ಲಕ್ಷಾಂತರ ರೂಪಾಯಿ ಪ್ರವೇಶ ಶುಲ್ಕ ಸ್ವೀಕರಿಸಿ ಪಾಠ ಮಾಡುವ ಶಿಕ್ಷಣ ಸಂಸ್ಥೆಗಳ ನಡುವೆ ಹೊನ್ನಾವರದ ಖಾಸಗಿ ವಿದ್ಯಾಸಂಸ್ಥೆಯೊoದು ಬರೇ ಒಂದು ರೂಪಾಯಿ ಪ್ರವೇಶ ಶುಲ್ಕದೊಂದಿಗೆ ಶಿಕ್ಷಣ ನೀಡಲು ಮುಂದಾಗಿದೆ!
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 90ಕ್ಕಿಂತ ಹೆಚ್ಚಿನ ಅಂಕಪಡೆದ ವಿದ್ಯಾರ್ಥಿಗಳಿಗೆ ಹೊನ್ನಾವರದ `ಮಾರುತಿ ರೆಸಿಡೆನ್ಸಿಯಲ್ ಸ್ಕೂಲ್’ 1ರೂ ಪ್ರವೇಶಾತಿ ಶುಲ್ಕದೊಂದಿಗೆ ಎರಡು ವರ್ಷದ ಪಿಯುಸಿ ಶಿಕ್ಷಣ ನೀಡುವುದಾಗಿ ಘೋಷಿಸಿದೆ. ಅದೂ ಸಹ ಸಿಬಿಎಸ್‌ಸಿ ಆಧಾರಿತ ಶಿಕ್ಷಣ ಪದ್ಧತಿಯಲ್ಲಿ ಇಲ್ಲಿ ಪಾಠ ಮಾಡಲಾಗುತ್ತದೆ.
ವೀರಾಂಜಿನೇಯ ಎಜ್ಯುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟಿನಿಂದ ಈ ವಿದ್ಯಾ ಸಂಸ್ಥೆ ನಡೆಯುತ್ತಿದೆ. ಈ ಶಾಲೆಯಲ್ಲಿ ನರ್ಸರಿಯಿಂದ ಪಿಯುಸಿವರೆಗೆ ಕಲಿಕೆಗೆ ಅವಕಾಶವಿದೆ. ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳೊಂದಿಗೆ ಆಧ್ಯಾತ್ಮ, ನೈತಿಕತೆಯ ಬಗ್ಗೆಯೂ ಇಲ್ಲಿ ಪಾಠ ಮಾಡಲಾಗುತ್ತದೆ. ಮಕ್ಕಳಲ್ಲಿ ಸೃಜನಶೀಲತೆಯ ಜೊತೆ ಸೇವಾಗುಣ ಬೆಳಸುವಲ್ಲಿ ಈ ವಿದ್ಯಾಸಂಸ್ಥೆ ಮುಂಚೂಣಿಯಲ್ಲಿದೆ.
ಪದವಿ ಪೂರ್ವ ಶಿಕ್ಷಣ ವಿಷಯವಾಗಿ ಎರಡು ವರ್ಷದ ಹಿಂದೆ ಸಿಬಿಎಸ್‌ಸಿ ಆಧಾರಿತ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗವನ್ನು ಶುರು ಮಾಡಲಾಗಿದ್ದು, ಸದ್ಯ ಅಲ್ಲಿನ ಮಕ್ಕಳಿಗೆ 1ರೂ ಪ್ರವೇಶ ಶುಲ್ಕಪಡೆದು ಪಿಯುಸಿ ಶಿಕ್ಷಣ ಕಲಿಸಲು ಆಡಳಿತ ಮಂಡಳಿ ನಿರ್ಧರಿಸಿದೆ. ಶಿಕ್ಷಣದಿಂದ ಮಾತ್ರ ಸಮಾಜ ತಿದ್ದಲು ಸಾಧ್ಯ ಎಂದು ನಂಬಿರುವ ಮಾರುತಿ ಗುರೂಜಿ ಅವರು 1 ರೂಪಾಯಿ ದರದಲ್ಲಿ ಶಿಕ್ಷಣ ನೀಡುವ ಸಂಕಲ್ಪ ಮಾಡಿದ್ದಾರೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 90ಕ್ಕಿಂತ ಹೆಚ್ಚು ಅಂಕಪಡೆದ ಎಲ್ಲರೂ ಇಲ್ಲಿ 1ರೂ ದರದಲ್ಲಿ ಶಿಕ್ಷಣಪಡೆಯಲು ಅರ್ಹರು. ಅದನ್ನುಹೊರತುಪಡಿಸಿ ಬೇರೆ ಯಾವ ಹೊಸ ನಿಯಮಗಳು ಇಲ್ಲ. `ಈ ವರ್ಷ 1 ರೂಪಾಯಿ ದರದಲ್ಲಿ ಪಿಯುಸಿ ಶಿಕ್ಷಣ ನೀಡಲು ಉದ್ದೇಶಿಸಲಾಗಿದೆ. ಇನ್ಮುಂದೆ ಪ್ರತಿ ವರ್ಷವೂ ಈ ಯೋಜನೆ ಜಾರಿಯಲ್ಲಿರಲಿದೆ’ ಎಂದು ಶಾಲೆಯ ಆಡಳಿತ ಮಂಡಳಿಯವರು ಮಾಹಿತಿ ನೀಡಿದರು.
ನಿಮ್ಮ ಮಕ್ಕಳನ್ನು ಈ ಶಾಲೆಗೆ ಸೇರಿಸಲು ಇಲ್ಲಿ ಫೋನ್ ಮಾಡಿ: 6361019456





