ಶಿರಸಿ ಜೂ ಸರ್ಕಲ್ ಬಳಿಯ ಆನೆಹೊಂಡ ಕೆರೆ ಅಂಚಿನಲ್ಲಿ ಗಾಂಜಾ ಸೇವಿಸುತ್ತಿದ್ದ ಚಾಲಕ ಕಿರಣಕುಮಾರ್ ಹಾಗೂ ವ್ಯಾಪಾರಿ ರಕ್ಷಿತ್ ಬೆಳಗಾಂವ್ ಪೊಲೀಸರ ಬಳಿ ಸಿಕ್ಕಿಬಿದ್ದಿದ್ದಾರೆ. ಆ ಇಬ್ಬರಿಗೂ ಕಾನೂನು ಪಾಠ ಮಾಡಿದ ಪೊಲೀಸರು ಗಾಂಜಾ ನಶೆ ಬಿಡಿಸಿದ್ದಾರೆ.
ಸೋಮವಾರ ಸಂಜೆ ಶಿರಸಿ ನಗರಠಾಣೆ ಪಿಎಸ್‌ಐ ನಾಗಪ್ಪ ಬಿ ಅವರು ನಗರ ಸಂಚಾರ ನಡೆಸುತ್ತಿದ್ದರು. ಆನೆಹೊಂಡಕ್ಕೆ ಹೋಗುವ ರಸ್ತೆ ಬದಿ ಇಬ್ಬರು ಅನುಮಾನಾಸ್ಪದವಾಗಿ ವರ್ತಿಸುತ್ತಿರುವ ಬಗ್ಗೆ ಅವರಿಗೆ ಮಾಹಿತಿ ಬಂದಿತು. ಈ ಹಿನ್ನಲೆ ತಮ್ಮ ಪೊಲೀಸ್ ತಂಡದೊoದಿಗೆ ಅವರು ಅಲ್ಲಿ ತೆರಳಿದರು.
ಶಿರಸಿಯ ಗಣೇಶನಗರ ಕಿರಣಕುಮಾರ ಸುಭಾಷ ಜೋಗಳೆಕರ್ ಹಾಗೂ ಅರೆಕೊಪ್ಪದ ರಕ್ಷಿತ್ ರಾಮು ಬೆಳಗಾಂವ ಅಲ್ಲಿ ನಶೆಯಲ್ಲಿದ್ದರು. ಪೊಲೀಸ್ ಸಿಬ್ಬಂದಿ ನಾರಾಯಣ ರಾಠೋಡ್, ಹನುಮಂತ ಕಬಾಡಿ, ಸತೀಶ್ ಅಂಬಿಗ, ಸದ್ದಾಂ ಹುಸೇನ್, ಮಲ್ಲಿಕಾರ್ಜುನ ಕುದರಿ, ಶಿವಲಿಂಗ ತುಪ್ಪದ ಹಾಗೂ ರಾಜಶೇಖರ ಅಂಗಡಿ ಸೇರಿ ಆ ಇಬ್ಬರನ್ನು ಒಂದಷ್ಟು ಹೊತ್ತು ಮಾತನಾಡಿಸಿದರು.
ಪೊಲೀಸರ ಪ್ರಶ್ನೆಗೆ ಉತ್ತರಿಸುವಷ್ಟು ತಾಳ್ಮೆ ಅವರಿಗಿರಲಿಲ್ಲ. ಗಾಂಜಾ ಸೇವನೆಯ ಅನುಮಾನದ ಹಿನ್ನಲೆ ನಾಗಪ್ಪ ಬಿ ಅವರು ಆ ಇಬ್ಬರನ್ನು ವೈದ್ಯಕೀಯ ತಪಾಸಣೆಗೆ ಕಳುಹಿಸಿದರು. ಪೊಲೀಸರ ನಿರೀಕ್ಷೆಯಂತೆ ಅವರಿಬ್ಬರೂ ಗಾಂಜಾ ಸೇವಿಸಿದನ್ನು ವೈದ್ಯರು ದೃಢಪಡಿಸಿದರು. ತಕ್ಷಣ ಆ ಇಬ್ಬರನ್ನು ಪೊಲೀಸರು ಬಂಧಿಸಿ, ಪ್ರಕರಣ ದಾಖಲಿಸಿದರು.
