ಉತ್ತರ ಕನ್ನಡ ಜಿಲ್ಲೆಯಲ್ಲಿ ಗೋ ಕಳ್ಳರ ಅಟ್ಟಹಾಸ ಮಿತಿಮೀರಿದೆ. ಐಷಾರಾಮಿ ಕಾರುಗಳಲ್ಲಿ ಬರುವ ಕಳ್ಳರು ಬೀದಿಯಲ್ಲಿನ ಗೋವುಗಳನ್ನು ಕದ್ದು ಪರಾರಿಯಾಗುತ್ತಿದ್ದಾರೆ!
ಕೆಲ ದಿನಗಳ ಹಿಂದೆ ಕಾರವಾರದ ಮಾಜಾಳಿಯಲ್ಲಿ ಕಾರಿನಲ್ಲಿ ಗೋವು ಕದ್ದೊಯ್ದಿರುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಇದೀಗ ಶಿರಸಿಯಲ್ಲಿ ಸಹ ಇದೇ ವಿದ್ಯಮಾನ ಮರುಕಳಿಸಿದೆ. ಮುಖಕ್ಕೆ ಮುಸುಕು ಹಾಕಿಕೊಂಡು ಆಗಮಿಸುವವರು ರಸ್ತೆ ಬದಿ ಮಲಗಿರುವ ಹಸುಗಳನ್ನು ಹಿಂಸಾತ್ಮಕ ರೂಪದಲ್ಲಿ ಸಾಗಿಸುತ್ತಿದ್ದಾರೆ. ಗೋ ವಧೆ ಮಾಡುವ ಉದ್ದೇಶದಿಂದಲೇ ಅವುಗಳನ್ನು ಕದ್ದು ಸಾಗಿಸುತ್ತಿರುವ ಅನುಮಾನ ದಟ್ಟವಾಗಿದೆ.
ಮಾಜಾಳಿಯಲ್ಲಿ ಬೆಳಗಿನ 2 ಗಂಟೆ ವೇಳೆಗೆ ಬಂದ ಕಳ್ಳರು ಕಾರಿನಲ್ಲಿ ಆಕಳನ್ನು ಹೊತ್ತೊಯ್ದಿದ್ದರು. ಕಳ್ಳರು ರಸ್ತೆ ಅಂಚಿನಲ್ಲಿ ಮಲಗಿದ್ದ ಗೋವುಗಳಿಗೆ ಹಿಂಸೆ ನೀಡುವುದನ್ನು ವ್ಯಕ್ತಿಯೊಬ್ಬರು ವಿಡಿಯೋ ಮಾಡಿದ್ದರು. ಅದನ್ನು ನೋಡಿದ ಕಳ್ಳರು ಕಾರನ್ನು ವೇಗವಾಗಿ ಓಡಿಸಿಕೊಂಡು ಹೋಗಿ ಪರಾರಿಯಾಗಿದ್ದರು. ಇದೀಗ ಶಿರಸಿಯಲ್ಲಿ ಸಹ ಇಂಥಹುದೇ ಪ್ರಕರಣ ನಡೆದಿದೆ.
ಸ್ಕಾರ್ಪಿಯೋ ವಾಹನದಲ್ಲಿ ಆಗಮಿಸಿದ ಗೋವು ಕಳ್ಳರು ಎರಡು ಕಡೆ ಜಾನುವಾರು ಕಳ್ಳತನ ಪ್ರಯತ್ನ ಮಾಡಿದ್ದಾರೆ. ಕೆಎಚ್‌ಬಿ ಕಾಲೋನಿ ಹಾಗೂ ವಿವೇಕಾನಂದ ನಗರದಲ್ಲಿ ಕಳ್ಳರು ತಮ್ಮ ದುಷ್ಕೃತ್ಯ ನಡೆಸಿದ್ದಾರೆ. ಅಲ್ಲಿ ಜಾನುವಾರುಗಳು ಗುಂಪಿನಲ್ಲಿರುವುದನ್ನು ಗಮನಿಸಿ ಅದನ್ನು ಕಾರಿನೊಳಗೆ ತುಂಬುವ ಪ್ರಯತ್ನ ಮಾಡಿದ್ದು, ಜನರ ಬೊಬ್ಬೆ ಕೇಳಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ಈ ಎಲ್ಲದರ ನಡುವೆ ಶಿರಸಿಯ ಇಳಸೂರಿನಲ್ಲಿಯೂ ಗೋ ಕಳ್ಳತನ ನಡೆದಿದೆ. ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಸುಗಳನ್ನು ಕಳ್ಳರು ಕದ್ದಿದ್ದಾರೆ. ಸುಭಾಷ್ ರೆಡ್ಡಿ ಅವರು ಸಾಕಿದ್ದ ಮೂರು ಹಸುಗಳು ಕಾಣೆಯಾಗಿದೆ. 70 ಸಾವಿರ ರೂ ಮೌಲ್ಯದ ಗೋವು ಕಳ್ಳತನ ನಡೆದ ಬಗ್ಗೆ ಸುಭಾಷ್ ರೆಡ್ಡಿ ಅಳಲು ತೋಡಿಕೊಂಡಿದ್ದಾರೆ.