ಜೀವನದ ಉದ್ದಕ್ಕೂ ಹೊರಾಡುತ್ತೇವೆ. ಅದೆಷ್ಟೋ ಚಪ್ಪಲಿಗಳು ಅಲೆದಾಟದಲ್ಲೇ ಸವೆದು ಹೋಗುತ್ತದೆ. ಯಾಕೆ ಅಲೆಯುತ್ತೇವೆ? ಯಾಕೆ ಹೋರಾಡುತ್ತೇವೆ? ಯಾವುದಕ್ಕೂ ಉತ್ತರವಿಲ್ಲ. ಹುಟ್ಟಿದ್ದೇವೆ, ಬದುಕಬೇಕು, ಬದುಕುತ್ತಿದ್ದೇವೆ. ಒಂದು ಸಾಚುರೇಷನ್ನಿಗೆ ಹೋದ ನಂತರ, ಜೀವನ ಇಷ್ಟೇನಾ? ಎಂದೆನ್ನಿಸುತ್ತೆ. ಸಂಸಾರದ ಒತ್ತಡ, ಬಾಸ್ ಕೊಡುವ ಕಿರಿಕಿರಿಯಾದ ಟಾಸ್ಕು, ಯಾವುದೋ ಭಾಷೆ ಬಾರದ ಮ್ಯಾನೆಜರ್‌ನ ಬೈಗುಳ, ತಿಂಗಳಾಂತ್ಯದ ಇಎಂಐ, ಮಕ್ಕಳ ಪೀಸು, ಹೆಂಡತಿಯ ತಲೆಹರಟೆ, ಇವೆಲ್ಲದೂ ಸಾಕು ಎನ್ನಿಸುತ್ತದೆ. ಮನಸ್ಸಲ್ಲಿನಲ್ಲೊಂದು ಒಣ ವೈರಾಗ್ಯ ಹುಟ್ಟಿದ ನಂತರ ನೀವು ನೆಮ್ಮದಿಯನ್ನ ಹುಡುಕುತ್ತ ಅಲೆಯುತ್ತೀರಿ. ಕೆಲವರು ಟೆಂಪಲ್ ರನ್ ಮಾಡಿದರೆ, ಕೆಲವರು ಸ್ವಾಮಿಗಳನ್ನ, ಭವಿಷ್ಯಗಾರರನ್ನ ನಂಬಿ ಬದುಕುತ್ತಾರೆ. ನಂಬಿಕೆ ನಂಬಿಕೆ ಆಗೆ ಇದ್ದರೆ ಪರವಾಗಿಲ್ಲ. ನಂಬಿಕೆ ಅತಿ ಯಾಗಿ ಬಿಟ್ಟರೆ? ಯಾವುದೋ ಸ್ವಾಮಿ ಅದೇನೋ ಹೇಳಿದ, ನಿಮ್ಮ ಪುಣ್ಯವೋ, ಕಾಕತಾಳೀಯವೋ, ಆತ ಹೇಳಿದಂತೆ ಆಗಿ ಬಿಡುತ್ತದೆ. ನೀವು ಆತನನ್ನ ದೇವರೆಂದುಕೊಳ್ಳುತ್ತೀರಿ. ಆತನನ್ನ ಪೂಜಿಸುವುದಕ್ಕೆ, ಆರಾಧಿಸುವುದಕ್ಕೆ ಶುರು ಮಾಡಿಬಿಡುತ್ತೀರಿ. ಅಲ್ಲಿಯವರೆಗೆ ಯಾವುದೋ ಸ್ವಾಮಿಯಾಗಿದ್ದಾತ, ನಿಧಾನಕ್ಕೆ ನಿಮ್ಮ ಮನಸ್ಸಲ್ಲಿ ದೇವರಾಗಿ ಬಿಡುತ್ತಾನೆ. ನೀವು ಊಟ ಯಾವಾಗ ಮಾಡಬೇಕು? ಯಾವಾಗ ಸ್ನಾನ ಮಾಡಬೇಕು? ನಿಮ್ಮ ಮಗಳಿಗೆ ಯಾವ ಹುಡುಗ ಫರ್ಫೆಕ್ಟು? ಯಾವ ಹುಡುಗಿಯನ್ನ ಮದುವೆಯಾದರೆ ನಿಮ್ಮ ಮಗ ಚನ್ನಾಗಿರುತ್ತಾನೆ ? ಪೂಜೆಯಲ್ಲಿ ಕೊಳೆತ ಕಾಯಿ ಬಂದದ್ದರ ಶಕುನವೇನು? ಇವನ್ನೆಲ್ಲ ಆತನ ಎದುರು ಇಡಲು ಶುರು ಮಾಡಿಬಿಡುತ್ತೀರಿ.
