OLX ಜಾಹೀರಾತು ನೋಡಿ ಕಾರು ಖರೀದಿಗೆ ಆಸಕ್ತಿವಹಿಸಿದ ಶಿರಸಿಯ ಮಹಾದೇವ ಕೋಚರೇಕರ್ ಅವರು 4.50 ಲಕ್ಷ ರೂ ಕಳೆದುಕೊಂಡಿದ್ದಾರೆ!
ಶಿರಸಿಯ ಕೆಳಗಿನ ಎಸಳೆಯಲ್ಲಿ ವಾಸವಾಗಿರುವ ಮಹಾದೇವ ಕೋಚರೇಕರ್ ಅವರು ನೆಟ್‌ವರ್ಕ ಇಂಜೀನಿಯರ್ ಆಗಿ ಕೆಲಸ ಮಾಡುತ್ತಾರೆ. ಕುಟುಂಬದ ಬಳಕೆಗಾಗಿ ಅವರು ಕಾರು ಹುಡುಕಾಟ ನಡೆಸಿದ್ದು, ಅಲ್ಲಿ-ಇಲ್ಲಿ ನೋಡಿದರೂ ಸರಿಯಾದ ಕಾರು ಸಿಕ್ಕಿರಲಿಲ್ಲ. ಹೀಗಾಗಿ ಅವರು OLX ಆಫ್ ಮೊರೆ ಹೋಗಿದ್ದರು.
ಶೃಂಗೇರಿಯ ರವಿಚಂದ್ರ ರೇವಣಕರ್ ಎಂಬಾತರು ತಮ್ಮ ಕಾರು ಮಾರಾಟಕ್ಕಿರುವ ಬಗ್ಗೆ OLXನಲ್ಲಿ ಮಾಹಿತಿ ಹಂಚಿಕೊOಡಿದ್ದರು. ಕೆಸರಿ ಬಣ್ಣದ ನೆಕ್ಸಾನ್ ಕಾರಿನ ಫೋಟೋ ನೋಡಿದ ಮಹಾದೇವ ಕೋಚರೇಕರ್ ಅವರು ಅಲ್ಲಿರುವ ಸಂಖ್ಯೆಗೆ ಫೋನ್ ಮಾಡಿದರು. 5 ಲಕ್ಷ ರೂಪಾಯಿಗೆ ವ್ಯವಹಾರವನ್ನು ಕುದುರಿಸಿದರು.
2024ರ ಅಕ್ಟೊಬರ್ 10ರಿಂದ 29 ನವೆಂಬರ್‌ವರೆಗೆ ರವಿಚಂದ್ರ ರೇವಣಕರ್ ಅವರಿಗೆ ಗೂಗಲ್ ಫೇ ಮೂಲಕ 4.50 ಲಕ್ಷ ರೂ ಹಣ ಪಾವತಿ ಮಾಡಿದರು. ಆದರೆ, ಮಾತುಕಥೆ ಪ್ರಕಾರ ರವಿಚಂದ್ರ ರೇವಣಕರ್ ಅವರು ಕಾರು ಕೊಡಲಿಲ್ಲ. ಕೊಟ್ಟ ಕಾಸನ್ನು ಮರಳಿಸಲಿಲ್ಲ. ಹೀಗಾಗಿ ಇದೀಗ ರವಿಚಂದ್ರ ರೇವಣಕರ್ ಅವರ ವಿರುದ್ಧ ಮಹಾದೇವ ಕೋಚರೇಕರ್ ಪೊಲೀಸ್ ದೂರು ನೀಡಿದ್ದಾರೆ.
ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ರವಿಚಂದ್ರ ರೇವಣಕರ್ ಅವರ ಹುಡುಕಾಟ ನಡೆಸಿದ್ದಾರೆ.