಲಕೃಷ್ಣ ನಾಯಕ ಅವರು ಯಲ್ಲಾಪುರದ ವೈಟಿಎಸ್‌ಎಸ್ ಶಿಕ್ಷಣ ಸಂಸ್ಥೆಯ ಮೂಲಕ ಸಾವಿರಾರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುತ್ತಿದ್ದಾರೆ. ತಮ್ಮ ಉದ್ದಿಮೆಯಿಂದ ಬರುವ ಲಾಭದಲ್ಲಿ ಬಹುಪಾಲು ಹಣವನ್ನು ಸಮಾಜದ ಅಭಿವೃದ್ಧಿಗೆ ಮೀಸಲಿಡುತ್ತಿದ್ದಾರೆ. ಈ ಎಲ್ಲಾ ಸೇವೆ ಗಮನಿಸಿದ ಬಾಲಕೃಷ್ಣ ನಾಯಕ ಅವರ ಅಭಿಮಾನಿಗಳು ರಾಜಕೀಯಕ್ಕೆ ಆಮಂತ್ರಿಸುತ್ತಿದ್ದಾರೆ. ಬಾಲಕೃಷ್ಣ ನಾಯಕ ಅವರಿಗೆ ಅಧಿಕಾರ ಸಿಕ್ಕರೆ ಇನ್ನಷ್ಟು ಜನೋಪಯೋಗಿ ಕೆಲಸಗಳು ನಡೆಯುತ್ತದೆ’ ಎಂಬುದು ಕಿರವತ್ತಿಯ ಪ್ರಭು ಚುಚಗುಡಿ ಹಾಗೂ ವಿಠ್ಠು ಶಳಕೆ ಅವರ ಮಾತು.