ಇತ್ತೇಚೆಗೆ, ಅವಧೂತ, ಸ್ವಾಮಿ, ಮಹರ್ಷಿ, ಅಘೋರಿಯಾಗುವಂತದ್ದು ತೀರಾ ಸುಲಭದ ವಿಷಯ. ಒಂದು ಸೋಶಿಯಲ್ ಮೀಡಿಯಾ ಅಕೌಂಟು, ಮೈತುಂಬ ಎರಡು ಜೊತೆ ಕಾವಿ ಬಟ್ಟೆ ಹಾಕಿಕೊಂಡು, ಒಂದಷ್ಟು ಬಸ್ಮವನ್ನೋ, ಗಂಧವನ್ನೋ ತಿಕ್ಕಿಕೊಂಡು ಕೂತುಬಿಟ್ಟರೆ, ಬೇಡವೆಂದರು ಜನ ಬಂದು ಕೈ ಮುಗಿಯುತ್ತಾರೆ. ನಿಮ್ಮ ಬಳಿ ಬರುವ ನೂರು ಮಂದಿಯಲ್ಲಿ ಮೂರು ಮಂದಿಯ ಭವಿಷ್ಯ ನೀವು ಹೇಳಿದಂತೆ ಆಗಿಬಿಟ್ಟರೆ, ಅವರು ನಿಧಾನಕ್ಕೆ ಇನ್ನೊಂದಷ್ಟು ಮಂದಿಯನ್ನ ಎಳೆದು ತಂದೆ ತರುತ್ತಾರೆ. ಥೇಟ್, ಕುರಿಯ ಹಾಗೆ, ಒಂದು ಕುರಿ ಮುಂದೆ ಹೋದರೆ, ಅದರ ಹಿಂದೆ ಒಂದಷ್ಟು ಕುರಿಗಳು ಫಾಲೋ ಮಾಡುತ್ತವೆ. ನೋಡುತ್ತ ನೋಡುತ್ತ ನಿಮ್ಮ ಫಾಲೋವರ್ಗಳು ಬೆಳೆದು ಬಿಡುತ್ತವೆ. ನನ್ನ ಪ್ರಕಾರ, ನಂಬಿಕೆ ತೀರ ಡೇಂಜರಸ್ಸಾದದ್ದು. ಎಲ್ಲಿ ಎಷ್ಟಿರಬೇಕು? ಎಲ್ಲಿ ಯಾವುದನ್ನ ಎಷ್ಟು ನಂಬಬೇಕು? ಯಾವುದು ಹೇಗೆ? ಅದರ ಲಾಜಿಕ್ಕೇನು? ಇವೆಲ್ಲವೂ ಇಲ್ಲದೆ ಹುಟ್ಟಿಕೊಳ್ಳುವ ಮೂಢತೆ ಇದೆಯಲ್ಲ..? ಅದು ಎಂತವರನ್ನಾದರೂ ಜೀವಂತವಾಗಿ ಕೊಂದು ಬಿಡಬಹುದು.
