ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿರುವ ಈ ಮನೆಗೆ ಇದೀಗ 100 ವರ್ಷ. 7ನೇ ತಲೆಮಾರಿನವರು ಸದ್ಯ ಈ ಮನೆಯಲ್ಲಿ ವಾಸವಾಗಿದ್ದಾರೆ!
ಸಿದ್ದಾಪುರದ ಹೆಗ್ಗೋಡಮನೆ ಎಂಬಲ್ಲಿ ಈ ಮನೆ ಇದೆ. 1925ರಲ್ಲಿ ನಿರ್ಮಿಸಿದ ಈ ಮನೆ ಒಂದು ಶತಮಾನ ಕಂಡಿದೆ. ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು ಸಹ ಈ ಮನೆಗೆ ಭೇಟಿ ನೀಡಿ ಮನೆಯ ಅಂದ ಗುಣಗಾನ ಮಾಡಿದ್ದು, ಇದೀಗ ಇತಿಹಾಸ!
ದಾಖಲೆಗಳ ಪ್ರಕಾರ ಹೆಗ್ಗೋಡಮನೆ ಕುಟುಂಬಕ್ಕೆ 300 ವರ್ಷಗಳ ಇತಿಹಾಸವಿದೆ. ಸದ್ಯ ಈ ಮನೆಯಲ್ಲಿ ಹಿರಿಯ ವಕೀಲ ಎಂ ಎಸ್ ಗೌಡರ್ ಅವರು ವಾಸವಾಗಿದ್ದಾರೆ. ಅವರ ಕುಟುಂಬದವರೇ ಈ ಮನೆ ನಿರ್ಮಿಸಿದ್ದಾರೆ. 100 ವರ್ಷ ಕಳೆದರೂ ಆ ಮನೆ ಮೊದಲಿನಷ್ಟೇ ಗಟ್ಟಿಮುಟ್ಟಾಗಿದೆ!
ಮುಂಬೈ ಪ್ರಾಂತದ ಪ್ರಜಾಪ್ರತಿನಿಧಿ ಸಭೆಯ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದ ಚನ್ನಬಸಪ್ಪ ಗೌಡ ಎಂಬಾತರು ಈ ಮನೆ ಕಟ್ಟಿಸಿದರು. ಅದಕ್ಕೆ ಅಕ್ಕರೆಯಿಂದ ಆಸರೆ ಎಂದು ಹೆಸರಿಟ್ಟರು. ಎರಡು ಉಪ್ಪರಗೆಗಳಿರುವ ಈ ಮನೆಯಲ್ಲಿ ಆ ಕಾಲದಲ್ಲಿಯೇ ಬೊಂಬೈ ತಜ್ಞರ ನೆರವಿನಿಂದ ಬೋರ್‌ವೆಲ್ ತೆಗೆಸಲಾಗಿದೆ. ಅಲ್ಲಿಂದ ಈಗಲೂ ನೀರು ಬರುತ್ತದೆ. ರಾವ್ ಬಹದ್ದೂರ್ ಮೆಡಲ್ ಪಡೆದಿದ್ದ ಚನ್ನಬಸಪ್ಪ ಗೌಡ ಅವರು ಈ ಮನೆಯಲ್ಲಿ ವಾಸವಾಗಿದ್ದು, ನಂತರ ಅವರು ಕುಟುಂಬದ ಮುಖ್ಯಸ್ಥರಾದ ಎರಡನೇ ತಲೆಮಾರಿನ ಪುಟ್ಟಣ್ಣಯ್ಯ ಗೌಡರ್ ಅವರಿಗೆ ಮನೆ ಹಸ್ತಾಂತರಿಸಿದರು.
