ಭಟ್ಕಳದಲ್ಲಿ ನಡೆಯುತ್ತಿದ್ದ ಕೋಳಿ ಅಂಕದ ಮೇಲೆ ಪೊಲೀಸರು ದಾಳಿ ನಡೆಸಿದ್ದು, ನಾಲ್ವರನ್ನು ಬಂಧಿಸಿದ್ದಾರೆ. 1500ರೂ ಬೆಲೆಯ ನಾಲ್ಕು ಹುಂಜಗಳ ಜೊತೆ 1690ರೂ ಹಣವನ್ನು ಪೊಲೀಸರು ವಶಕ್ಕೆಪಡೆದಿದ್ದಾರೆ.
ಏಪ್ರಿಲ್ 20ರಂದು ಜಾಲಿ ಗ್ರಾಮದ ಹರ‍್ನಗದ್ದೆಯ ದೇವೇಂದ್ರ ಗೊಂಡ ಅವರ ಮನೆ ಬಳಿಯ ಅರಣ್ಯದಲ್ಲಿ ಜೂಜಾಟ ನಡೆಯುತ್ತಿತ್ತು. ಶಿರಾಲಿ ಗುಡಿಹಿತ್ತಲ ಕಂಚಿನದುರ್ಗಾಪರಮೇಶ್ವರಿ ದೇವಾಲಯ ಬಳಿಯ ಗಣೇಶ ನಾಯ್ಕ ಅವರು ಹುಂಜಗಳ ನಡುವೆ ಕಾದಾಟದ ಸ್ಪರ್ಧೆ ಆಯೋಜಿಸಿದ್ದರು. ಜಾಲಿಕೋಡಿಯ ಶ್ರೀಧರ ನಾಯ್ಕ, ಮಾರುಕೇರಿ ಕೊಟಖಂಡದ ನಾರಾಯಣ ನಾಯ್ಕ ಹಾಗೂ ಬೆಳಕೆಯ ದುರ್ಗಪ್ಪ ನಾಯ್ಕ ಆಗಮಿಸಿ ಹುಂಜದ ಮೇಲೆ ಹಣ ಕಟ್ಟಿದ್ದರು. ಈ ವಿಷಯ ಅರಿತ ಪೊಲೀಸ್ ಉಪನಿರೀಕ್ಷಕ ಶಾಂತಿನಾಥ ಪಸಾನೆ ಅಲ್ಲಿ ದಾಳಿ ಮಾಡಿದರು. ಕೋಳಿ ಅಂಕನಡೆಸುತ್ತಿದ್ದ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿ, ಅವರನ್ನು ಜೈಲಿಗೆ ಕಳುಹಿಸಿದರು.
ಗಾಂಜಾ ನಶೆ: ಕಾಲೇಜು ವಿದ್ಯಾರ್ಥಿಗೆ ಕಾನೂನು ಪಾಠ!
ಕುಮಟಾದಲ್ಲಿ ಗಾಂಜಾ ಸೇವಿಸುತ್ತಿದ್ದ ಸಮರ್ಥ ನಾಯ್ಕ ಪೊಲೀಸರ ಬಳಿ ಸಿಕ್ಕಿ ಬಿದ್ದಿದ್ದಾರೆ. ಏಪ್ರಿಲ್ 20ರ ರಾತ್ರಿ ಬರ್ಗಿ ಗೋಳಿಬೀರ ದೇವಸ್ಥಾನದ ಬಳಿ ಅದೇ ಊರಿನ ಸಮರ್ಥ ನಾಯ್ಕ ಅಮಲಿನಲ್ಲಿದ್ದರು.
ಗೋಕರ್ಣ ಸಿಪಿಐ ಶ್ರೀಧರ್ ಎಸ್ ಆರ್ ಅವರನ್ನು ವಿಚಾರಿಸಿದರು. ಕಾಲೇಜು ವಿದ್ಯಾರ್ಥಿಯಾಗಿರುವ ಸಮರ್ಥ ನಾಯ್ಕ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಪೊಲೀಸರು ಸಮರ್ಥ ನಾಯ್ಕರನ್ನು ಕುಮಟಾ ಆಸ್ಪತ್ರೆಗೆ ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದರು. ಅಲ್ಲಿನ ವೈದ್ಯರು ಸಮರ್ಥ ನಾಯ್ಕ ಗಾಂಜಾ ಸೇವನೆ ಮಾಡಿರುವುದನ್ನು ದೃಢಪಡಿಸಿದರು. 18ನೇ ವರ್ಷಕ್ಕೆ ಗಾಂಜಾ ವ್ಯಸನಿಯಾಗಿರುವ ಸಮರ್ಥ ನಾಯ್ಕರಿಗೆ ಪೊಲೀಸರು ಕಾನೂನು ಪಾಠ ಮಾಡಿದರು. ಗಾಂಜಾ ಸೇವಿಸಿದ ತಪ್ಪಿಗೆ ವಿದ್ಯಾರ್ಥಿ ವಿರುದ್ಧ ಪ್ರಕರಣವನ್ನು ದಾಖಲಿಸಿದರು.