ಕಳೆದ ಕೆಲ ವರ್ಷಗಳವರೆಗೂ ಗ್ರಾಮಸಭೆಗಳಿಗೆ ಸಾಕಷ್ಟು ಜನ ಬರುತ್ತಿದ್ದರು. ಆದರೆ, ಅಧಿಕಾರಿಗಳು ಬರುತ್ತಿರಲಿಲ್ಲ. ಆದರೆ, ಸೋಮವಾರ ಯಲ್ಲಾಪುರದ ಆನಗೋಡಿನಲ್ಲಿ ನಡೆದ ಗ್ರಾಮಸಭೆಯಲ್ಲಿ ಅಧಿಕಾರಿ-ಜನಪ್ರತಿನಿಧಿಗಳೇ ತುಂಬಿದ್ದರು. ಜನ ಮಾತ್ರ ಹೆಚ್ಚಿನ ಸಂಖ್ಯೆಯಲ್ಲಿ ಕಾಣಲಿಲ್ಲ.
ಗ್ರಾಮಸಭೆ ದಿನಾಂಕದ ಬಗ್ಗೆ ಗ್ರಾ ಪಂ ಕಚೇರಿ ಪ್ರಕಟಣೆ ಹೊರಡಿಸಿತ್ತು. ಪ್ರಮುಖ ಸ್ಥಳಗಳಲ್ಲಿ ನಡೆದ ವಾರ್ಡ ಸಭೆಯಲ್ಲಿ ಸಹ ಗ್ರಾಮಸಭೆ ನಡೆಸುವ ಬಗ್ಗೆ ಪ್ರಚಾರ ಮಾಡಲಾಗಿತ್ತು. ಸಾಮಾಜಿಕ ಜಾಲತಾಣಗಳ ಮೂಲಕವೂ ಗ್ರಾಮಸಭೆ ಕುರಿತು ಮಾಹಿತಿ ನೀಡಲಾಗಿತ್ತು. ಆದರೂ ಬೆಳಗ್ಗೆ 10.30ಕ್ಕೆ ಸಭೆ ಶುರುವಾಗಿದ್ದು, 11.30ರ ವೇಳೆಗೆ ಖಾಲಿ ಖುರ್ಚಿಗಳೇ ಹೆಚ್ಚಿಗೆ ಕಾಣುತ್ತಿದ್ದವು. ಸಭೆ ಆರಂಭದಲ್ಲಿದ್ದ ಅಲ್ಪ ಪ್ರಮಾಣದ ಜನ ಸಹ ನಡುವೆ ಎದ್ದು ಹೋಗಿದ್ದು, ಆಯಾ ಇಲಾಖೆಗೆ ಸಂಬoಧಿಸಿದ ಅಧಿಕಾರಿಗಳು ಸಹ ತಮ್ಮ ಇಲಾಖೆಯ ಆಗುಹೋಗುಗಳ ಬಗ್ಗೆ ಮಾಹಿತಿ ನೀಡಿ ಅಲ್ಲಿಂದ ಹೊರಟರು. ಹೀಗಾಗಿ ಅಲ್ಲಲ್ಲಿ ತುಂಬಿದ್ದ ಖುರ್ಚಿಗಳು ಸಹ ಪೂರ್ತಿ ಖಾಲಿಯಾಗಿದ್ದವು. ಜನ ಬಾರದೇ ಇರಲು ಧಾರಾಕಾರವಾಗಿ ಸುರಿದ ಮಳೆಯೂ ಕಾರಣ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಗ್ರಾ ಪಂ ಮಾಜಿ ಅಧ್ಯಕ್ಷ ಪರಮೇಶ್ವರ ಗಾಂವ್ಕರ್ `ಗ್ರಾಮಸಭೆಗೆ ಜನ ಬರಲಿಲ್ಲ ಎಂಬುದು ಸರಿಯಲ್ಲ. 30 ಜನ ಆಗಮಿಸಿದ್ದು, ನಂತರ ಅವರವರ ಕೆಲಸಕ್ಕೆ ತೆರಳಿದ್ದಾರೆ’ ಎಂದು ತಿಳಿಸಿದರು.
Discussion about this post