ನದಿಗೆ ಬಿದ್ದ ಮೊಬೈಲ್ ಮೇಲೆತ್ತುವ ಪ್ರಯತ್ನ ನಡೆಸಿದ ಕಾರಣ ಕಾರವಾರದ ಕ್ರಿಕೆಟ್ ಆಟಗಾರ ಸಂತೋಷ್ ರಾಯ್ಕರ್ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಭಾನುವಾರ ಸಂಜೆ ಅವರ ಶವ ಸಿಕ್ಕಿದೆ.
ಕಡವಾಡ ಬಳಿಯ ಮಾಡಿಭಾಗದ ಸಂತೋಷ ರಾಯ್ಕರ್ ಕ್ರಿಕೆಟ್ ಕ್ರೀಡಾಪಟು. ಕ್ರಿಕೆಟ್ ನಡೆಯುವ ಸ್ಥಳದಲ್ಲಿ ಅವರು ಕಾಮೆಂಟರಿ ಹೇಳುವ ಕೆಲಸವನ್ನು ಮಾಡುತ್ತಿದ್ದರು. ಹೀಗಾಗಿ ಕಾರವಾರ ತಾಲೂಕಿನ ಎಲ್ಲಡೆ ಅವರು ಚಿರಪರಿಚಿತರಾಗಿದ್ದರು.
ಶನಿವಾರ ಸುಂಕೇರಿ ಸೇತುವೆ ಮೇಲೆ ನಿಂತು ಅವರು ಮೀನು ಹಿಡಿಯುತ್ತಿದ್ದರು. ಮೀನಿಗೆ ಗಾಳ ಹಾಕಿದಾಗ ಅವರ ಜೇಬಿನಲ್ಲಿದ್ದ ಮೊಬೈಲ್ ನದಿಗೆ ಬಿದ್ದಿತು. ಮೊಬೈಲ್ ಮೇಲೆತ್ತುವುದಕ್ಕಾಗಿ ಅವರು ಕಾಳಿ ನದಿಗೆ ಇಳಿದರು. ರಭಸವಾಗಿ ಹರಿಯುತ್ತಿದ್ದ ನೀರು ಸಂತೋಷ ರಾಯ್ಕರ್ ಅವರನ್ನು ಕೊಚ್ಚಿಕೊಂಡು ಸಾಗಿತು.
ಸ್ಥಳೀಯರು ನೀಡಿದ ಮಾಹಿತಿ ಪ್ರಕಾರ ರಾತ್ರಿಯಿಡಿ ಅಗ್ನಿಶಾಮಕ ಸಿಬ್ಬಂದಿ ಹುಡುಕಾಟ ನಡೆಸಿದರು. ಭಾನುವಾರವೂ ಸಂತೋಷ ಅವರ ಹುಡುಕಾಟ ನಡೆಯಿತು. ಸಂಜೆ ವೇಳೆಗೆ ಅವರ ಶವ ಸಿಕ್ಕಿತು.