ಉತ್ತರ ಕನ್ನಡ ಜಿಲ್ಲೆಯಲ್ಲಿ ಮಂಗನ ಕಾಯಿಲೆಗೆ ಶನಿವಾರ ಮತ್ತೊಂದು ಜೀವ ಬಲಿಯಾಗಿದೆ. ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಾಗಿದ್ದ ಹೊನ್ನಾವರದ ನಾಣಿ ಗೌಡ ಈ ದಿನ ಸಾವನಪ್ಪಿದ್ದಾರೆ.
ಹೊನ್ನಾವರದ ಹಳದಿಪುರ ಮೀನು ಮಾರುಕಟ್ಟೆ ಬಳಿ ನಾಣಿ ಗೌಡ (75) ವಾಸವಾಗಿದ್ದರು. ಕಾಡಿನಲ್ಲಿರುವ ಒಣ ಎಲೆ ಸಂಗ್ರಹಿಸಿ ಮರಳಿದ್ದ ಅವರ ಆರೋಗ್ಯದಲ್ಲಿ ವ್ಯತ್ಯಾಸವಾಗಿತ್ತು. ಅನಾರೋಗ್ಯದ ಹಿನ್ನಲೆ ಅವರು ಈಚೆಗೆ ಆಸ್ಪತ್ರೆಗೆ ಹೋಗಿದ್ದರು. ಆಗ ಅವರಲ್ಲಿ ಮಂಗನ ಕಾಯಿಲೆ ಲಕ್ಷಣಗಳು ಕಾಣಿಸಿಕೊಂಡಿದ್ದವು. ತಪಾಸಣೆ ನಡೆಸಿದಾಗ ಮೇ 9ರಂದು ಸೋಂಕು ದೃಢವಾಗಿತ್ತು.
ನಂತರ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ನಾಣಿ ಗೌಡ ಅವರು ಕಿಡ್ನಿ ಹಾಗೂ ಲಿವರ್ ಸಮಸ್ಯೆಯಿಂದಲೂ ಬಳಲುತ್ತಿದ್ದರು. ಹೀಗಾಗಿ ತೀವೃ ನಿಗಾ ಘಟಕದಲ್ಲಿ ಅವರಿಗೆ ಚಿಕಿತ್ಸೆ ನಡೆಯಿತು. ಆದರೆ, ನಾಣಿ ಗೌಡ ಅವರು ಮತ್ತೆ ಚೇತರಿಸಿಕೊಳ್ಳಲಿಲ್ಲ. ಮೇ 24ರಂದು ಅವರು ಕೊನೆಉಸಿರೆಳೆದರು.