ದಾಂಡೇಲಿಯ ಹುಸೇನ್ ಸಾಬ್ ಲತಪ್ಪನವರ್ ಎಂಬಾತರ ಪತ್ನಿ ಸಾವನಪ್ಪಿದಾಗ ಅವರಿಗೆ ಸಾಂತ್ವಾನ ಹೇಳಲು ಆಗಮಿಸಿದ್ದ ಭಟ್ಕಳದ ಮೂವರು ಅವರ ಬಳಿಯಿದ್ದ 7 ತಿಂಗಳ ಹಸುಗೂಸನ್ನು ಅಪಹರಿಸಿದ್ದಾರೆ.
ಹುಸೇನ್‌ಸಾಬ್ ಅವರ ಪತ್ನಿ 8 ತಿಂಗಳ ಹಿಂದೆ ಸಾವನಪ್ಪಿದ್ದರು. ಆಗ, ಅವರ ಮನೆಗೆ ಇಬ್ಬರು ಮಹಿಳೆಯರೊಂದಿಗೆ ಒಬ್ಬ ಪುರುಷ ಆಗಮಿಸಿ ಸಾಂತ್ವಾನ ಹೇಳಿದ್ದರು. ನಂತರ ಹುಸೇನ್‌ಸಾಬ್ ಅವರ ಫೋನ್ ನಂ ಪಡೆದು ತಮ್ಮ ಫೋನ್ ನಂ ನೀಡಿದ್ದರು. ಆಗಾಗ ಫೊನ್ ಮೂಲಕ ಹುಸೇನ್‌ಸಾಬ್ ಬಳಿ ಮಾತನಾಡುತ್ತಿದ್ದ ಅವರು `ಒಮ್ಮೆ ಭಟ್ಕಳಕ್ಕೆ ಬನ್ನಿ’ ಎಂದು ಒತ್ತಾಯಿಸುತ್ತಲೇ ಇದ್ದರು.
ಅವರ ಆಮಂತ್ರಣದ ಮೇರೆಗೆ ಹುಸೇನ್‌ಸಾಬ್ ಜೂ 18ರಂದು ಮಗುವಿನ ಜೊತೆ ಭಟ್ಕಳಕ್ಕೆ ತೆರಳಿದ್ದಾರೆ. ಆಗ ಖಲಿಜಾ ಹೋಟೆಲ್ ಎದುರು ಮಗುವಿನ ಜೊತೆ ಆಟವಾಡುತ್ತಿದ್ದ ಆ ಮೂವರು ಅಪರಿಚಿತರು ರಾತ್ರಿ 10 ಗಂಟೆ ವೇಳೆಗೆ ಮಗುವಿನ ಜೊತೆ ನಾಪತ್ತೆಯಾಗಿದ್ದಾರೆ. ಇದರಿಂದ ಕಂಗಾಲಾದ ಹುಸೇನ್‌ಸಾಬ್ ಅವರಿಗೆ ಪದೇ ಪದೇ ಪೋನಾಯಿಸಿದ್ದು, `ಮಗು ಸುರಕ್ಷಿತವಾಗಿದೆ’ ಎಂದಷ್ಟೇ ಹೇಳಿದ್ದಾರೆ.
ಜೂ 21ಕ್ಕೆ ವಿಡಿಯೋ ಕಾಲ್ ಮಾಡಿದಾಗ ಮಗುವಿನ ಮುಖ ಕಾಣಿಸಿದ್ದು, `ಮಗುವನ್ನು ಕರೆದುಕೊಂಡು ಬರುತ್ತೇವೆ’ ಎಂದು ತಿಳಿಸಿ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. `ತನ್ನ ಮಗು ಜೈಲಾನಿ’ಯನ್ನು ಹುಡುಕಿಕೊಡಿ’ ಎಂದು ಇದೀಗ ಹುಸೇನ್ ಸಾಬ್ ಭಟ್ಕಳ ಪೊಲೀಸರಿಗೆ ಮನವಿ ಮಾಡಿದ್ದಾರೆ.
Discussion about this post