ಜೊಯಿಡಾದ ಬಳಿಯ ಕಾಳಿ ನದಿ ಹಿನ್ನೀರಿನಲ್ಲಿ ಕೊಳೆತ ಸ್ಥಿತಿಯಲ್ಲಿ ಶವ ಸಿಕ್ಕಿದ್ದು, ಶವ ಮೇಲೆತ್ತಲು ಯಾರೂ ಸಿಗಲಿಲ್ಲ. ಹೀಗಾಗಿ ಪೊಲೀಸರೇ ಆ ಶವವನ್ನು ಮೇಲೆತ್ತಿ ಶವಾಗಾರಕ್ಕೆ ಸಾಗಿಸಿದರು.
ಜೊಯಿಡಾದ ನಾಗೋಡಾದಲ್ಲಿನ ಕಾಳಿ ನದಿ ಹಿನ್ನೀರ ಪ್ರದೇಶದಲ್ಲಿ ಶನಿವಾರ ಶವವೊಂದು ಕಾಣಿಸಿತು. ಶವ ಕೊಳೆತ ಸ್ಥಿತಿಯಲ್ಲಿದ್ದು ದುರ್ವಾಸನೆ ಬರುತ್ತಿತ್ತು. ಆ ಶವವನ್ನು ನದಿಯಿಂದ ಮೇಲೆತ್ತಲು ಯಾರೂ ಮುಂದೆ ಬರಲಿಲ್ಲ.
ಧಾರಾಕಾರ ಮಳೆಯ ನಡುವೆಯೂ ಪಿಎಸ್‌ಐ ಮಹೇಶ ಮಾಳಿ ಹಾಗೂ ಪೊಲೀಸ್ ಸಿಬ್ಬಂದಿ ಜಾಪರ್ ಅದರಗುಂಚಿ ಅವರು ನೀರಿಗಿಳಿದು ಆ ಶವ ಮೇಲೆ ತಂದರು. ಮಳೆ ರಾಡಿಯಿಂದ ನದಿ ದಡಕ್ಕೆ ವಾಹನ ಬರುವ ಹಾಗಿರಲಿಲ್ಲ. ಹೀಗಾಗಿ ಅಗ್ನಿಶಾಮಕ ಸಿಬ್ಬಂದಿ ಹಾಗೂ ಅಲ್ಲಿನ ಇತರೆ ಪೊಲೀಸ್ ಸಿಬ್ಬಂದಿ ಸೇರಿ ಆ ಶವವನ್ನು ಮೂರು ಕಿಮೀ ಹೊತ್ತು ಸಾಗಿಸಿದರು. ಕೊನೆಗೆ ಅದನ್ನು ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ತಲುಪಿಸಿದರು.
ಮೂರು ದಿನದ ಹಿಂದೆ ನಾಗೋಡಾ ಗ್ರಾಮದ ಸಂಜಯ ಬಾಪು ದೇಸಾಯಿ (44) ಕಾಣೆಯಾಗಿದ್ದು, ಅವರು ಈ ದಿನ ಶವವಾಗಿ ಸಿಕ್ಕಿದ್ದಾರೆ. ಮೇಲ್ನೋಟಕ್ಕೆ ಸಂಜಯ ಅವರು ಆತ್ಮಹತ್ಯೆಗೆ ಶರಣಾದ ಅನುಮಾನವ್ಯಕ್ತವಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಶುರು ಮಾಡಿದ್ದಾರೆ.





