ಯಲ್ಲಾಪುರ ಜಾತ್ರಾ ಅವಧಿಯಲ್ಲಿ ಪಟ್ಟಣ ಪಂಚಾಯತದಲ್ಲಿ ನಡೆದ 11 ಲಕ್ಷ ರೂ ಅವ್ಯವಹಾರ ನಡೆದಿರುವುದು ಕಳೆದ ಸಭೆಯಲ್ಲಿ ಗಮನಕ್ಕೆ ಬಂದಿದ್ದು, ಬುಧವಾರ ನಡೆದ ಸಭೆಯಲ್ಲಿ ಈ ಪ್ರಕರಣದ ಕಡತವೇ ಕಾಣೆಯಾದ ವಿಷಯ ಹೊರ ಬಿದ್ದಿದೆ. ಹೀಗಾಗಿ ಈ ಪ್ರಕರಣದ ಸಮಗ್ರ ತನಿಖೆಗೆ ಆಗ್ರಹಿಸಿ ಲೋಕಾಯುಕ್ತ ದೂರು ನೀಡುವುದಾಗಿ ಮಂಜುನಾಥ ನಗರ ವಾರ್ಡಿನ ಸದಸ್ಯ ಸತೀಶ ನಾಯ್ಕ ಹೇಳಿದ್ದಾರೆ.
ಜಾತ್ರೆಯಲ್ಲಿ ಹರಾಜು ಮಾಡಲಾದ ಪ್ಲಾಟುಗಳ ಲೆಕ್ಕಾಚಾರ ಒದಗಿಸುವಂತೆ ಪ ಪಂ ಸದಸ್ಯರು ಪ್ರತಿ ಸಭೆಯಲ್ಲಿಯೂ ಒತ್ತಾಯಿಸುತ್ತಿದ್ದರು. ಆದರೆ, ಐದು ಸಭೆ ನಡೆದರೂ ಅಧಿಕಾರಿಗಳು ಲೆಕ್ಕ ಒಪ್ಪಿಸಿರಲಿಲ್ಲ. ಮಾರ್ಚ 19ರಂದು ನಡೆದ ಸಭೆಯಲ್ಲಿ ಅಧಿಕಾರಿಗಳು ಲೆಕ್ಕ ನೀಡಿದ್ದು, ಈ ವೇಳೆ ಸರಿಸುಮಾರು 11 ಲಕ್ಷ ರೂ ಅವ್ಯವಹಾರ ನಡೆದಿರುವುದು ಸದಸ್ಯರ ಗಮನಕ್ಕೆ ಬಂದಿತ್ತು. ಈ ಬಗ್ಗೆ ಜಿಲ್ಲಾಧಿಕಾರಿ ನೇತ್ರತ್ವದಲ್ಲಿ ತನಿಖೆ ನಡೆಯಬೇಕು ಎಂದು ಆ ಸಭೆಯಲ್ಲಿ ಠರಾವು ಮಾಡಲು ನಿರ್ಧರಿಸಲಾಗಿತ್ತು. ಠರಾವು ಪ್ರತಿಯನ್ನು ಸದಸ್ಯರಿಗೆ ತೋರಿಸುವ ಮೊದಲೇ ಮುಖ್ಯಾಧಿಕಾರಿಯಾಗಿದ್ದ ಸುನೀಲ ಗಾವಡೆ ವರ್ಗವಾಗಿದ್ದರು.
ಅದಾದ ನಂತರ ಬುಧವಾರ ಇನ್ನೊಂದು ಸಭೆ ನಡೆದಿದ್ದು, ಈ ಸಭೆಯಲ್ಲಿಯೂ ಜಾತ್ರೆ ಲೆಕ್ಕಾಚಾರದ ವಿಷಯ ಪ್ರತಿಧ್ವನಿಸಿತು. ಹಳೆಯ ವಿಷಯವನ್ನೇ ಮತ್ತೆ ಮತ್ತೆ ಚರ್ಚೆ ನಡೆಸಲು ಕೆಲ ಸದಸ್ಯರು ವಿರೋಧವ್ಯಕ್ತಪಡಿಸಿದರು. ಅದಾಗಿಯೂ ಸದಸ್ಯರಾದ ರಾಧಾಕೃಷ್ಣ ನಾಯ್ಕ, ಸತೀಶ ನಾಯ್ಕ, ಸೋಮೇಶ್ವರ ನಾಯ್ಕ ಈ ವಿಷಯದ ಬಗ್ಗೆ ಚರ್ಚಿಸಲು ಪಟ್ಟು ಹಿಡಿದರು.
ಆಗ, ಪಟ್ಟಣ ಪಂಚಾಯತ ಕಡತದಲ್ಲಿ ಜಾತ್ರೆ ಲೆಕ್ಕಾಚಾರದ ಕಾಗದ ಪತ್ರಗಳು ಸಿಗುತ್ತಿಲ್ಲ ಎಂದು ಅಧಿಕಾರಿಗಳು ಉತ್ತರಿಸಿದರು. ಆಗ ಸದಸ್ಯರು ಪ ಪಂ ಅಧಿಕಾರಿಗಳನ್ನು ತರಾಠೆಗೆ ತೆಗೆದುಕೊಂಡರು. `ಕಳೆದ ಸಭೆಯಲ್ಲಿ 11 ಲಕ್ಷ ರೂ ಅವ್ಯವಹಾರ ಬೆಳಕಿಗೆ ಬಂದಿತ್ತು. ಇದೀಗ ಆ ಫೈಲ್ ಸಿಗುತ್ತಿಲ್ಲ. ಇನ್ನಷ್ಟು ಅವ್ಯವಹಾರ ನಡೆದ ಬಗ್ಗೆ ಅನುಮಾನವಿದ್ದು, ಈ ಬಗ್ಗೆ ಲೋಕಾಯುಕ್ತರಿಗೆ ದೂರು ನೀಡುವೆ ಎಂದು ಸತೀಶ ನಾಯ್ಕ ಹೇಳಿದರು.







