ಕಾರವಾರ ನಗರದ ಬಾಲ ಮಂದಿರ ಹಾಗೂ ಉರ್ದು ಶಾಲೆ ಮುಂಭಾಗ ತಂಬಾಕು ಮಾರಾಟ ಮಾಡಲಾಗುತ್ತಿದ್ದು, 9ಕ್ಕೂ ಅಧಿಕ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ತಂಬಾಕು ಮಾರಾಟಗಾರರಿಗೆ 200ರೂ ದಂಡ ವಿಧಿಸುವ ಮೂಲಕ ಕಾನೂನಿನ ಪ್ರಕಾರ ಅತ್ಯಂತ ಕಠಿಣ ಕ್ರಮ ಜರುಗಿಸಿದ್ದಾರೆ!
ಕಾರವಾರ ತಹಶೀಲ್ದಾರ್ ನಿಶ್ಚಲ್ ನರೋನಾ ನೇತ್ರತ್ವದಲ್ಲಿ ಮಂಗಳವಾರ ಈ ದಾಳಿ ನಡೆದಿದೆ. ಅಪರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣಾ ಕೋಶದ ನೋಡಲ್ ಅಧಿಕಾರಿಗಳ ನಿರ್ದೇಶನದ ಮೇರೆಗೆ ಈ ದಾಳಿ ನಡೆಸಲಾಗಿದೆ. ಇಡೀ ದಿನ ನಡೆದ ದಾಳಿಯಿಂದ ಸರ್ಕಾರಕ್ಕೆ 2300ರೂ ಹಣ ಸಂಗ್ರಹವಾಗಿದೆ!
ಇನ್ನೂ `ದಾಳಿ ವೇಳೆ ತಂಬಾಕು ಸೇವನೆ ದುಷ್ಪರಿಣಾಮ ಹಾಗೂ ತಂಬಾಕು ನಿಯಂತ್ರಣ ಕಾಯ್ದೆ ಕೋಟ್ಪಾ-2003ರ ಕುರಿತು ಅರಿವು ಮೂಡಿಸಲಾಯಿತು’ ಎಂದು ಅಧಿಕಾರಿಗಳು ಹೇಳಿಕೊಂಡಿದ್ದಾರೆ. ಧೂಮಪಾನ ನಿಷೇಧಿತ ಕುರಿತು ಪ್ರತಿಯೊಂದು ಸಾರ್ವಜನಿಕ ಸ್ಥಳಗಳಲ್ಲಿ ನಾಮಫಲಕ ಬಿತ್ತರಿಸುವಂತೆ ಸೂಚಿಸಿರುವುದಾಗಿಯೂ ಷರಾ ಬರೆದಿದ್ದಾರೆ.
`ಕೆಲವು ಅಂಗಡಿಗಳ ಹಿಂದೆ ಅನಧಿಕೃತವಾಗಿ ಧೂಮಪಾನ ಅಡ್ಡೆ ನಿರ್ಮಿಸಲಾಗಿದೆ. ಅಂಥವರಿಗೆ ಎಚ್ಚರಿಕೆ ನೀಡಲಾಗಿದೆ. 18 ವರ್ಷದ ಒಳಗಿನವರಿಗೆ ತಂಬಾಕು ಮಾರಾಟ ಮಾಡದಂತೆ ಸೂಚನೆ ನೀಡಲಾಗಿದೆ’ ಎಂದು ದಾಳಿಯಲ್ಲಿದ್ದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ತಾಲೂಕು ಆರೋಗ್ಯಾಧಿಕಾರಿ ಡಾ ಸುಧೀತಾ ಪಡ್ನೇಕರ್, ಗ್ರೇಡ್-2 ತಹಸೀಲ್ದಾರ್‌ರೂಪಾ ಎಂ ಪಿ.ಎಸ್.ಐ ಬೃಂದಾ ಟಿ ಅಘಾನಾಶಿನಿ ಇನ್ನಿತರರು ಈ ಮಹತ್ವದ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ನಿಭಾಯಿಸಿದ್ದರು.