ಪುಟ್ಟಣ್ಣಯ್ಯ ಗೌಡರ್ ಅವರು ಕಾರವಾರದ ಇಂಡಸ್ಟ್ರಿಯಲ್ ಬ್ಯಾಂಕಿನ ನಿರ್ದೇಶಕರಾಗಿದ್ದರು. ಸಾಮಾಜಿಕ ಚಟುವಟಿಕೆಯಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದರು. ಅವರ ಪ್ರೇರಣೆಯಿಂದ ಮುಂದಿನ ತಲೆಮಾರಿನವರು ಸಹ ವಿವಿಧ ಕ್ಷೇತ್ರಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಕುಟುಂಬವೂ ಸ್ವಾತಂತ್ರ‍್ಯ ಹೋರಾಟದಲ್ಲಿ ಹೋರಾಟಗಾರರಿಗೆ ಆಶ್ರಯ ನೀಡಿದ ಬಗ್ಗೆ ಹಿರಿಯ ಮುತ್ಸದ್ಧಿ ಸಾಗರದ ಬಿ ಎನ್ ರಾಜಗೋಪಾಲ ಅವರು ವಿವರಿಸಿದ್ದಾರೆ.
ಈ ಮನೆಗೆ ಎರಡು ಉಪ್ಪರಿಗೆಯಿದೆ. ಮನೆಯ ಉಪ್ಪರಿಗೆಯಲ್ಲಿ ಸದಾ ಕಾಲ 50ಕ್ಕೂ ಹೆಚ್ಚು ಹೋರಾಟಗಾರರು ಆಶ್ರಯ ಪಡೆದು ಕರಪತ್ರಗಳನ್ನು ಸಿದ್ಧಪಡಿಸುತ್ತಿದ್ದರು ಎಂದು ರಾಜಗೋಪಾಲ ಅವರು ಹೇಳಿದ್ದರು. ಕರ್ನಾಟಕ ಏಕೀಕರಣ ಸಂದರ್ಭದಲ್ಲಿ ಎಸ್ ನಿಜಲಿಂಗಪ್ಪ, ರಾಮಕೃಷ್ಣ ಹೆಗಡೆ ಸೇರಿದಂತೆ ಪ್ರಮುಖ ನಾಯಕರು ಈ ಮನೆಗೆ ಭೇಟಿ ನೀಡಿದ್ದು ಇಲ್ಲಿನ ವಿಶೇಷ.
ಇನ್ನೂ ಪುಟ್ಟಣ್ಣಯ್ಯ ಗೌಡರು ಕುರುಡುಕುಣಿ ಎನ್ನುವಲ್ಲಿ ಭೂಮಿ ಹೊಂದಿದ್ದರು. ಅಲ್ಲಿ 15 ಎಕರೆ ಕ್ಷೇತ್ರವನ್ನು 10 ಪರಿಶಿಷ್ಟ ಕುಟುಂಬಗಳಿಗೆ ದಾನ ಮಾಡಿದರು. ನೂರು ವಸಂತ ಪೂರೈಸಿದ ನೆನಪಿಗಾಗಿ ಮೇ 23 ಹಾಗೂ 24ರಂದು ಈ ಮನೆಯಲ್ಲಿ ಸಡಗರದ ಆಚರಣೆ ನಡೆಯುತ್ತಿದೆ. ಶಿವಮೊಗ್ಗದ ಮುರುಘರಾಜೇಂದ್ರ ಮಹಾಸಂಸ್ಥಾನದ ಆನಂದಪುರ ಮತ್ತು
ಬೆಕ್ಕಿನ ಕಲ್ಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಜಿ ಸಹ ಆಗಮಿಸಲಿದ್ದಾರೆ. ಕೆಳದಿ ರಾಜಗುರು ಮಹಾಮತ್ತಿನ ಭುವನಗಿರಿ ದುರ್ಗ
ಸಂಸ್ಥಾನ ಮಠದ ಪಟ್ಟಾಧ್ಯಕ್ಷರಾದ ಮರುಳಸಿದ್ಧ ಶಿವಾಚಾರ್ಯ ಸ್ವಾಮಿಜಿ, ಸೊರಬ ಜಡೆ ಸಂಸ್ಥಾನಮಠದ ಮಹಾಂತ ಸ್ವಾಮಿಜಿ, ಕಾನಳ್ಳಿಮಠದ ಪರಮೇಶ್ವರಯ್ಯ ಅವರು ಆಶೀರ್ವಾದ ನೀಡಲಿದ್ದಾರೆ.