ಕಾರವಾರದ ಮಧುರಾ ಎಂ ನಾಯಕ ಅವರು ಹೋಮಿಯೋಪತಿ ವಿಭಾಗದಲ್ಲಿ ತಮ್ಮ ಅಧ್ಯಯನ ಪೂರ್ಣಗೊಳಿಸಿದ್ದಾರೆ. ಪುಣೆಯ ಡಾ ಡಿ ವೈ ಪಾಟೀಲ ವಿದ್ಯಾಪೀಠದ ಹೋಮಿಯೋಪಥಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರ ನಡೆಸಿದ ಡಾಕ್ಟರ್ ಆಫ್ ಮೆಡಿಸಿನ್ (ಎಂಡಿ) ಪರೀಕ್ಷೆಯಲ್ಲಿ ಅವರು ವಿಶ್ವವಿದ್ಯಾಲಯಕ್ಕೆ ದ್ವಿತೀಯ ಸ್ಥಾನಪಡೆದಿದ್ದಾರೆ.
ಮಧುರಾ ನಾಯಕ ಅವರು ಬ್ಯಾಚುಲರ್ ಆಫ್ ಹೋಮಿಯೋಪಥಿಕ್ ಮೆಡಿಸಿನ್ ಮತ್ತು ಸರ್ಜರಿ (ಬಿಎಚ್‌ಎಂಎಸ್) ಪದವಿಯನ್ನು ಮಂಗಳೂರಿನ ಫಾದರ್ ಮುಲ್ಲರ್ ಕಾಲೇಜಿನಲ್ಲಿ ಪೂರೈಸಿದ್ದರು. ಮಾನವನ ಶರೀರ ಹಾಗೂ ರೋಗಗಳ ಬಗ್ಗೆ ನಿರಂತರ ಅಧ್ಯಯನ ನಡೆಸಿರುವ ಮಧುರಾ ನಾಯಕ ಅವರಿಗೆ ಈ ಹಿಂದೆಯೇ ಉಪನ್ಯಾಸಕ ಹುದ್ದೆಯ ಉದ್ಯೋಗವೊಂದು ಕರೆದಿತ್ತು. ಆದರೆ, ಅವರು ಅದನ್ನು ಒಪ್ಪದೇ ತಮ್ಮ ಅಧ್ಯಯನ ಹಾಗೂ ಸಂಶೋಧನೆಯನ್ನು ಮುಂದುವರೆಸಿದ್ದರು.
ಸದ್ಯ ಎಂಡಿ ತೇರ್ಗಡೆಯಾದ ಮಧುರಾ ನಾಯಕ ಅವರಿಗೆ ಕಾಲೇಜಿನಲ್ಲಿ ಆಯೋಜಿಸಿದ್ದ ಪದವಿ ಪ್ರದಾನ ಸಮಾರಂಭದಲ್ಲಿ ಪ್ರಿನ್ಸಿಪಾಲ್ ಡಿ ಬಿ ಶರ್ಮಾ ಅವರು ಗೌರವಪೂರ್ವಕವಾಗಿ ಪದವಿ ಪ್ರದಾನ ಮಾಡಿದರು. `ವಿವಿಧ ಆಸ್ಪತ್ರೆಗಳಲ್ಲಿ ಹುದ್ದೆ ಖಾಲಿಯಿದ್ದು, ಅವಕಾಶ ಸಿಕ್ಕರೆ ಅದನ್ನು ಬಳಸಿಕೊಳ್ಳುವೆ. ಇಲ್ಲವಾದಲ್ಲಿ ಸ್ಥಳೀಯವಾಗಿ ಕ್ಲಿನಿಕ್ ತೆರೆದು ರೋಗಿಗಳ ಸೇವೆ ಮಾಡುವೆ’ ಎಂದು ಮಧುರಾ ನಾಯಕ ಅವರು ತಮ್ಮ ಮುಂದಿನ ಗುರಿಯ ಬಗ್ಗೆ ಮಾತನಾಡಿದರು. ಮಧುರಾ ನಾಯಕ ಅವರು ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಅವರ ಪುತ್ರಿ. ಕುಟುಂಬದವರ ಪ್ರೋತ್ಸಾಹವೂ ಅವರ ಸಾಧನೆಗೆ ಮುಖ್ಯ ಪ್ರೇರಣೆ.
ಮನುಷ್ಯನ ದೇಹ ಹಾಗೂ ರೋಗದ ಲಕ್ಷಣಗಳನ್ನು ಅಭ್ಯಯಿಸಿ ಅವರಿಗೆ ಅಗತ್ಯವಿರುವ ಔಷಧಿಯನ್ನು ಮಧುರಾ ನಾಯಕ ಅವರು ಸ್ವತಃ ಸಿದ್ಧಪಡಿಸಿ ಕೊಡುತ್ತಾರೆ. ಆನ್‌ಲೈನ್ ಮೂಲಕ ರೋಗಿಗಳನ್ನು ಸಂದರ್ಶಿಸಿ ವೈದ್ಯಕೀಯ ಸೇವೆ ನೀಡುತ್ತಾರೆ. ಇದಕ್ಕಾಗಿ ಅವರು ಪ್ರತ್ಯೇಕ ವೆಬ್‌ಸೈಟ್ ಅಭಿವೃದ್ಧಿಪಡಿಸುತ್ತಿದ್ದು, ತಮ್ಮ ಇನ್ಸ್ಟಾಗ್ರಾಮ್ ಪುಟದಲ್ಲಿಯೂ ವಿವಿಧ ರೋಗ ಹಾಗೂ ಅದನ್ನು ಗುಣಪಡಿಸುವ ವಿಧಾನದ ಬಗ್ಗೆ ಅವರು ನಿರಂತರವಾಗಿ ಮಾಹಿತಿ ಪ್ರಕಟಿಸುತ್ತ ಬಂದಿದ್ದಾರೆ.
ಮಧುರಾ ನಾಯಕ ಅವರ ಇನ್ಸ್ಟಾಗ್ರಾಮ್ ಲಿಂಕ್: https://www.instagram.com/heal_with._homoeopathy/?igsh=Ymt5bjRnN2JwdDll#