ಗೋಕರ್ಣದಲ್ಲಿ ಬಸ್ ಅಪಘಾತದಿಂದ ಗಾಯಗೊಂಡು ಐದು ದಿನಗಳಿಂದ ಚಿತ್ರಹಿಂಸೆ ಅನುಭವಿಸುತ್ತಿದ್ದ ದನ ಭಾನುವಾರ ಸಂಜೆ ಸಾವನಪ್ಪಿದೆ.
ಸ್ಥಳೀಯ ಗ್ರಾ ಪಂ ಸದಸ್ಯ ಸುಜಯ ಶೆಟ್ಟಿ ಹಾಗೂ ಅಲ್ಲಿನ ರಿಕ್ಷಾ ಮಾಲಕರು ಜಾನುವಾರನ್ನು ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನ ನಡೆಸಿದ್ದರು. ಬಸ್ ನಿಲ್ದಾಣದ ಮೂಲೆಯಲ್ಲಿ ಅದಕ್ಕೆ ಆಶ್ರಯ ಕಲ್ಪಿಸಿ, ನಿತ್ಯ ಮೇವು ಒದಗಿಸುತ್ತಿದ್ದರು. ವೈದ್ಯರನ್ನು ಕರೆಯಿಸಿ ಅದಕ್ಕೆ ಚಿಕಿತ್ಸೆ ಕೊಡಿಸಿದ್ದರು.
ಆದರೆ, ಸಾರಿಗೆ ಘಟಕದವರು ಜಾನುವಾರನ್ನು ಬೇರೆಡೆ ಸ್ಥಳಾಂತರಿಸುವoತೆ ಒತ್ತಡ ಹಾಕುತ್ತಿದ್ದು, ಕೆಎಸ್‌ಆರ್‌ಟಿಸಿ ಜಾಗದಲ್ಲಿ ಜಾನುವಾರು ಆರೈಕೆ ಮಾಡುತ್ತಿರುವುದನ್ನು ಕಂಡು ವಿಭಾಗ ಕಚೇರಿಯ ಅಧಿಕಾರಿಗಳು ಅಧೀನ ಸಿಬ್ಬಂದಿ ವಿರುದ್ಧ ಗರಂ ಆಗಿದ್ದರು. ಸಂಸ್ಥೆಯ ಬಸ್ ಹಾಯ್ದು ದನ ಜೀವನ್ಮರಣದ ನಡುವೆ ಹೋರಾಡುತ್ತಿದ್ದರೂ ಅಧಿಕಾರಿಗಳಿಗೆ ಅದರ ಬಗ್ಗೆ ಕಾಳಜಿ ಇರಲಿಲ್ಲ. ಅನಗತ್ಯವಾಗಿ ಅಧಿಕಾರಿಗಳು ತೊಂದರೆ ನೀಡುತ್ತಿರುವುದಕ್ಕೆ ಜನರು ಆಕ್ಷೇಪಿಸಿದರು.
ಸಂಜೆ ಜಾನುವಾರು ಸಾವನಪ್ಪಿದ ಸುದ್ದಿ ಕೇಳಿ ಅನೇಕರು ಮರುಕ ವ್ಯಕ್ತಪಡಿಸಿದರು. ಗ್ರಾ ಪಂ ಅಧ್ಯಕ್ಷೆ ಸಮುನಾ ಗೌಡ ಜೆಸಿಬಿ ಕಳುಹಿಸಿ, ಮೃತ ಜಾನುವಾರನ್ನು ದಫನ್ ಮಾಡುವ ಪ್ರಕ್ರಿಯೆಗೆ ನೆರವು ನೀಡಿದರು.
Discussion about this post