`ಅಂದರ್ ಬಾಹರ್ ಆಡುವುದು ಅಪರಾಧ ಅಲ್ಲ’ ಎಂದು ಧಾರವಾಡ ಹೈಕೋರ್ಟ ಹೇಳಿದೆ. ಅಂದರ್ ಬಾಹರ್ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ ಶಿರಸಿಯ 13ಜನರ ವಿರುದ್ಧದ ಪ್ರಕರಣವನ್ನು ನ್ಯಾಯಾಲಯ ರದ್ಧು ಮಾಡಿದೆ.
ಶಿರಸಿಯ ಇಟಗುಳಿಯ ರಾಮಚಂದ್ರ ಹೆಗಡೆ ಅವರ ಮನೆಯಲ್ಲಿ ಅಂದರ್ ಬಾಹರ್ ಆಟ ನಡೆಯುತ್ತಿದ್ದಾಗ ಪೊಲೀಸರು ದಾಳಿ ನಡೆಸಿದ್ದರು. ರಾಮಚಂದ್ರ ಹೆಗಡೆ ಅವರ ಜೊತೆ ಮಂಜುನಾಥ ಸುಬ್ರಾಯ ಹೆಗಡೆ, ಕೇಶವ ಹೆಗಡೆ, ಮಂಜುನಾಥ ರಾಮಚಂದ್ರ ಹೆಗಡೆ, ಮಹೇಶ ಹೆಗಡೆ, ನಾರಾಯಣ ಹೆಗಡೆ, ವಿನಯ ಹೆಗಡೆ, ಕಮಲಾಕರ ಭಟ್ಟ, ಆನಂದ ಹೆಗಡೆ, ಮಂಜುನಾಥ ಸತ್ಯನಾರಾಯಣ ಹೆಗಡೆ, ಗಣಪತಿ ಹೆಗಡೆ, ಮಹಾಬಲೇಶ್ವರ ಹೆಗಡೆ ಹಾಗೂ ಕಾರ್ತಿಕ ಹೆಗಡೆ ಎಂಬಾತರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು.
ಏಪ್ರಿಲ್ 9ರಂದು ಈ ದಾಳಿ ನಡೆದಿತ್ತು. ಶಿರಸಿ ಗ್ರಾಮೀಣ ಠಾಣೆಯ ಪೊಲೀಸರು ದಾಳಿ ನಡೆಸಿದ್ದರು. ಈ ದಾಳಿ ಪ್ರಶ್ನಿಸಿ ರಾಮಚಂದ್ರ ಹೆಗಡೆ ಅವರು ಹೈಕೋರ್ಟಿನ ಮೊರೆ ಹೋಗಿದ್ದರು. ನ್ಯಾಯವಾದಿ ಸೌರಬ ಹೆಗಡೆ ಅವರ ಮೂಲಕ ಇಸ್ಪಿಟ್ ಆಡುವುದು ಅಪರಾಧ ಅಲ್ಲ ಎಂದು ಅವರು ನ್ಯಾಯಾಲಯದ ಮುಂದೆ ವಾದಿಸಿದ್ದರು.
ವಾದ ಆಲಿಸಿದ ನ್ಯಾಯಾಲಯ `ಅಂದರ್ ಬಾಹರ್ ಆಡುವುದು ಕೌಶಲ್ಯದ ಆಟ’ ಎಂದು ಅಭಿಪ್ರಾಯವ್ಯಕ್ತಪಡಿಸಿದೆ. ಇದರೊಂದಿಗೆ `ಪೊಲೀಸರು ಅಪರಾಧದ ಅಗತ್ಯ ಅಂಶ ಪತ್ತೆ ಹಚ್ಚಿಲ್ಲ. ಕೌಶಲ್ಯದ ಆಟವನ್ನು ಜೂಜಾಟ ಎಂದು ಪರಿಗಣಿಸಲು ಬರುವುದಿಲ್ಲ’ ಎಂದು ಹೇಳಿದೆ. ಅಪರಾಧ ಸಾಭೀತು ಮಾಡಲು ಸಾಕ್ಷಿ ಇಲ್ಲದಿರುವುದನ್ನು ಗಮನಿಸಿ ಪೊಲೀಸರು ದಾಖಲಿಸಿದ್ದ ಪ್ರಕರಣವನ್ನು ರದ್ದು ಮಾಡಿದೆ.
ಗಮನಿಸಿ: ಜೂಜಾಟ ನಡೆಸಿ, ಹಣ ಕಳೆದುಕೊಳ್ಳಬೇಡಿ