ನಿಮಗೆ ಟಾಕ್ಸ್ ಕಟ್ಟದೆ ದುಡ್ಡು ಮಾಡುವ, ಸಮಾಜದಿಂದ ರೆಸ್ಪೆಕ್ಟ್ ಗಿಟ್ಟಿಸಿಕೊಳ್ಳುವ ಸುಲಭ ವಿಧಾನ ಎಂದರೆ ಕಾವಿ ಉಟ್ಟುಕೊಂಡು, ಒಂದೆರಡು ಪ್ರವಚನ ಕೊಡುವುದು. ಒಂದು ಟ್ರಸ್ಟ್ ಮಾಡಿಕೊಂಡು, ಸಿಕ್ಕ ಸಿಕ್ಕ ಫಂಡುಗಳಲ್ಲಿ ಹೊಟ್ಟೆ ತುಂಬಿಕೊಳ್ಳುವುದು. ದಾಟ್ಸ್ ಅನ್ ಇನ್ಸೇನ್ ಬಿಸ್ನಸ್. ಇರಲಿ ಬಿಡಿ, ನಾನು ಕೆಲವೇ ಕೆಲವು ಸ್ವಾಮಿಗಳನ್ನ ನಂಬಿದ್ದೇನೆ, ನಂಬುತ್ತೇನೆ. ಒಂದು ರಮಣರನ್ನ, ಇನ್ನೊಂದು ಶ್ರೀಧರರನ್ನ, ನೀಮ್ ಕರೋಲಿ ಮಹರಾಜ್, ಇತ್ತೀಚನ ದಿನಗಳನ್ನ ತೆಗೆದುಕೊಂಡರೆ, ಬೃಂಧಾವನದ ಪ್ರೇಮಾನಂದ್, ಸ್ವರ್ಣವಲ್ಲಿಯ ಗಂಗಾಧರೇಂದ್ರರು. ಹೀಗೆ ಲಿಮಿಟೆಡ್ ಲೀಸ್ಟ್ ನನ್ನದು. ಅವರ್ಯಾರು, ಹಣವನ್ನ ಹಚ್ಚಿಕೊಂಡವರಲ್ಲ. ತಮ್ಮನ್ನ ಪವಾಡ ಪುರುಷರೆಂದಿಲ್ಲ. ಅವಧೂತರು ಎಂದು ತಿರುಗಿಲ್ಲ. ಗುರುಗಳು ಎಂದು ಹೇಳಿಕೊಂಡವರಲ್ಲ. ಬದುಕಿದ್ದೂ ಸರಳ.
ಸಮಾಜ ಎಲ್ಲರನ್ನೂ ನೆನಪಿಟ್ಟುಕೊಳ್ಳುವುದಿಲ್ಲ. ಕೇವಲ ಕೆಲವರನ್ನ ನೆನಪಿಟ್ಟುಕೊಳ್ಳುತ್ತೆ. ಅವರನ್ನ ಚಿರಂಜೀವಿಯಾಗಿಸುತ್ತೆ. ಉದಾಹರಣೆಗೆ, ರಮಣರು, ಶ್ರೀಧರರು, ಸೋಹಂ ಸ್ವಾಮಿ, ಯೋಗಾನಂದ, ಓಶೋ ಅವರ್ಯಾರು ದೇವರಲ್ಲ. ಬಟ್, ದೇ ಗಾಟ್ ಇಮ್ಮಾರ್ಟಲಿಟಿ. ಜಗತ್ತು ನೀನ್ಯಾರು ಎನ್ನುವುದನ್ನ ನೆನಪಿಟ್ಟುಕೊಳ್ಳುವುದಿಲ್ಲ, ನೀನು ಜಗತ್ತಿಗೆ ಏನು ಕೊಟ್ಟೆ? ಎನ್ನುವುದನ್ನ ಮಾತ್ರ ಈ ಜಗತ್ತು ನೆನಪಿಟ್ಟುಕೊಳ್ಳುತ್ತೆಯೆ ಹೊರತು, ನೀನು ಯಾರು? ನೀನು ಬಡವನಾ? ಶ್ರೀಮಂತನಾ? ದೇವರ? ಇದ್ಯಾವುದನ್ನೂ ನೆನಪಿಟ್ಟುಕೊಳ್ಳುವುದಿಲ್ಲ. ಉದಾಹರಣೆಗೆ, ವಿಷ್ಣುವನ್ನೇ ತೆಗೆದುಕೊಳ್ಳೀ, ವಿಷ್ಣುವಿನ ದಶಾವತಾರಗಳಲ್ಲಿ, ನಾವು ನೆನಪಿಟ್ಟದ್ದು ಕೇವಲ ನಾಲ್ಕೋ ಐದೋ. ಬಿಕಾಸ್, ದೇ ಗೇ ಸಂಥಿಂಗ್ ಟು ದಿ ಸೊಸೈಟಿ. ಸಂನ್ಯಾಸ ಅಂದ್ರೆ ನೆನಪಾಗುವಂತದ್ದು, ನಾಗಾಗಳದ್ದು. ಅದೆಂತಹ ಹಠ! ಅದೆಂತಹ ಜೀವನ? ಥಂಡಿ ಹಿಡಿಸುವ ಹಿಮದಲ್ಲಿ ಕೂತು ಧ್ಯಾನಿಸುವುದಕ್ಕೂ ಧಮ್ ಬೇಕು.
