ಹಳಿಯಾಳದಲ್ಲಿ ವಾಸವಾಗಿರುವ ನಿವೃತ್ತ ನೇವಲ್ ಕಮಾಡೆಂಟ್ ಉಮಾಕಾಂತ ದೇಶಪಾಂಡೆ ಅವರು ಡಿಜಿಟಲ್ ಅರೆಸ್ಟ್ ಜಾಲದಲ್ಲಿ ಸಿಲುಕಿ ಹಣ ಕಳೆದುಕೊಂಡಿದ್ದಾರೆ. ಉಮಾಕಾಂತ ದೇಶಪಾಂಡೆ ಅವರಿಗೆ ಅವರ ಮಗಳು ಹೇಳಿದ ನಂತರವೇ ತಾವು ಮೋಸ ಹೋಗಿರುವುದು ಅರಿವಿಗೆ ಬಂದಿದೆ.
ಹಳಿಯಾಳದ ತಿಲಕ್ ರೋಡಿನಲ್ಲಿ ಉಮಾಕಾಂತ ದೇಶಪಾಂಡೆ ಅವರು ಮನೆ ಮಾಡಿಕೊಂಡಿದ್ದಾರೆ. ಅವರಿಗೆ ಸಿಬಿಐ ಅಧಿಕಾರಿ ಎಂಬ ಹೆಸರನಲ್ಲಿ ಫೋನ್ ಮಾಡಿದ ಮಹಿಳೆ 15 ಲಕ್ಷ ರೂ ಹಣ ಎಗರಿಸಿದ್ದು, ಇನ್ನಷ್ಟು ಹಣ ನೀಡುವಂತೆ ಬೇಡಿಕೆಯಿಟ್ಟಿದ್ದಾರೆ. ಈ ವೇಳೆ ಉಮಾಕಾಂತ ದೇಶಪಾಂಡೆ ಅವರ ಪುತ್ರಿ ಆಗಮಿಸಿ ಡಿಜಿಟಲ್ ಅರೆಸ್ಟ್ ಹಾಗೂ ಸೈಬರ್ ಅಪರಾಧದ ಬಗ್ಗೆ ಅರಿವು ಮೂಡಿಸಿ, ತಂದೆಯ ಬಳಿಯಿದ್ದ ಉಳಿದ ಹಣವನ್ನು ಉಳಿಸಿದ್ದಾರೆ.
`ವಿಜಯಮಲ್ಯಾ ಏರ್‌ಲೈನ್ ಕೋಟಿ ಕೋಟಿ ಅವ್ಯವಹಾರ ನಡೆದಿದೆ. ಅದರಲ್ಲಿ ನೀವು ಸಹ ಭಾಗಿಯಾಗಿದ್ದೀರಿ’ ಎಂದು ಮುಂಬೈ ಡೆಪ್ಯುಟಿ ಕಮಿಶನರ್ ಎಂದು ಪರಿಚಯಿಸಿಕೊಂಡವರೊಬ್ಬರು ಉಮಾಕಾಂತ ದೇಶಪಾಂಡೆ ಅವರಿಗೆ ಫೋನ್ ಮಾಡಿದ್ದರು. `ನಿಮ್ಮ ವಿರುದ್ಧ ಮನಿ ಲಾಂಡರಿoಗ್ ಪ್ರಕರಣ ದಾಖಲಾಗಿದೆ. ನಾವು ಹೇಳಿದ ಖಾತೆಗೆ 15 ಲಕ್ಷ ರೂ ಹಣ ಹಾಕಿ. ವೆರಿಪಿಕೇಶನ್ ನಂತರ ಹಣ ಮರಳಲಿದೆ’ ಎಂದು ಅವರು ಸೂಚಿಸಿದ್ದರು. ಇದನ್ನು ನಂಬಿ ಉಮಾಕಾಂತ ದೇಶಪಾಂಡೆ ಅವರು 15 ಲಕ್ಷ ರೂ ಹಾಕಿದ್ದರು. ಮರು ದಿನವೇ ಆ ಹಣ ಅವರ ಖಾತೆಗೆ ಮರಳಿ ಬಂದಿತ್ತು.
