ಶಿರಸಿಯಲ್ಲಿ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ಮಹಾಬಲೇಶ್ವರ ಗೌಡ ಅವರು ನಿರುದ್ಯೋಗದ ಕಾರಣದಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ.
28 ವರ್ಷದ ಮಹಾಬಲೇಶ್ವರ ಗೌಡ ಅವರು ಶಿವಳ್ಳಿ ಹೆಗಡೆಕಟ್ಟಾದ ಕಾಶಿಮನೆಯಲ್ಲಿ ವಾಸವಾಗಿದ್ದರು. ಕಟ್ಟಡ ನಿರ್ಮಾಣದ ವೇಳೆ ಅವರು ಸೆಂಟ್ರಿಂಗ್ ಕೆಲಸ ಮಾಡುವುದನ್ನು ರೂಢಿಸಿಕೊಂಡಿದ್ದರು. ಆದರೆ, ಅವರಿಗೆ ಯಾರೂ ಕೆಲಸ ಕೊಡುತ್ತಿರಲಿಲ್ಲ. ಜೀವನ ನಿರ್ವಹಣೆಗಾಗಿ ಅವರು ಅಲ್ಲಲ್ಲಿ ಸಾಲ ಮಾಡಿಕೊಂಡಿದ್ದರು. ಸಾಲ ತೀರಿಸಲು ಅವರಿಂದ ಸಾಧ್ಯವಾಗಿರಲಿಲ್ಲ. ಸಾಕಷ್ಟು ಹುಡುಕಾಟ ನಡೆಸಿದರೂ ಅವರಿಗೆ ಅಗತ್ಯವಿರುವ ಕೆಲಸ ಸಿಗದ ಕಾರಣ ಮಾನಸಿಕವಾಗಿ ಕುಗ್ಗಿದ್ದರು.
ಏಪ್ರಿಲ್ 30ರ ಬೆಳಗ್ಗೆ ಮನೆ ಮುಂದಿನ ಕಾಡಿಗೆ ಹೋದ ಅವರು ಮೇ 1ರಂದು ಶವವಾಗಿ ಕಾಣಿಸಿಕೊಂಡರು. ಪಿಳ್ಳೆ ಮರದ ಟೊಂಗೆಗೆ ನೇತಾಡುತ್ತಿದ್ದ ಶವ ನೋಡಿದ ನಾಗು ಗೌಡ ಅವರು ತಮ್ಮ ಮಗನ ಸಾವಿನ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರು.
ಅಣು ಉದ್ಯೋಗಿ ಮನೆಯಲ್ಲಿ ಕಳ್ಳರ ಕೈಚಳಕ
ಕೈಗಾ ಅಣು ವಿದ್ಯುತ್ ಘಟಕದ ಉದ್ಯೊಗಿ ಶಿವಾಜಿ ಗೋರ್ಪಡೆ ಅವರ ಮನೆಯಲ್ಲಿ ಕಳ್ಳತನ ನಡೆದಿದೆ. ಅವರು ಪ್ರವಾಸದಲ್ಲಿರುವ ವೇಳೆ ಕಳ್ಳರು ಮನೆಗೆ ನುಗ್ಗಿದ್ದಾರೆ.
ಏಪ್ರಿಲ್ 26ರಂದು ಶಿವಾಜಿ ಗೋರ್ಪಡೆ ಅವರು ಮಹಾರಾಷ್ಟ್ರದ ಇಂದೂರಿಗೆ ಹೋಗಿದ್ದರು. ಹೊರಡುವ ಮುನ್ನ ಮನೆಗೆ ಭದ್ರವಾಗಿ ಬೀಗ ಹಾಕಿದ್ದರು. ಅದಾಗಿಯೂ ಕಳ್ಳರು ಅವರ ಮನೆಯೊಳಗೆ ನುಗ್ಗಿ 1ಲಕ್ಷ ರೂ ಮೌಲ್ಯದ ಬಂಗಾರ ಹಾಗೂ 20 ಸಾವಿರ ರೂ ಹಣ ಕದ್ದಿದ್ದಾರೆ.
ಈ ಬಗ್ಗೆ ಕೈಗಾ ಉದ್ಯೋಗಿ ನಾರಾಯಣದತ್ತ ತ್ರಿವೇದಿ ಅವರು ಶಿವಾಜಿ ಗೋರ್ಪಡೆ ಅವರಿಗೆ ಮಾಹಿತಿ ನೀಡಿದರು. ಶಿವಾಜಿ ಗೋರ್ಪಡೆ ಅವರ ಪರವಾಗಿ ಮಲ್ಲಾಪುರ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದರು. ಪೊಲೀಸರು ಕಳ್ಳರ ಹುಡುಕಾಟ ನಡೆಸಿದ್ದಾರೆ.
ಕಾಡಿನಲ್ಲಿ ಸಿಕ್ಕ ಕೊಳೆತ ಶವ: ಸಂಚಾರಿಯ ಬದುಕು ನಿಗೂಢ ಅಂತ್ಯ!
ಕಾರವಾರದ ಬರ್ಗಲ್ ಗ್ರಾಮದ ಗೌರೀಶ ಗುನಗಿ ಅರಣ್ಯದಲ್ಲಿ ಸಾವನಪ್ಪಿದ್ದಾರೆ.