ನಮ್ಮ ಕಾಲಿಗೆ ಮುಳ್ಳು ಚುಚ್ಚಿದರೆ, “ಅಮ್ಮಾ” ಎಂದು ಕಣ್ಣು ತೇವವಾಗಿ, ಗಂಟಲು ಹರಿದುಕೊಳ್ಳುವ ನಮಗೆ, ಶಿಶ್ನವನ್ನ ಎಳೆದು ಅದಕ್ಕೆ ಜೋರಾಗಿ ಹೊಡೆಯುತ್ತಲೇ ಇದ್ದರೆ? ಅಸಹ್ಯ ಎನ್ನಿಸಬಹುದು, ಆದರೆ ನಾಗಾಗಳು ಹೀಗೊಂದು ಪ್ರಕ್ರಿಯೆಯಲ್ಲಿ ತಮ್ಮನ್ನ ತೊಡಗಿಸಿಕೊಳ್ಳುತ್ತಾರೆ. ನಸ್‌ಬಂಧಿಯಲ್ಲಿ ಗೆದ್ದರೆ ಮಾತ್ರ ಆತ ನಾಗಾ ಪಂಥಕ್ಕೆ ಸೇರುತ್ತಾನೆ. ಇನ್ನು ನಿಜವಾದ ಅವಧೂತರುಗಳು, ಆಶ್ರಮಗಳನ್ನ, ಟ್ರಸ್ಟ್‌ಗಳನ್ನ ಕಟ್ಟುವುದಿಲ್ಲ. ಬಟ್ಟೆಯನ್ನೂ ಹಾಕದೆ, ಹಣವನ್ನೂ ಬಯಸದೆ, ಬದುಕಿ ಬಿಡುತ್ತಾರೆ. ನೀವು ನೀರು ಕೊಟ್ಟರೆ ನೀರು, ಊಟ ಕೊಟ್ಟರೆ ಊಟ! ಏನೂ ಇಲ್ಲದೆ ಹೊದಲ್ಲಿ, ಹಸಿವೆಯಲ್ಲೇ ಅವರ ದಿನ ಕಳೆದು ಬಿಡುತ್ತಾರೆ. ಕೈಯನ್ನ ಎತ್ತಿಕೊಂಡೇ ಅದೆಷ್ಟೋ ವರ್ಷ ಮೋಕ್ಷಕ್ಕಾಗಿ ಕಾಯುವ ಅಘೋರಿಗಳು, ರಾಮನಾಮವನ್ನ ಬಿಟ್ಟು ಬೇರೆ ಏನನ್ನೂ ಹೇಳದ, ರಾಮಪಂಥೀಯರು, ಇವರ್ಯಾರು ತಮ್ಮನ್ನ ತಾವು ಗುರುಗಳೆನ್ನುವುದಿಲ್ಲ, ಅವಧೂತರೆಂದು ಹೇಳಿಕೊಳ್ಳುವುದಿಲ್ಲ. ಹಣಕ್ಕಾಗಿ ಟ್ರಸ್ಟುಗಳನ್ನ ಕಟ್ಟುವುದಿಲ್ಲ. ದೇ ಲೀವ್ ಲೈಕ್ ನಥಿಂಗ್! ಎಲ್ಲರಲ್ಲೂ ಚಿಕ್ಕವರಾಗಿ ಬದುಕುತ್ತಾರೆ. ಬದುಕಲು ಇಷ್ಟ ಪಡುತ್ತಾರೆ.