ಅದಾದ ನಂತರ ಸಿಬಿಐ ಅಧಿಕಾರಿ ಎಂದು ಪರಿಚಯಿಸಿಕೊಂಡು ರಶ್ಮಿ ಶುಲ್ಕ ಎಂಬಾತರು ಫೋನ್ ಮಾಡಿದ್ದು, ಮತ್ತೆ ಹಳೆಯ ವಿಷಯವನ್ನು ಪ್ರಸ್ತಾಪಿಸಿದ್ದರು. `ಈ ಪ್ರಕರಣದ ಬಗ್ಗೆ ಇಡಿ ಹಾಗೂ ಸಿಬಿಐ ವಿಚಾರಣೆ ನಡೆಸಲಿದೆ. ಈ ವಿಷಯವನ್ನು ಹೊರಗೆ ಹೇಳಿದರೆ ಪೊಲೀಸರು ಬಂದು ನಿಮ್ಮನ್ನು ಬಂದಿಸಲಿದ್ದಾರೆ. 15 ಲಕ್ಷ ರೂ ಹಣ ತಾನು ಸೂಚಿಸುವ ಖಾತೆಗೆ ಹಾಕಿ. ತಾವು ತಪ್ಪು ಮಾಡಿಲ್ಲ ಎಂದಾದರೆ 24 ತಾಸಿನಲ್ಲಿ ಆ ಹಣ ಮರಳಿ ಜಮಾ ಆಗಲಿದೆ’ ರಶ್ಮಿ ಶುಲ್ಕ ನಂಬಿಸಿದ್ದರು. ಕಳೆದ ಬಾರಿ ಹಣ ಮರಳಿ ಬಂದಿರುವುದನ್ನು ನೆನಪಿಸಿಕೊಂಡ ಉಮಾಕಾಂತ ದೇಶಪಾಂಡೆ ಈ ಬಾರಿಯೂ ಅವರು ಸೂಚಿಸಿದ ಖಾತೆಗೆ ಹಣ ವರ್ಗಾಯಿಸಿದ್ದರು.
`ಹೇಗೂ ತಾನೂ ತಪ್ಪು ಮಾಡಿಲ್ಲ. ತನ್ನ ಹಣ ಎಲ್ಲಿಯೂ ಹೋಗುವುದಿಲ್ಲ’ ಎಂದು ಉಮಾಕಾಂತ ದೇಶಪಾಂಡೆ ಕಾದು ಕುಳಿತಿದ್ದರು. ಮಾರ್ಚ 13ರಂದು ಅವರು ಹಣ ಜಮಾ ಮಾಡಿದ್ದು, ಈವರೆಗೂ ಅದು ಮರಳಲಿಲ್ಲ. ಈ ನಡುವೆ ರಶ್ಮಿ ಶುಲ್ಕ ಎಂಬಾತರು ಮೇ 14ರಂದು ಮತ್ತೆ ಫೋನ್ ಮಾಡಿ, `ಎಲ್ಲಾ ಶೇರುಗಳನ್ನು ಮಾರಿ ಆ ಹಣವನ್ನು ಜಮಾ ಮಾಡಿ’ ಎಂದು ಪೀಡಿಸಲು ಶುರು ಮಾಡಿದ್ದರು. ಈ ಬಗ್ಗೆ ಉಮಾಕಾಂತ ದೇಶಪಾಂಡೆ ಅವರು ಮಗಳ ಜೊತೆ ಚರ್ಚಿಸಿದಾಗ `ಅವರೆಲ್ಲರೂ ನಕಲಿ ಅಧಿಕಾರಿಗಳು’ ಎಂದು ಗೊತ್ತಾಯಿತು.
ಹೀಗಾಗಿ ಉಮಾಕಾಂತ ದೇಶಪಾಂಡೆ ಅವರು ಹಳಿಯಾಳ ಪೊಲೀಸ್ ಠಾಣೆಗೆ ತೆರಳಿ ಈ ಎಲ್ಲಾ ವಿಷಯದ ಬಗ್ಗೆ ಮಾಹಿತಿ ನೀಡಿದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡರು.