ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ವರ್ಷದಿಂದ ವರ್ಷಕ್ಕೆ ಅಪಘಾತಗಳ ಪ್ರಮಾಣ ಹೆಚ್ಚಾಗುತ್ತಿದೆ. ಇದರಿಂದ ಸಾವು-ನೋವಿನ ಸಂಖ್ಯೆಯೂ ಅಧಿಕವಾಗಿದೆ.
ಮಾಹಿತಿ ಹಕ್ಕು ಕಾಯ್ದೆ ಅಡಿಪಡೆದ ಅಧಿಕೃತ ದಾಖಲೆಗಳ ಪ್ರಕಾರ 2020ರಿಂದ ಈವರೆಗೆ ಯಲ್ಲಾಪುರ ತಾಲೂಕು ಒಂದರಲ್ಲಿಯೇ ರಸ್ತೆ ಅಪಘಾತದಲ್ಲಿ 152 ಜನ ಪ್ರಾಣಬಿಟ್ಟಿದ್ದಾರೆ. ಸುರಕ್ಷಿತ ಪ್ರಯಾಣಕ್ಕೆ ಆದ್ಯತೆ ಕೊಡದಿರುವುದೇ ಅಪಘಾತಗಳಿಗೆ ಮೂಲ ಕಾರಣ. ಸಂಚಾರಿ ನಿಯಮಗಳ ಪಾಲನೆಯಲ್ಲಿ ನಿರ್ಲಕ್ಷ ತೋರುವವರ ಸಂಖ್ಯೆ ಹೆಚ್ಚಾಗಿದ್ದು, ಸಾಕಷ್ಟು ಅರಿವು ಮೂಡಿಸಿದರೂ ನಿಯಮಗಳ ಪಾಲನೆ ಆಗುತ್ತಿಲ್ಲ. ಇದರ ಪರಿಣಾಮವಾಗಿ ಸಾವು-ನೋವಿನ ಸಂಖ್ಯೆಯೂ ಏರಿಕೆಯಾಗುತ್ತಿದೆ.
ಸರಕು ಸಾಕಾಣಿಕಾ ವಾಹನದಲ್ಲಿ ಪ್ರಯಾಣಿಕರ ಸಾಗಾಟ, ಹೆಲ್ಮೆಟ್ ಧರಿಸದೇ ಬೈಕ್ ಓಡಿಸುವುದು, ಮದ್ಯ ಸೇವಿಸಿ ವಾಹನ ಚಾಲನೆ, ಅಡ್ಡಾದಿಡ್ಡಿ ವಾಹನ ಓಡಿಸುವಿಕೆ, ನಿದ್ದೆ ಮಂಪರಿನಲ್ಲಿ ಭಾರೀ ವಾಹನಗಳ ಚಾಲನೆ ಅಪಘಾತಗಳಿಗೆ ಸಾಮಾನ್ಯ ಕಾರಣ. ರಸ್ತೆ ಹಾಗೂ ಪಾದಚಾರಿ ಮಾರ್ಗ ಅತಿಕ್ರಮಣ, ಅತಿಯಾದ ವೇಗ ಹಾಗೂ ಇನ್ನಿತರ ವಾಹನ ಹಿಂದಿಕ್ಕುವ ಬರದಲ್ಲಿನ ದಾವಂತವೂ ಅಪಘಾತ ಪ್ರಮಾಣವನ್ನು ಹೆಚ್ಚಿಸಿದೆ.
ಲಭ್ಯವಿರುವ ದಾಖಲೆಗಳ ಪ್ರಕಾರ, 2020ರಲ್ಲಿ 24ಜನ ರಸ್ತೆ ಅಪಘಾತದಿಂದ ಸಾವನಪ್ಪಿದ್ದಾರೆ. 2021ರಲ್ಲಿ 21 ಜನ ಪ್ರಾಣಬಿಟ್ಟಿದ್ದು, ಅದಾದ ನಂತರ ಅಪಘಾತದಲ್ಲಿ ಸಾವನಪ್ಪಿದವರ ಸಂಖ್ಯೆ ಏರುತ್ತಲೇ ಇದೆ. 2022 ಹಾಗೂ 2023ರಲ್ಲಿ 27 ಜನ, 2024ರಲ್ಲಿ 33 ಜನ ರಸ್ತೆ ಅಪಘಾತದಲ್ಲಿ ಜೀವ ಬಿಟ್ಟಿದ್ದಾರೆ. 2025ರ ಶುರುವಿನಿಂದ ಈವರೆಗೆ 20 ಪ್ರಯಾಣಿಕರು ಅಪಘಾತದಲ್ಲಿ ಜೀವ ಕಳೆದುಕೊಂಡಿದ್ದಾರೆ. ಅಪಘಾತದಲ್ಲಿ ಗಂಭೀರ ಪ್ರಮಾಣದಲ್ಲಿ ಗಾಯಗೊಂಡವರು ಹಾಗೂ ಅಂಗವಿಕಲರಾದವರ ಲೆಕ್ಕ ಇಲ್ಲಿಲ್ಲ.
`ಸಂಚಾರಿ ನಿಯಮ ಪಾಲಿಸಿ.. ಅಪಘಾತಗಳನ್ನು ತಪ್ಪಿಸಿ.. ಸುರಕ್ಷಿತವಾಗಿ ವಾಹನ ಚಲಾಯಿಸಿ’