`ನಾವು ಹಸುವನ್ನು ಪೂಜಿಸುತ್ತೇವೆ. ಅದನ್ನು ಕಡಿಯುವವರನ್ನು ವಿರೋಧಿಸುತ್ತೇವೆ’ ಎಂದು ಭಾಷಣ ಶುರು ಮಾಡಿದ ಮಾಜಿ ಕೆಪಿಸಿಸಿ ಸದಸ್ಯ ಗೋಪಾಲಕೃಷ್ಣ ನಾಯಕ ವಕೀಲರೊಬ್ಬರ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಆದರೆ, ಆ ವಕೀಲರು ಯಾರು ಎಂದು ವಿಡಿಯೋದಲ್ಲಿ ಬಾಯ್ಬಿಟ್ಟಿಲ್ಲ!
ಕೆಲ ಗಂಟೆಗಳ ಹಿಂದೆ ಗೋಪಾಲಕೃಷ್ಣ ನಾಯಕ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಹರಿಬಿಟ್ಟಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಆ ವಿಡಿಯೋ ವೈರಲ್ ಆಗುತ್ತಿದೆ. ಅದರಲ್ಲಿ `ಸನಾತನಿ ಎಂದು ಕರೆಯಿಸಿಕೊಳ್ಳುವ ನ್ಯಾಯವಾದಿ ನ್ಯಾಯಾಲಯದ ಒಳಗೆ ಹಸು ಕಡಿದವರ ಪರವಾಗಿ ಮಾತನಾಡುತ್ತಾರೆ’ ಎಂದು ಗೋಪಾಲಕೃಷ್ಣ ನಾಯಕ ಅವರು ಟೀಕಿಸಿದ್ದಾರೆ.
ಮುಂದುವರೆದು, `ಪ್ರಖರ ವಾಗ್ಮಿ ಎಂದು ಗುರುತಿಸಿಕೊಳ್ಳುವ ಆ ನ್ಯಾಯವಾದಿ ದ್ವಿಮುಖ ನೀತಿ ಅನುಸರಿಸುತ್ತಿದ್ದಾರೆ’ ಗೋಪಾಲಕೃಷ್ಣ ನಾಯಕ ಎಂದು ಜರಿದಿದ್ದಾರೆ. `ಕೋರ್ಟಿನಲ್ಲಿ ಹಸು ಕಡಿದವರ ಬಗ್ಗೆ ವಾದ ಮಾಡಿ ಹೊರಗಡೆ ಸನಾತನಿ ಎಂದು ಭಾಷಣ ಮಾಡುವವರ ಸಂಪಾದನೆ ಅನ್ಯಾಯದ ಮಾರ್ಗದ್ದು’ ಎಂಬ ಅರ್ಥದಲ್ಲಿ ಗೋಪಾಲಕೃಷ್ಣ ನಾಯಕ ಭಾಷಣ ಮಾಡಿದ್ದಾರೆ.
ಆ ನ್ಯಾಯವಾದಿಯನ್ನು ಉದ್ದೇಶಿಸಿ `ನಿನ್ನ ಸಂಪಾದನೆ ಕೊಲೆ ಗಡುಕರದ್ದು, ಅತ್ಯಾಚಾರಿಯದ್ದು..’ ಎಂದು ಗೋಪಾಲಕೃಷ್ಣ ನಾಯಕ ಹೇಳಿದ್ದಾರೆ. ಇದರೊಂದಿಗೆ `ನಾನು ನನ್ನ ಧರ್ಮವನ್ನು ಪ್ರೀತಿಸುವೆ. ಅದರ ಅರ್ಥ ಇನ್ನೊಂದು ಧರ್ಮವನ್ನು ದ್ವೇಷಿಸುವೆ ಎಂದಲ್ಲ’ ಎಂದು ಗೋಪಾಲಕೃಷ್ಣ ನಾಯಕ ಹೇಳಿದ್ದಾರೆ. ಗೋಪಾಲಕೃಷ್ಣ ನಾಯಕ ಅವರು ಯಾವ ನ್ಯಾಯವಾದಿ ಉದ್ದೇಶಿಸಿ ಭಾಷಣ ಮಾಡಿದರು? ಎನ್ನುವುದರ ಬಗ್ಗೆ ಕಮೆಂಟ್ ಬಾಕ್ಸಿನಲ್ಲಿ ಚರ್ಚೆ ನಡೆಯುತ್ತಿದೆ.
ವಕೀಲರ ಬಗ್ಗೆ ಮಾತನಾಡಲ್ಲ!
ಮೊನ್ನೆ ಮಾಲಾದೇವಿ ಮೈದಾನದಲ್ಲಿ ನಿಂತು ಮಾತನಾಡಿದ ಗೋಪಾಲಕೃಷ್ಣ ನಾಯಕ `ಆ ವಕೀಲರ ಬಗ್ಗೆ ನಾನು ಏನೂ ಹೇಳುವುದಿಲ್ಲ. ಮೊದಲು ಅವರು ನಮ್ಮ ಪಕ್ಷದಲ್ಲಿದ್ದರು. ಅವರು ಕಾಂಗ್ರೆಸ್ಸಿನಲ್ಲಿದ್ದಾಗ ನಾನು ಯುವ ಕಾಂಗ್ರೆಸ್ಸಿನಲ್ಲಿದೆ. 2013ರಲ್ಲಿ ನಾವೆಲ್ಲರೂ ಅವರ ನೇತ್ರತ್ವದಲ್ಲಿಯೇ ಕೆಲಸ ಮಾಡಿದ್ದು, ನಾನು ಅವರೊಂದಿಗೆ ಕೆಲಸ ಮಾಡಿದ್ದೇನೆ. ಇದೀಗ ಆರ್‌ಎಸ್‌ಎಸ್ ಮೆಚ್ಚಿಸುವ ಪ್ರಯತ್ನ ಮಾಡುತ್ತಿದ್ದಾರೆ’ ಎಂದು ಕ್ಯಾಮರಾ ಮುಂದೆ ಹೇಳಿದ್ದಾರೆ. ಕೊನೆಗೆ `ಆ ವಕೀಲರ ಬಗ್ಗೆ ನಮಗೆ ಗೌರವವಿದೆ. ಕಳೆದ ಚುನಾವಣೆಯಲ್ಲಿ ಸಹ ಅವರು ನಮ್ಮ ಪಕ್ಷಕ್ಕೆ ಸಹಾಯ ಮಾಡಿದ್ದಾರೆ’ ಎನ್ನುವ ಮೂಲಕ ಅನೇಕರ ತಲೆಯೊಳಗೆ ಹೊಸ ಹುಳ ಬಿಟ್ಟಿದ್ದಾರೆ.