ದಾಂಡೇಲಿಯ ಸಮಗ್ರ ಅಭಿವೃದ್ಧಿಗಾಗಿ ಅಲ್ಲಿನ ಹೋರಾಟಗಾರರು ಸರ್ಕಾರವನ್ನು ಒತ್ತಾಯಿಸುತ್ತಲೇ ಬಂದಿದ್ದಾರೆ. ಅದರ ಪರಿಣಾಮವಾಗಿ ಇದೀಗ ಕೆಲ ಆಶಾದಾಯಕ ಬೆಳವಣಿಗೆಗಳು ನಡೆದಿದೆ.
ದಾಂಡೇಲಿಯಲ್ಲಿನ ಬಡವರಿಗೆ ಜಿ+ ಮನೆ ನಿರ್ಮಾಣವಾಗಬೇಕು ಎಂದು ಹೋರಾಟಗಾರರು ಆಗ್ರಹಿಸಿದ್ದರು. ಈ ಬಗ್ಗೆ ನಗರಸಭೆ ಪೌರಾಯುಕ್ತರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಆ ಬೇಡಿಕೆ ಇದೀಗ ಈಡೇರಿದೆ. ಶಾಸಕ ಆರ್ ವಿ ದೇಶಪಾಂಡೆ ಅವರು ಜನರ ಬೇಡಿಕೆಯನ್ನು ಈಡೇರಿಸಿದ್ದು, ಸ್ಥಗಿತಗೊಂಡಿದ್ದ ಕಾಮಗಾರಿ ವೇಗಪಡೆದಿದೆ. ಅದರೊಡನೆ ದಾಂಡೇಲಿಯ ವಿವಿಧ ಮಾರ್ಗಗಳಲ್ಲಿ ಹೊಸ ಬಸ್ಸು, ದಾಂಡೇಲಿ ಬೆಂಗಳೂರಿಗೆ ರೈಲು, ಅರಣ್ಯ ಭೂಮಿ ಅತಿಕ್ರಮಣ ಸಮಸ್ಯೆ, ನಗರ ಯೋಜನಾ ಪ್ರಾಧಿಕಾರ ಕಚೇರಿ ಸ್ಥಾಪನೆ, ಇಎಸ್‌ಐ ಆಸ್ಪತ್ರೆ ಮೇಲ್ದರ್ಜೆಗೆ ಏರಿಸುವಿಕೆ, ಈಗಿನ ಆಸ್ಪತ್ರೆ ಸಮಸ್ಯೆ ನಿವಾರಣೆ, ಶಿಕ್ಷಣಾಧಿಕಾರಿ ಕಚೇರಿ ನಿರ್ಮಾಣ ಸೇರಿ ಇನ್ನೂ ಅನೇಕ ಬೇಡಿಕೆಗಳು ಬಾಕಿ ಉಳಿದಿವೆ.
ಹೋರಾಟಗಾರರ ಬೇಡಿಕೆಗಳ ಪೈಕಿ ಗೃಹ ನಿರ್ಮಾಣ ಕಾಮಗಾರಿಗೆ ಶಾಸಕ ಆರ್ ವಿ ದೇಶಪಾಂಡೆ ಅವರು ಒತ್ತು ನೀಡಿದ್ದು, 48 ಮನೆಗಳ ಕಾಮಗಾರಿ ಶುರುವಾಗಿದೆ. ಉಳಿದ ಮನೆ ನಿರ್ಮಾಣ ಕೆಲಸವನ್ನು ಹಂತ ಹಂತವಾಗಿ ಶುರು ಮಾಡಲು ಅವರು ಆದೇಶಿಸಿದ್ದಾರೆ. ಜೊತೆಗೆ ಬ್ಯಾಂಕ್ ಅಧಿಕಾರಿಗಳ ಜೊತೆ ಸಭೆ ನಡೆದಿದ್ದು, ಮನೆ ಫಲಾನುಭವಿಗಳಿಗೆ ಅಗತ್ಯ ಸಾಲ ನೀಡಲು ಸೂಚಿಸಲಾಗಿದೆ. ಇನ್ನೂ ಹೋರಾಟಗಾರರ ಬೇಡಿಕೆಯಂತೆ, ದಾಂಡೇಲಿಯಿAದ ಪಣಜಿಗೆ ಬಸ್ ಬಿಡಲಾಗಿದೆ.
ತಮ್ಮ ಬೇಡಿಕೆ ಈಡೇರಿಸಿದಕ್ಕಾಗಿ ಹೋರಾಟ ಸಮಿತಿಯ ಅಕ್ರಂ ಖಾನ್ ಅವರು ಜನಪ್ರತಿನಿಧಿಗಳಿಗೆ ಕೃತಜ್ಞತೆ ಸಲ್ಲಿಸಿದ್ದು, ಉಳಿದ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿದ್ದಾರೆ. ಈ ಬಗ್ಗೆ ಶಾಸಕ ಆರ್ ವಿ ದೇಶಪಾಂಡೆ ಅವರ ಜೊತೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೂ ಪತ್ರ ಬರೆಯುವ ಬಗ್ಗೆ ಹೋರಾಟಗಾರರು ನಿರ್ಧರಿಸಿದ್ದಾರೆ. ಪ್ರಮುಖರಾದ ಶ್ಯಾಮ ಬೆಂಗಳೂರು, ಗೌಸ್ ಬೇಟಗೇರಿ, ಮುಜಿಬಾ ಛಬ್ಬಿ, ಶಜಾ ದಿ ಕಲ್ಸಾಪುರ್, ದತ್ತಾತ್ರೇಯ ಹೆಗಡೆ, ಧನಂಜಯ ಕಲ ಗುಟಕರ, ಸಲೀಂ ಸಯ್ಯದ ಇತರರು ಈ ವೇಳೆ ಇದ್ದರು.