ಮಳೆಗಾಲದ ಹಿನ್ನಲೆ ಸೇತುವೆಗಳು ಶಿಥಿಲಗೊಳ್ಳುವ ಸಾಧ್ಯತೆ ಹೆಚ್ಚಿದ್ದು, ಒಂದು ಊರಿನಿಂದ ಇನ್ನೊಂದು ಊರು ಬೆಸೆಯುವ ಸೇತುವೆಗಳ ಬಗ್ಗೆ ಜಿಲ್ಲಾಡಳಿತ ನಿಗಾವಹಿಸಿದೆ.
ಹೆದ್ದಾರಿ ವ್ಯಾಪ್ತಿಯಲ್ಲಿನ ಎಲ್ಲಾ ಸೇತುವೆಗಳ ದೃಡತೆಯ ಬಗ್ಗೆ ಸಂಪೂರ್ಣ ವರದಿಯನ್ನು ನೀಡುವಂತೆ ಹೆದ್ದಾರಿ ಪ್ರಾಧಿಕಾರ ಮತ್ತು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯ ಸೂಚನೆ ನೀಡಿದ್ದಾರೆ. `ಸದ್ಯ ಪೂರ್ವ ಮುಂಗಾರು ಆರಂಭಗೊoಡಿದ್ದು, ವಾಡಿಕೆಯಂತೆ ಜುಲೈ ತಿಂಗಳಲ್ಲಿ ಅತೀ ಹೆಚ್ಚಿನ ಮಳೆಯಾಗುವ ಸಾಧ್ಯತೆಗಳಿವೆ. ಜಿಲ್ಲೆಯ ಹೆದ್ದಾರಿಗಳಲ್ಲಿ ಸುರಕ್ಷಿತ ಸಂಚಾರ ಕುರಿತಂತೆ ಮುನ್ನೆಚ್ಚರಿಕೆ ಕ್ರಮವಾಗಿ ಹೆದ್ದಾರಿ ವ್ಯಾಪ್ತಿಯಲ್ಲಿರುವ ಎಲ್ಲಾ ಸೇತುವೆಗಳ ದೃಢತೆಯ ಕುರಿತಂತೆ ವಿವರವಾದ ವರದಿಯನ್ನು ಸಲ್ಲಿಸಬೇಕು’ ಎಂದವರು ಹೇಳಿದ್ದಾರೆ. ಇದರೊಂದಿಗೆ `ಯಾವುದೇ ಅವಘಡಗಳು ಸಂಭವಿಸಿದ್ದಲ್ಲಿ ಸಂಬoದಪಟ್ಟ ಅಧಿಕಾರಿಗಳನ್ನೇ ಹೊಣೆಗಾರನ್ನಾಗಿ ಮಾಡಲಾಗುವುದು’ ಎಂದು ಎಚ್ಚರಿಸಿದ್ದಾರೆ.
ಗುಡ್ಡಕುಸಿತ ಪ್ರದೇಶಗಳ ವಿವರಗಳನ್ನು ಮತ್ತು ಅಲ್ಲಿ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳುವಂತೆ ಈಗಾಗಲೇ ಸಂಬoಧಪಟ್ಟ ಹೆದ್ದಾರಿಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. `ಈ ಪ್ರದೇಶದಲ್ಲಿ ಸೂಚನಾ ಫಲಕಗಳನ್ನು ಅಳವಡಿಸಬೇಕು. ಸ್ಪಾಟರ್‌ಗಳನ್ನು ನೇಮಕ ಮಾಡಿ ನಿರಂತರವಾಗಿ ಗುಡ್ಡ ಕುಸಿತದ ಸ್ಥಳಗಳನ್ನು ಪರಿಶೀಲನೆ ನಡೆಸಬೇಕು. ಅಗತ್ಯವಿದ್ದಲ್ಲಿ ಮುಂಜಾಗ್ರತಾ ಕ್ರಮವಾಗಿ ಸಂಚಾರ ಬದಲಾವಣೆ ಮಾಡುವ ಮೂಲಕ ಯಾವುದೇ ಹಾನಿಯಾಗದಂತೆ ಗರಿಷ್ಠ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಸೂಚಿಸಲಾಗಿದೆ.
