ಮೈಸೂರಿನಿಂದ ದಾಂಡೇಲಿಗೆ ಪ್ರವಾಸಕ್ಕೆ ಬಂದಿದ್ದ ಐದು ಜನ ಜಲಕ್ರೀಡೆಗಾಗಿ ತೆರಳುತ್ತಿದ್ದು, ಅವರ ಕಾರಿಗೆ ಟಿಪ್ಪರ್ ಗುದ್ದಿದೆ. ಹೀಗಾಗಿ ಮಳೆಗಾಲದ ಜಲಕ್ರೀಡೆ ಮೊಟಕುಗೊಳಿಸಿದ ಆ ಐವರು ಪ್ರವಾಸಿಗರು ಊರಿಗೆ ಮರಳಿದ್ದಾರೆ.
ಮೇ 18ರಂದು ಮೈಸೂರಿನ ರವಿಚಂದ್ರ ವನಗಿರಿಗೌಡ ಅವರು ತಮ್ಮ ಕುಟುಂಬದ ಸ್ನೇಹಿತರ ಜೊತೆ ದಾಂಡೇಲಿಗೆ ಬಂದಿದ್ದರು. ಅಲ್ಲಿ-ಇಲ್ಲಿ ಸುತ್ತಾಟದ ನಂತರ ಕಾಳಿ ನದಿಯಲ್ಲಿ ಜಲ ಸಾಹಸ ಚಟುವಟಿಕೆ ನಡೆಸಲು ನಿರ್ಧರಿಸಿದ್ದರು. ಅದರ ಪ್ರಕಾರ ಮೇ 22ರ ಮಧ್ಯಾಹ್ನ ಗ್ರೀನ್ ಹಿಡನ್ ರೆಸಾರ್ಟಿನಿಂದ ಆಲ್ಬಾ ವಾಟರ್ ಆಕ್ಟಿವಿಟಿಗೆ ತೆರಳುತ್ತಿದ್ದರು.
ಗಣೇಶಗುಡಿಯ ಅಯ್ಯಪ್ಪ ದೇವಸ್ಥಾನದ ಬಳಿಯ ತಿರುವಿನಲ್ಲಿ ರವಿಚಂದ್ರ ವನಗಿರಿಗೌಡ ಅವರು ಸಂಚರಿಸುತ್ತಿದ್ದ ಕಾರಿಗೆ ಟಿಪ್ಪರ್ ಡಿಕ್ಕಿಯಾಯಿತು. ಜೊಯಿಡಾ ಕಡೆಯಿಂದ ಜೋರಾಗಿ ಟಿಪ್ಪರ್ ಓಡಿಸಿಕೊಂಡು ಬಂದ ರಾಮನಗರದ ಲಕ್ಷ್ಮಣ ಠಾಣೆಕರ್ ಅವರು ಕಾರಿಗೆ ತಮ್ಮ ವಾಹನ ಗುದ್ದಿದರು.
ಪರಿಣಾಮ ಕಾರು ಜಖಂ ಆಯಿತು. ಕಾರಿನ ಒಳಗಿದ್ದ ರವಿಚಂದ್ರ ವನಗಿರಿಗೌಡ ಅವರ ಜೊತೆ ಮನು ಮಾದೇವನ್, ರಾಜ ಸ್ವಾಮಿನಾಯಕ, ಕಾರ್ತಿಕ ಶಿವಣ್ಣ, ಪಿನಿತ್ ಮರಿದಂಡನಾಯಕ ಸಹ ಗಾಯಗೊಂಡರು. ಆಸ್ಪತ್ರೆಗೆ ತೆರಳಿ ಚೇತರಿಸಿಕೊಂಡ ನಂತರ ಟಿಪ್ಪರ್ ಚಾಲಕನ ವಿರುದ್ಧ ಅವರು ರಾಮನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದ್ದಾರೆ.