`ಯಲ್ಲಾಪುರದ ಮಾಗೋಡು ಮಾಹಿತಿ ತಂತ್ರಜ್ಞಾನದ ಕೇಂದ್ರವಾಗಬೇಕು. ಈ ನಿಟ್ಟಿನಲ್ಲಿ ನಡೆಯುವ ಹೋರಾಟಕ್ಕೆ ನಾನು ಬೆಂಬಲಿಸುವೆ’ ಎಂದು ನಾಗರಿಕ ವೇದಿಕೆ ಅಧ್ಯಕ್ಷ ರಾಮು ನಾಯ್ಕ ಹೇಳಿದ್ದಾರೆ.
`ಮಾಗೋಡಿನಲ್ಲಿರುವ ನೂರಾರು ಎಕರೆ ಸರಕಾರಿ ಭೂ ಪ್ರದೇಶದಲ್ಲಿ ಮಾಹಿತಿ ತಂತ್ರಜ್ಞಾನದ ಕೇಂದ್ರ ಸ್ಥಾಪನೆಯಾಗಬೇಕು ಎಂಬ ಸಾರ್ವಜನಿಕರ ಬೇಡಿಕೆ ಸ್ವಾಗತಾರ್ಹ. ಈ ಬೇಡಿಕೆ ಅತ್ಯುತ್ತಮ ಜನಪರ ಕಾಳಜಿಯ ಚಿಂತನೆ. ಮಾಗೋಡಿನಲ್ಲಿ ಐಟಿ ಪಾರ್ಕ ಆಗುವುದರಿಂದ ಪರಿಸರಕ್ಕೆ ಯಾವುದೇ ಹಾನಿ ಇಲ್ಲ. ಸ್ಥಳೀಯರಿಗೆ ಉದ್ಯೋಗವೂ ಸಿಗುತ್ತದೆ’ ಎಂದವರು ಹೇಳಿದ್ದಾರೆ.
`ಇಲ್ಲಿನ ಅನೇಕರು ದೂರ ದೂರದ ಊರುಗಳಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಐಟಿ ಪಾರ್ಕ ಸ್ಥಾಪನೆಯಿಂದ ಅವರಿಗೆ ಊರಿನಲ್ಲಿಯೇ ಉದ್ಯೋಗ ಸಿಗಲಿದೆ. ಇದರಿಂದ ಅವರನ್ನು ಅವಲಂಬಿಸಿರುವ ಪಾಲಕರು ನೆಮ್ಮದಿಯಾಗಿರುತ್ತಾರೆ’ ಎಂದು ರಾಮು ನಾಯ್ಕ ಅವರು ಹೇಳಿದ್ದಾರೆ.
`ಸಾರ್ವಜನಿಕರ ಬೇಡಿಕೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಯಲ್ಲಾಪುರದ ಅಭಿವೃದ್ಧಿಯ ದೃಷ್ಟಿಯಿಂದ ಇಲ್ಲಿನ ಪಟ್ಟಣ ಪಂಚಾಯತ, ಮಾಗೋಡ ಭೂಪ್ರದೇಶ ವ್ಯಾಪ್ತಿಯ ನಂದೊಳ್ಳಿ ಹಾಗೂ ಚಂದಗುಳಿ ಗ್ರಾಮ ಪಂಚಾಯತವೂ ಈ ದಿಶೆಯಲ್ಲಿ ಕೆಲಸ ಮಾಡಬೇಕು. ಶಾಸಕ-ಸಂಸದರು ಒಟ್ಟಾಗಿ ಶ್ರಮಿಸಿದರೆ ಈ ಯೋಜನೆ ಯಶಸ್ವಿ ಆಗುವುದರಲ್ಲಿ ಅನುಮಾನವಿಲ್ಲ’ ಎಂದವರು ಹೇಳಿದ್ದಾರೆ.