ಜೀವನದಲ್ಲಿ ನಂಬಿಕೆ ಇಟ್ಟುಕೊಳ್ಳಿ. ಯಾವುದೋ ಸಮಯದಲ್ಲಿ, ಯಾವುದೋ ಒಂದು ವಿಷಯಕ್ಕೆ ನಂಬಿಕೆಗಳು ಕೈ ಹಿಡಿಯಬಹುದು. ಅತಿಯಾದ ನಂಬಿಕೆಯನ್ನ ಯಾರಮೇಲೂ ಬೆಳೆಸಿಕೊಳ್ಳಬೇಡಿ. ಯಾವುದೋ ಮಹರ್ಷಿ ಎಂದು ಹೆಸರನ್ನಿಟ್ಟುಕೊಂಡಾತ, ಅವಧೂತ ಎಂದು ತನ್ನನ್ನ ತಾನು ಕರೆದುಕೊಂಡಾತ, ನಿಮ್ಮ ಹಣೆ ಬರಹ ಬದಲಿಸಬಲ್ಲ ಎನ್ನುವ ಹುಂಬತನವಿದೆಯಲ್ಲ ಅದಕ್ಕಿಂತ ದೊಡ್ಡ ಶತ್ರು ಬೇರಿಲ್ಲ. ಯಾವ ಸಂನ್ಯಾಸಿಯೂ, ನಿಮ್ಮ ಹಣೆ ಬರಹವನ್ನ ಬದಲಿಸಲು ಸಾಧ್ಯವಿಲ್ಲ. ನಿಮ್ಮ ಭವಿಷ್ಯವನ್ನ ಬದಲಿಸಲು ಸಾಧ್ಯವಿಲ್ಲ. ನೀವು, ನಿಮ್ಮ ಆಯ್ಕೆಗಳು ಮಾತ್ರ ನಿಮ್ಮನ್ನ ಬದಲಾಯಿಸೋದಕ್ಕೆ ಸಾಧ್ಯ, ನಿಮ್ಮ ಆಯ್ಕೆಗಳಿಂದ ಪವಾಡಗಳು ನಡೆಯುತ್ತವೆಯೆ ಹೊರತು, ಈಗಿನ ಜಮಾನಾದ ಸ್ವಾಮಿಗಳಿಂದಲ್ಲ.
ನಿಮ್ಮ ನಂಬಿಕೆ, ಇನ್ನೊಬ್ಬ ನಿತ್ಯಾನಂದ, ಇನ್ನೊಬ್ಬ ಅಸಾರಾಂ, ರಾಮ್ ರಹೀಮ್‌ರನ್ನ ಹುಟ್ಟು ಹಾಕದಿರಲಿ. ಯಾವುದನ್ನೂ ಪ್ರಶ್ನಿಸದೇ, ತರ್ಕಿಸದೇ ಒಪ್ಪಿಕೊಳ್ಳಬೇಡಿ. ಬಿ ಬ್ರೇವ್ ಟು ಆಸ್ಕ್. ಬಿ ಬ್ರೇವ್ ಟು ಆಕ್ಸೆಪ್ಟ್! ನಿಮ್ಮ ನಂಬಿಕೆ ಇನ್ನೊಬ್ಬರ ಬಿಸ್ನೆಸ್ ಆಗದಿರಲಿ.
– ನಾಗರಾಜ್ ಬಾಳೆಗದ್ದೆ.
Discussion about this post