ಬೈಕಿಗೆ ಗುದ್ದಿದ ನ್ಯಾನ್ಯೋ ಕಾರು
ಕಾರವಾರದ ಅರ್ಜುನ್ ಟಾಕೀಸ್ ಮುಂದೆ ನ್ಯಾನ್ಯೋ ಕಾರು ಬೈಕಿಗೆ ಡಿಕ್ಕಿಯಾಗಿದೆ. ಇದರಿಂದ ಬೈಕ್ ಓಡಿಸುತ್ತಿದ್ದ ಸಾಯಿಕಟ್ಟಾದ ಜಯಾನಂದ ಮೇತ್ರಿ ಅವರ ಮೂಗಿನ ಮೂಳೆ ಮುರಿದಿದೆ. ಕೋಡಿಬೀರ ದೇವಸ್ಥಾನ ಹತ್ತಿರದ ರೋಶನ್ ಪೇರುಳಕರ್ ಅವರು ಏಪ್ರಿಲ್ 21ರಂದು ಜೋರಾಗಿ ಕಾರು ಓಡಿಸುತ್ತಿದ್ದರು. ಪೊಲೀಸ್ ಅಧೀಕ್ಷಕರ ಕಚೇರಿ ಬಳಿಯಿಂದ ಅರ್ಜುನ್ ಟಾಕೀಸ್ ಕಡೆ ಹೋಗುತ್ತಿದ್ದ ಅವರ ನ್ಯಾನ್ಯೋ ಕಾರು ಕಾರವಾರದಿಂದ ಕೋಡಿಭಾಗದ ಕಡೆ ಹೋಗುತ್ತಿದ್ದ ಬೈಕಿಗೆ ಡಿಕ್ಕಿಯಾಯಿತು. ಪರಿಣಾಮ ಜಯಾನಂದ ಮೇತ್ರಿ ಅವರ ಮೂಗಿಗೆ ಪೆಟ್ಟಾಯಿತು. ಈ ಅಪಘಾತದ ಬಗ್ಗೆ ಸಾಯಿಕಟ್ಟಾದ ಕೃಷ್ಣಾನಂದ ಮೇತ್ರಿ ಪೊಲಿಸ್ ದೂರು ನೀಡಿದರು.
ಬೈಕಿಗೆ ಗುದ್ದಿದ ರಿಕ್ಷಾ: ಕೈ ಮೂಳೆ ಮುರಿತ
ಕಾರವಾರದ ಬಿಣಗಾ ಟನಲ್ ಬಳಿ ರಿಕ್ಷಾವೊಂದು ಬೈಕಿಗೆ ಗುದ್ದಿದ್ದರಿಂದ ಬೈಕ್ ಸವಾರ ತೋಕು ಗೌಡ ಅವರ ಕೈ ಮುರಿದಿದೆ. ಏಪ್ರಿಲ್ 19ರಂದು ಬಿಣಗಾ ಸೀತಾನಗರದ ರಿಕ್ಷಾ ಚಾಲಕ ಶಿವಾ ವಡ್ಡರ್ ಬಿಣಗಾದಿಂದ ಕಾರವಾರದ ಕಡೆ ವೇಗವಾಗಿ ರಿಕ್ಷಾ ಓಡಿಸುತ್ತಿದ್ದರು. ಟನಲ್ ಬಳಿ ಹೋಗುತ್ತಿದ್ದ ಬೈಕ್ ಹಿಂದಿಕ್ಕಲು ಅವರು ರಿಕ್ಷಾ ವೇಗ ಹೆಚ್ಚಿಸಿದರು. ಆಗ ಆ ರಿಕ್ಷಾ ಬೈಕಿಗೆ ಗುದ್ದಿದ್ದು, ಬೈಕು ಓಡಿಸುತ್ತಿದ್ದ ಅಮದಳ್ಳಿ ಬಾಳೆರಾಶಿಯ ತೋಕು ಗೌಡ ಅವರು ನೆಲಕ್ಕೆ ಬಿದ್ದರು. ಪರಿಣಾಮ ಕೈ ಮೂಳೆ ಮುರಿಯಿತು. ರಿಕ್ಷಾ ಚಾಲಕ ಶಿವಾ ವಡ್ಡರ್ ವಿರುದ್ಧ ತೋಕು ಗೌಡರ ಮಗ ಮಂಜುನಾಥ ಗೌಡ ಪೊಲೀಸ್ ದೂರು ನೀಡಿದರು.







