40 ವರ್ಷಗಳಿಂದ ಮೂರ್ತಿ ಕೆತ್ತುವ ಕೆಲಸ ಮಾಡಿಕೊಂಡಿದ್ದ ಪೊನ್ನಪ್ಪ ಎ ಎಂಬಾತರು ಇಳಿ ವಯಸ್ಸಿನಲ್ಲಿ ಸಿದ್ದಾಪುರದ ಪುನೀತ್ ರಾಜಕುಮಾರ್ ಆಶ್ರಯಧಾಮ ಸೇರಿದ್ದು, ಭಾನುವಾರ ರಾತ್ರಿ ಅವರು ನಿಧನರಾದರು. ಅನಾಥಾಶ್ರಮದ ಮುಖ್ಯಸ್ಥ ನಾಗರಾಜ ನಾಯಕ ಅವರು ಅಂತ್ಯ ಸಂಸ್ಕಾರ ನಡೆಸಿದರು.
ಕೇರಳ ಮೂಲಕ ಪೊನ್ನಪ್ಪ ಅವರು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಮರದ ಮೂರ್ತಿಗಳ ಕೆತ್ತನೆ ಕೆಲಸ ಮಾಡಿಕೊಂಡಿದ್ದರು. ವಯಸ್ಸಾದ ಕಾರಣ ಅವರು ಅನಾರೋಗ್ಯಕ್ಕೆ ಒಳಗಾಗಿದ್ದು, ಪೊನ್ನಪ್ಪ ಅವರನ್ನು ಕುಟುಂಬದವರು ಹತ್ತಿರ ಸೇರಿಸಿಕೊಂಡಿರಲಿಲ್ಲ. ಆಗ ಶಿವಮೊಗ್ಗದ ಕಾಂಗ್ರೆಸ್ ಮುಖಂಡ ವಿಲ್ಸನ್ ಗೊನ್ಸಾಲ್ವಿಸ್, ಬಸವರಾಜ, ಅಂಕಿತ, ರಾಜ, ವಿಲ್ಸನ್ ಡಯಾಸ್ ಸೇರಿ ಪೊನ್ನಪ್ಪ ಅವರನ್ನು ಸಿದ್ದಾಪುರಕ್ಕೆ ಕರೆತಂದಿದ್ದರು.
ಆಹಾರ ಸೇವಿಸಲು ಆಗದ ಸ್ಥಿತಿಯಲ್ಲಿರುವಾಗ ಸಿದ್ದಾಪುರದ ಪುನೀತ್ ರಾಜಕುಮಾರ್ ಆಶ್ರಯಧಾಮ ಅನಾಥಾಶ್ರಮದಲ್ಲಿ ಆಶ್ರಯದಾಮಕ್ಕೆ ಆಗಮಿಸಿದ್ದರು. 70 ವರ್ಷದ ಅವರನ್ನು ಆಶ್ರಮದವರು ಆರೈಕೆ ಮಾಡಿದ್ದರು. ಆಸ್ಪತ್ರೆಗೆ ಕರೆದೊಯ್ದು ಮೂಗಿನ ಮೂಲಕ ಪೈಪ್ ಅಳವಡಿಸಿ ಆಹಾರ ಕೊಟ್ಟು ಅವರನ್ನು ಬದುಕಿಸಿಕೊಂಡಿದ್ದರು. ಆದರೆ, ಶನಿವಾರ ರಾತ್ರಿ ಅವರು ಭೂ ಲೋಕದ ಯಾತ್ರೆ ಮುಗಿಸಿದರು.
ಸಾವಿನ ಸುದ್ದಿ ಕೇಳಿದ ನಂತರವೂ ಶವಪಡೆಯಲು ಪೊನ್ನಪ್ಪ ಅವರ ಕುಟುಂಬದವರು ಬರಲಿಲ್ಲ. ಹೀಗಾಗಿ ಶಿರಸಿಯ ವಿದ್ಯಾನಗರ ರುದ್ರಭೂಮಿಯಲ್ಲಿ ನಾಗರಾಜ ನಾಯ್ಕ ಅವರೇ ಆ ಶವದ ಅಂತ್ಯ ಸಂಸ್ಕಾರ ಮಾಡಿದರು. ಶಿರಸಿ ವಿದ್ಯಾನಗರ ರುದ್ರಭೂಮಿಯ ಮುಖ್ಯಸ್ಥರಾದ ವಿ ಪಿ ಹೆಗಡೆ ವೈಶಾಲಿ ಹಾಗೂ ರುದ್ರಭೂಮಿಯ ಸಿಬ್ಬಂದಿ ಗಣಪತಿ ಅವರು ಸಾಕಷ್ಟು ನೆರವು ನೀಡಿದ್ದು, ಇದನ್ನು ನಾಗರಾಜ ನಾಯ್ಕ ಅವರು ಸ್ಮರಿಸಿದರು.