ವಿಭಿನ್ನ ಸಂಸ್ಕೃತಿ, ವಿಶಿಷ್ಟ ಆಚರಣೆ ಮೂಲಕ ಅರಣ್ಯ ಅಂಚಿನಲ್ಲಿ ತಮ್ಮ ಪಾಡಿಗೆ ತಾವು ಬದುಕುತ್ತಿರುವ ಸಿದ್ದಿ ಸಮುದಾಯದವರ ಅಭಿವೃದ್ಧಿಗೆ ವಿಶೇಷ ಅನುದಾನ ಮೀಸಲಿಡಬೇಕು ಎಂದು ಸಮುದಾಯದ ಪ್ರಮುಖರು ಒತ್ತಾಯಿಸಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.
ಮೇ 21ರಂದು ಮುಖ್ಯಮಂತ್ರಿಯವರ ಗೃಹ ಕಚೇರಿ ಕೃಷ್ಣಾಗೆ ತೆರಳಿದ ಸಿದ್ದಿ ಸಮುದಾಯದವರು ತಮ್ಮ ವಿವಿಧ ಬೇಡಿಕೆಗಳ ಕುರಿತು ಸಿದ್ದರಾಮಯ್ಯ ಅವರ ಜೊತೆ ಚರ್ಚೆ ನಡೆಸಿದರು. `ಸಿದ್ದಿ ಸಮುದಾಯದವರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿದರೂ ಮೂಲಭೂತ ಸೌಕರ್ಯವನ್ನು ಸರಿಯಾಗಿ ಒದಗಿಸಿಲ್ಲ. ಇದರಿಂದ ಅನೇಕರಿಗೆ ಅನ್ಯಾಯವಾಗಿದೆ’ ಎಂದು ಮುಖ್ಯಮಂತ್ರಿಗಳ ಬಳಿ ಅಳಲು ತೋಡಿಕೊಂಡರು. `ಸಿದ್ದಿ ಸಮುದಾಯದ ಅನೇಕರಿಗೆ ವಾಸಕ್ಕೆ ಯೋಗ್ಯ ಮನೆ ಇಲ್ಲ. ಕುಡಿಯುವ ನೀರಿನ ಸಮಸ್ಯೆ ಹೇರಳವಾಗಿದೆ. ಇದನ್ನು ಬಗೆಹರಿಸಲು 50 ಕೋಟಿ ರೂ ಬಿಡುಗಡೆ ಮಾಡಬೇಕು’ ಎಂದು ನಿಯೋಗದಲ್ಲಿದ್ದವರು ಆಗ್ರಹಿಸಿದರು.
`ಈಗಾಗಲೇ ಪರಿಶಿಷ್ಟ ಪಂಗಡದವರಿಗಾಗಿ ಸರ್ಕಾರ 200 ಕೋಟಿ ರೂ ಮೀಸಲಿಟ್ಟಿದೆ. ಸಿದ್ದಿ ಸಮುದಾಯದವರ ಅಭಿವೃದ್ಧಿಗೂ ಅನುದಾನ ಬಿಡುಗಡೆ ಮಾಡಲಾಗುತ್ತದೆ’ ಎಂದು ಸಿದ್ದರಾಮಯ್ಯ ಅವರು ಈ ವೇಳೆ ಭರವಸೆ ನೀಡಿದರು. ಪರಿಶಿಷ್ಟ ವರ್ಗ ಕಲ್ಯಾಣ ಇಲಾಖೆ ನಿರ್ದೇಶಕ ಯೋಗೇಶ್ ಅವರು `ಸಿದ್ದಿ ಸಮುದಾಯದ ಅಭಿವೃದ್ಧಿಗೆ ಈಗಾಗಲೇ ಸರ್ಕಾರ ಆಸಕ್ತಿವಹಿಸಿದೆ. ಸಮುದಾಯದ ಬೇಡಿಕೆ ಈಡೇರಿಸಲು ಸಿದ್ಧ’ ಎಂದು ಹೇಳಿದರು.
ಅಧಿಕಾರಿಗಳ ಜೊತೆ ವಾದ ನಡೆಸಿದ ಹೈಕೋರ್ಟ ವಕೀಲ ಜಯರಾಂ ಸಿದ್ದಿ ಅವರು `ಜಿಲ್ಲಾಡಳಿತ ಹಾಗೂ ಅಧಿಕಾರಿಗಳು ಸಿದ್ದಿ ಸಮುದಾಯದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ. ಆ ಕೆಲಸ ಆಗಿದ್ದರೆ 500ಕಿಮೀ ದೂರದಿಂದ ಇಲ್ಲಿಗೆ ಬರುವ ಅಗತ್ಯವಿರಲಿಲ್ಲ’ ಎಂದು ವಿವರಿಸಿದರು. `ಕುಡಿಯಲು ನೀರು ಹಾಗೂ ವಾಸಕ್ಕೆ ಮನೆ ಮಂಜೂರಿ ಮಾಡಿ’ ಎಂದು ಒತ್ತಾಯಿಸಿದರು.
ಕರ್ನಾಟಕ ರಾಜ್ಯ ಸಿದ್ದಿ ಜನಸೇವಾ ಟ್ರಸ್ಟಿನ ಅಧ್ಯಕ್ಷರೂ ಆಗಿರುವ ಚಿತ್ರನಟ ಪ್ರಶಾಂತ ಸಿದ್ದಿ, ಉತ್ತರ ಕನ್ನಡ ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಸಮಿತಿ ಸದಸ್ಯ ಸುರೇಶ ಸಿದ್ದಿ ನಂದೂಳ್ಳಿ, ಅಲೆಮಾರಿ ಸಮಿತಿಯ ಸದಸ್ಯ ಗಣಪತಿ ಸಿದ್ದಿ ಕೊಡಸೆ ಇನ್ನಿತರರು ನಿಯೋಗದಲ್ಲಿದ್ದರು. ಪ್ರಮುಖರಾದ ಸುರೇಶ ಕೈತಾನ್ ಸಿದ್ದಿ, ಪ್ರಾನ್ಸಿಸ್ ಸಿದ್ದಿ, ಶಂಕರ ಸಿದ್ದಿ ಹಾಸಣಗಿ, ಸಂತೋಷ ಸಿದ್ದಿ ಹೊಟ್ಕೆರೆ, ಚಂದ್ರಾ ಸಿದ್ದಿ ಹರಿಗದ್ದೆ, ನಾರಾಯಣ ಸಿದ್ದಿ ಕೊಟೆಮನೆ, ಮಂಜುನಾಥ ಸಿದ್ದಿ ಅಣಲಗಾರ್, ಗಣೆಶ್ ಸಿದ್ದಿ ಮಾಗೊಡ, ಪ್ರಕಾಶ ಸಿದ್ದಿ ಶಿರಲೆ, ಅಲ್ವಿನ್ ಸಿದ್ದಿ ಯಲ್ಲಾಪುರ ಇತರರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದರು.