ಬಿಡುವು ಸಿಕ್ಕಾಗಲೆಲ್ಲ ಕೃಷಿ ಚಟುವಟಿಕೆಯಲ್ಲಿ ತೊಡಗುವ ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಅವರು ಸೋಮವಾರ ಬಾರಕೋಲು ಹಿಡಿದು ಚಕ್ಕಡಿ ಗಾಡಿ ಓಡಿಸಿದರು. ಶಾಸಕರು ಹೈ ಹೈ ಎನ್ನುವಾಗ ನೆರೆದಿದ್ದ ಜನರು ಜೈ ಜೈ ಎಂದು ಕೂಗಿದರು!
ಶಾಸಕ ಭೀಮಣ್ಣ ನಾಯ್ಕ ಅವರಿಗೆ ಮೊದಲಿನಿಂದಲೂ ಕೃಷಿಯಲ್ಲಿ ಆಸಕ್ತಿ. ಶಾಸಕರಾಗುವ ಪೂರ್ವದಿಂದಲೂ ಅವರು ಕೃಷಿ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತ ಬಂದಿದ್ದಾರೆ. ಶಾಸಕರಾದ ನಂತರವೂ ತಮ್ಮ ಬಿಡುವಿನ ವೇಳೆ ಅವರು ತೋಟದ ಕೆಲಸ ಮಾಡುತ್ತಾರೆ. ತೋಟದಲ್ಲಿ ಆದ ಕೆಲಸ-ಕಾರ್ಯಗಳ ಬಗ್ಗೆ ಅಲ್ಲಿನ ಉಸ್ತುವಾರಿಗಳಿಂದ ನಿರಂತರವಾಗಿ ಮಾಹಿತಿಯನ್ನುಪಡೆಯುತ್ತಾರೆ.
ಕೆಲ ದಿನಗಳ ಹಿಂದೆ ಭೀಮಣ್ಣ ನಾಯ್ಕ ಅವರು ಟಾಕ್ಟರ್ ಓಡಿಸಿದ್ದರು. ಅದಕ್ಕೂ ಮುನ್ನ ಶಾಲಾ-ಕಾಲೇಜು ಮಕ್ಕಳನ್ನು ತಮ್ಮ ತೋಟಕ್ಕೆ ಕರೆದೊಯ್ದು ಕೃಷಿ ಪಾಠ ಮಾಡಿದ್ದರು. ಸೋಮವಾರ ಅವರು ಚಕ್ಕಡಿ ಗಾಡಿ ಓಡಿಸಿ, `ತನಗೆ ಈ ಕಲೆಯೂ ಗೊತ್ತಿದೆ’ ಎಂದು ತೋರಿಸಿದ್ದಾರೆ.
ಸಿದ್ದಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಆಗಮಿಸಿದ ಶಾಸಕ ಭೀಮಣ್ಣ ನಾಯ್ಕ ಅವರು ಅಲ್ಲಿನ ಜಾನಪದ ಉತ್ಸವ ಉದ್ಘಾಟಿಸಿದರು. ಈ ವೇಳೆ ಅವರು ಅಲ್ಲಿದ್ದ ಚಕ್ಕಡಿ ಗಾಡಿ ಓಡಿಸಿ, ಜನರ ಮನ ಗೆದ್ದರು.