ಯಲ್ಲಾಪುರದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಹರೀಶ ಸಿದ್ದಿ ಅವರಿಗೆ ಗಾಂಜಾ ಸಿಕ್ಕಿದೆ. ಅದನ್ನು ಸೇವಿಸಿ, ಮದ್ಯರಸ್ತೆಯಲ್ಲಿ ಮಂಗನoತೆ ವರ್ತಿಸುತ್ತಿದ್ದ ಹರೀಶ ಸಿದ್ದಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ!
ಯಲ್ಲಾಪುರದ ದೋಣಗಾರದಲ್ಲಿ ಹರೀಶ ಸಿದ್ದಿ (20) ವಾಸವಾಗಿದ್ದರು. ಅಲ್ಲಿ-ಇಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಅವರು ತಮ್ಮ ಪಾಡಿಗೆ ತಾವಿದ್ದರು. ಮೇ 7ರಂದು ಅವರಿಗೆ ಒಂದಷ್ಟು ಸೊಪ್ಪು ಸಿಕ್ಕಿತು. ಆ ಸೊಪ್ಪು ಗಾಂಜಾ ಎಂದು ಗೊತ್ತಾದ ನಂತರ ಗಾಂಜಾ ಅಮಲಿನ ಬಗ್ಗೆ ಅರಿತಿದ್ದ ಹರೀಶ ಸಿದ್ದಿ ಅದನ್ನು ಸೇವಿಸಿ ಹೊಗೆ ಬಿಟ್ಟರು. ನಶೆಯ ಗುಂಗಿನಲ್ಲಿ ಅವರು ತೇಲಾಡುತ್ತಿರುವುದನ್ನು ನೋಡಿದ ಜನ ಪೊಲೀಸರಿಗೆ ಮಾಹಿತಿ ನೀಡಿದರು.
ಇಡಗುಂದಿ ಹೆಬ್ಬಾರ ಕ್ರಾಸಿನ ಜೋಗದಮನೆ ರಸ್ತೆಯಲ್ಲಿ ಅಮಲಿನಲ್ಲಿ ಅಲೆದಾಡುತ್ತಿದ್ದ ಹರೀಶ ಸಿದ್ದಿ ಅವರನ್ನು ಯಲ್ಲಾಪುರ ಪಿಎಸ್‌ಐ ಯಲ್ಲಲಿಂಗ ಕನ್ನೂರು ಮಾತನಾಡಿಸಿದರು. ಮಾತನಾಡಲು ಆಗದ ಸ್ಥಿತಿಯಲ್ಲಿ ತಡವರಿಸುತ್ತಿದ್ದ ಹರೀಶ ಸಿದ್ದಿ ಅವರನ್ನು ಪೊಲೀಸರು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದರು. ವೈದ್ಯರು ಗಾಂಜಾ ಸೇವನೆಯನ್ನು ದೃಢಪಡಿಸಿದ್ದು, ಪೊಲೀಸರು ಹರೀಶ ಸಿದ್ದಿ ವಿರುದ್ಧ ಪ್ರಕರಣ ದಾಖಲಿಸಿ, ಕಾನೂನು ಕ್ರಮ ಜರುಗಿಸಿದರು.
ಗಮನಿಸಿ: ಮಾದಕ ವ್ಯಸನ ಆರೋಗ್ಯಕ್ಕೆ ಹಾನಿಕರ