36 ವರ್ಷದ ಗೌರೀಶ ಗುನಗಿ ಅವರು ಸಂಚಾರಿಯಾಗಿದ್ದರು. ಒಂದು ಊರಿನಿಂದ ಮತ್ತೊಂದು ಊರಿಗೆ ಹೋದರೆ 15-20 ದಿನವಾದರೂ ಬರುತ್ತಿರಲಿಲ್ಲ. ಮದ್ಯ ಸೇವನೆಯ ಚಟವನ್ನು ಅಂಟಿಸಿಕೊಂಡಿದ್ದ ಅವರ ಬಗ್ಗೆ ಕುಟುಂಬದವರು ಹೆಚ್ಚಿಗೆ ತಲೆಕೆಡಿಸಿಕೊಂಡಿರಲಿಲ್ಲ.
ಈ ನಡುವೆ ಗೌರೀಶ ಗುನಗಿ ಅವರಿಗೆ ಪಿಡ್ಸ ರೋಗ ಕಾಣಿಸಿಕೊಂಡಿತ್ತು. ಎಪ್ರಿಲ್ 9ರಂದು ಅವರು ಬರ್ಗಲ್ ಗ್ರಾಮದ ಮನೆಗೆ ಭೇಟಿ ನೀಡಿದ್ದರು. ಏಪ್ರಿಲ್ 10ರ ಬೆಳಗ್ಗೆ 4 ಗಂಟೆಗೆ ಎದ್ದು ಮನೆಯಿಂದ ಹೊರಟಿದ್ದರು. ಅದಾದ ನಂತರ ಗೌರೀಶ ಗುನಗಿ ಅವರ ಬಗ್ಗೆ ಕುಟುಂಬದವರಿಗೂ ಯಾವುದೇ ಮಾಹಿತಿ ಇರಲಿಲ್ಲ.
ಮೊನ್ನೆ ಸಂಜೆ ಬರ್ಗಲ್ ಕವಲಮಕ್ಕಿ ಕೆರೆಯ ಬಳಿಯಿರುವ ಅರಣ್ಯದಲ್ಲಿ ಶವವೊಂದು ಕೊಳೆತ ಸ್ಥಿತಿಯಲ್ಲಿ ಕಾಣಿಸಿತು. ಗೌರೀಶ ಗುನಗಿ ಕುಟುಂಬದವರನ್ನು ಪೊಲೀಸರು ಕರೆಯಿಸಿದರು. ಆ ಶವ ಗೌರೀಶನದು ಎಂದು ಕುಟುಂಬದವರು ಖಚಿತಪಡಿಸಿದರು. ಮಗನ ಸಾವಿನ ಬಗ್ಗೆ ಗೋವಿಂದ ಗುನಗಿ ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದರು.
ಶ್ರಮಜೀವಿಯ ಬದುಕು ಬವಣೆ: ಕೃಷಿಕನನ್ನು ಕೊಂದ ಕೃಷಿ ಯಂತ್ರ!
ಬನವಾಸಿ ಗೋಣೆಕಟ್ಟಾ ಗುರುನಗರದ ಚಂದ್ರಶೇಖರ ನಾಯ್ಕ ಅವರು ಪವರ್ ಟಿಲ್ಲರ್ ನಡುವೆ ಸಿಲುಕಿ ಸಾವನಪ್ಪಿದ್ದಾರೆ.
40 ವರ್ಷದ ಚಂದ್ರಶೇಖರ ನಾಯ್ಕ ಅವರು ಕೃಷಿಕರಾಗಿದ್ದರು. ತೋಟಕ್ಕೆ ಸೊಪ್ಪು ತರುವುದಕ್ಕಾಗಿ ಅವರು ಏಪ್ರಿಲ್ 30ರಂದು ಕಾಡಿಗೆ ಹೋಗಿದ್ದರು. ಅವರ ಜೊತೆ ಅನಿತಾ ಎಂಬಾತರು ಇದ್ದರು. ಸೊಪ್ಪು ತರುವಾಗ ಟಿಲ್ಲರಿನ ಕಬ್ಬಿಣದ ರಾಡು ಮರಕ್ಕೆ ಗುದ್ದಿದ್ದು, ಅದರ ನಡುವೆ ಚಂದ್ರಶೇಖರ ನಾಯ್ಕರು ಸಿಕ್ಕಿಬಿದ್ದರು.
ಉಸಿರಾಟ ಸಮಸ್ಯೆ ಅನುಭವಿಸುತ್ತಿದ್ದ ಚಂದ್ರಶೇಖರ್ ಅವರನ್ನು ಅನಿತಾ ಅವರು ರಕ್ಷಿಸಲು ಪ್ರಯತ್ನಿಸಿದರು. ಸಾಧ್ಯವಾಗದೇ ಇದ್ದಾಗ ದೊಡ್ಡದಾಗಿ ಬೊಬ್ಬೆ ಹೊಡೆದರು. ಆಕ್ರಂದನ ಕೇಳಿ ಚಂದ್ರಶೇಖರ ಅವರ ಅಣ್ಣ ಅರವಿಂದ ನಾಯ್ಕರು ಅಲ್ಲಿಗೆ ಓಡಿದರು. ಟಿಲ್ಲರನ್ನು ಅಲ್ಲಿಂದ ತೆಗೆದು ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ಚಂದ್ರಶೇಖರ ಅವರನ್ನು ಹೊರಗೆ ಎಳೆದರು.
ಅಸ್ವಸ್ಥಗೊಂಡ ಚಂದ್ರಶೇಖರ ನಾಯ್ಕರನ್ನು ಶಿರಸಿ ಪಿಜಿ ಆಸ್ಪತ್ರೆಗೆ ಕರೆತಂದರೂ ಪ್ರಯೋಜನವಾಗಲಿಲ್ಲ. ಚಂದ್ರಶೇಖರ ನಾಯ್ಕರ ಸಾವನ್ನು ವೈದ್ಯರು ಖಚಿತಪಡಿಸಿದರು.