`ಹೆದ್ದಾರಿಗಳಲ್ಲಿ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯಿಂದ ನೀಡಿರುವ ಪರಿಹಾರ ಕ್ರಮಗಳನ್ನು ತಪ್ಪದೇ ಅನುಷ್ಠಾನಗೊಳಿಸಬೇಕು. ರಾತ್ರಿ ವೇಳೆ ಎಚ್ಚರಿಕೆ ನೀಡುವ ರಿಫ್ಲೆಕ್ಟರ್‌ಗಳನ್ನು ಅಳವಡಿಸಬೇಕು. ಬೀದಿ ದೀಪಗಳ ಮತ್ತು ಹೈಮಾಸ್ಟ್ ದೀಪಗಳ ಅಳವಡಿಕೆ ಮಾಡಬೇಕು. ಹೆದ್ದಾರಿಯಲ್ಲಿ ಸಂಚಾರಕ್ಕೆ ಅಡೆತಡೆಯಾದಲ್ಲಿ ತೆರವುಗೊಳಿಸಲು ಅಗತ್ಯ ಉಪಕರಣಗಳು, ಕ್ರೇನ್, ಆಂಬುಲೆನ್ಸ್ ಮತ್ತು ಅಗತ್ಯ ಸಿಬ್ಬಂದಿಯನ್ನು ಸಿದ್ದವಾಗಿಟ್ಟುಕೊಂಡಿರಬೇಕು’ ಎಂದವರು ಸೂಚನೆ ನೀಡಿದ್ದಾರೆ.
`ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ನಿರಂತರವಾಗಿ ವಾಹನಗಳನ್ನು ತಪಾಸಣೆ ನಡೆಸಬೇಕು. ಗೂಡ್ಸ್ ವಾಹನಗಳಲ್ಲಿ ಸಾರ್ವಜನಿಕರನ್ನು ಕರೆದೊಯ್ಯುವುದರ ಬಗ್ಗೆ ಮತ್ತು ಹೆಚ್ಚು ಭಾರದ ವಾಹನಗಳ ಬಗ್ಗೆ ಪರಿಶೀಲನೆ ನಡೆಸಬೇಕು’ ಎಂದು ಹೇಳಿದ್ದಾರೆ. `ಶಿರೂರು ಗುಡ್ಡ ಕುಸಿತದ ಬಳಿ ಸಂರಕ್ಷಣಾ ಕಾಮಗಾರಿಗಳನ್ನು ಶೀಘ್ರದಲ್ಲಿ ಮುಕ್ತಾಯಗೊಳಿಸಬೇಕು. ಬರ್ಗಿ ಬಳಿ ಅಪಘಾತಗಳು ನಡೆಯದಂತೆ ಬ್ಯಾರಿಕೇಡ್ ಅಳವಡಿಸಬೇಕು. ಕುಮಟಾ ಶಿರಸಿ ರಸ್ತೆ ಬಳಿ ಹೈ ಮಾಸ್ಟ್ ಅಳವಡಿಸಬೇಕು. ಕಾರವಾರ ಪ್ರೆ ಓವರ್ ಕೆಳಗೆ ಬೀದಿ ದೀಪ ಅಳವಡಿಸಬೇಕು’ ಎಂದು ಸೂಚಿಸಿದ್ದಾರೆ.
ಈ ಸಭೆಯಲ್ಲಿ ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ್, ಉಪ ವಿಭಾಗಾಧಿಕಾರಿ ಕನಿಷ್ಕ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಚಂದ್ರಶೇಖರ್ ಇದ್ದರು.