ಮನೆಯೊಳಗೆ ನುಗ್ಗುವ ಮಳೆ ನೀರಿನ ವಿಷಯವಾಗಿ ಕಾರವಾರದಲ್ಲಿ ಎರಡು ಕುಟುಂಬಗಳ ನಡುವೆ ಹೊಡೆದಾಟ ನಡೆದಿದೆ.
ಕಾರವಾರದ ಬೈರಾ ಅತ್ರೆಯಲ್ಲಿರುವ ಛಾಯಾ ಗಾಂವ್ಕರ್ (25) ಹಾಗೂ ಅವರ ಪತಿ ಸಾಯಿನಾಥ ಗಾಂವ್ಕರ್ (35) ಅವರ ಮೇಲೆ ಪಕ್ಕದ ಮನೆಯ ಜೀವಾ ಗಾಂವ್ಕರ್ (75) ಹಾಗೂ ಕುಟುಂಬದವರು ಹಲ್ಲೆ ನಡೆಸಿದ್ದಾರೆ. ಮೇ 22ರಂದು ಕಾರವಾರದಲ್ಲಿ ಧಾರಾಕಾರ ಮಳೆ ಸುರಿದಿದ್ದು, ಈ ಮಳೆಯೇ ಹೊಡೆದಾಟಕ್ಕೆ ಕಾರಣ!
ಜೀವಾ ಗಾಂವ್ಕರ್ ಅವರ ಮನೆಯ ಚಾವಣಿಯ ನೀರು ಎದುರುಮನೆಯ ಛಾಯಾ ಗಾಂವ್ಕರ್ ಅವರ ಮನೆಯ ಮೇಲೆ ಬಿದ್ದು, ಮನೆಯ ಒಳಗಡೆ ರಾಡಿಯಾಗಿತ್ತು. `ಮಳೆ ನೀರು ಬೀಳದಂತೆ ತಡೆಯಿರಿ’ ಎಂದು ಸಾಯಿನಾಥ ಗಾಂವ್ಕರ್ ಅವರು ಜೀವಾ ಗಾಂವ್ಕರ್ ಅವರಿಗೆ ಸೂಚಿಸಿದ್ದರು. ಇದರಿಂದ ಸಿಟ್ಟಾದ ಜೀವಾ ಗಾಂವ್ಕರ್ ಅವರು ಬಡಿಗೆ ತಂದು ಬಾರಿಸಲು ಶುರು ಮಾಡಿದರು.
ಆಗ, ಜೀವಾ ಗಾಂವ್ಕರ್ ಅವರ ಪತ್ನಿ ಗುಣವಂತೆ ಗಾಂವ್ಕರ್ (65) ಮಕ್ಕಳಾದ ಸುಲೋಚನಾ ಗಾಂವ್ಕರ್ (45) ಹಾಗೂ ಲಕ್ಯಾ ಗಾಂವ್ಕರ್ (40) ಸಹ ಅಲ್ಲಿಗೆ ಬಂದರು. ಛಾಯಾ ಗಾಂವ್ಕರ್ ಹಾಗೂ ಸಾಯಿನಾಥ ಗಾಂವ್ಕರ್ ಇಬ್ಬರನ್ನು ಹಿಡಿದು ಜೀವಾ ಗಾಂವ್ಕರ್ ಕುಟುಂಬದವರು ಥಳಿಸಿದರು. ಕಟ್ಟಿಗೆಯಿಂದ ಹೊಡೆದಿದಲ್ಲದೇ, ಕೈ ಮುಷ್ಠಿಯಿಂದಲೂ ಗುದ್ದಿದರು.
ಅದಾದ ನಂತರವೂ ಜೀವಾ ಗಾಂವ್ಕರ್ ಕುಟುಂಬದವರು ಚಾವಣಿಯ ನೀರು ಎದುರುಮನೆ ಒಳಗೆ ಬೀಳುವುದನ್ನು ತಡೆಯಲಿಲ್ಲ. ಕೊನೆಗೆ ಈ ಹೊಡೆದಾಟದ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ಕದ್ರಾ ಪೊಲೀಸ್ ಠಾಣೆಯವರು ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ವರದಿ ಒಪ್ಪಿಸಿದರು.