ಶಿರಸಿ-ಕುಮಟಾ ರಸ್ತೆಯ ನಿಲೇಕಣಿ ಬಳಿ ಬಿದ್ದಿರುವ ಹೊಂಡಗಳನ್ನು ಮೂರು ದಿನದ ಒಳಗೆ ಮುಚ್ಚದೇ ಇದ್ದರೆ ಹೈಕೋರ್ಟ ಮೊರೆ ಹೋಗುವುದಾಗಿ ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ಶನಿವಾರ ಎಚ್ಚರಿಕೆ ನೀಡಿದ್ದು, ಭಾನುವಾರ ಬೆಳಗ್ಗೆಯಿಂದಲೇ ಹೆದ್ದಾರಿ ನಿರ್ವಹಣೆಯ ಗುತ್ತಿಗೆಪಡೆದ ಕಂಪನಿ ಹೊಂಡ ಮುಚ್ಚುವ ಕೆಲಸ ಶುರು ಮಾಡಿದೆ!
ಆರ್ ಎನ್ ಎಸ್ ಕಂಪನಿಯೂ ಶಿರಸಿ-ಕುಮಟಾ ಹೆದ್ದಾರಿ ಅಭಿವೃದ್ಧಿ ಹಾಗೂ ನಿರ್ವಹಣೆಯ ಹೊಣೆ ಹೊತ್ತಿದೆ. ಶಿರಸಿ ಪ್ರವೇಶದ್ವಾರದಂತಿರುವ ನಿಲೇಕಣಿ ಬಳಿ ರಸ್ತೆ ತುಂಬ ಗುಂಡಿ ಬಿದ್ದಿರುವುದು ಅರಿವಿದ್ದರೂ ಕಂಪನಿ ತಲೆಕೆಡಿಸಿಕೊಂಡಿರಲಿಲ್ಲ. ಇದರಿಂದ ಜನ ಸಾಕಷ್ಟು ಸಮಸ್ಯೆ ಅನುಭವಿಸುತ್ತಿದ್ದು, ಶಾಸಕ-ಸಚಿವರ ಬಳಿ ಸಹ ದೂರು ನೀಡಿದ್ದರು. ಆದರೆ, ಅದರಿಂದ ಯಾವ ಪ್ರಯೋಜನವೂ ಆಗಿರಲಿಲ್ಲ.
ಶಿರಸಿ-ಕುಮಟಾ ರಸ್ತೆ ಗುಂಡಿ ನೋಡಿದ ಅನಂತಮೂರ್ತಿ ಹೆಗಡೆ ಸಿಟ್ಟಾದರು. ನಿರ್ವಹಣೆ ಹೊಣೆ ಹೊತ್ತ ಕಂಪನಿಯಿoದ ಗುಂಡಿ ಮುಚ್ಚುವ ಕೆಲಸ ಆಗದೇ ಇದ್ದರೆ, ತಾವೇ ಗುಂಡಿ ಮುಚ್ಚುವುದಾಗಿ ಹೇಳಿಕೆ ನೀಡಿದರು. ಅದರೊಂದಿಗೆ ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸುವ ಬಗ್ಗೆ ನ್ಯಾಯಾಲಯದ ಮೊರೆ ಹೋಗುವ ಎಚ್ಚರಿಕೆ ನೀಡಿದರು. ಇದಾದ ನಂತರ ಸಂಸದ ವಿಶ್ವೇಶ್ವರ ಹೆಗಡೆ ಅವರು ಕಂಪನಿ ಅಧಿಕಾರಿಗಳಿಗೆ ಫೋನ್ ಮಾಡಿ ಜಾಡಿಸಿದರು.
ಇದರಿಂದ ಬೆದರಿದ ಕಂಪನಿ ಭಾನುವಾರ ಸುರಿಯುತ್ತಿರುವ ಮಳೆಯನ್ನು ಲೆಕ್ಕಿಸದೇ ಗುಂಡಿ ಮುಚ್ಚುವ ಕೆಲಸ ಶುರು ಮಾಡಿತು. ಸದ್ಯ ಕಲ್ಲು-ಸಿಮೆಂಟಿನ ಮಿಶ್ರಣವನ್ನು ಆ ರಸ್ತೆ ಮೇಲೆ ಸುರಿಯಲಾಗುತ್ತಿದೆ. ಗುಂಡಿಗಳನ್ನು ತುಂಬಿ ರಸ್ತೆ ಸರಿಪಡಿಸುವ ಕೆಲಸ ನಡೆಯುತ್ತಿದೆ.