ಉತ್ತರ ಕನ್ನಡ ಜಿಲ್ಲೆಯ ಸಮಗ್ರ ಅಭಿವೃದ್ಧಿ ವಿಷಯವಾಗಿ ಮಂಗಳವಾರ ಸರ್ಕಾರಿ ಸಭೆ ನಡೆದಿದ್ದು, ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯ ಮುಂದೆ ಅನೇಕರು ವಿವಿಧ ಸಲಹೆ ನೀಡಿದರು.
ಮುಖ್ಯವಾಗಿ `ಈ ಜಿಲ್ಲೆಯಲ್ಲಿ ಉನ್ನತ ಶಿಕ್ಷಣಕ್ಕಾಗಿ ಯಾವುದೇ ವಿಶ್ವವಿದ್ಯಾಲಯ ಇಲ್ಲ. ಶಿಕ್ಷಣ ಸಂಸ್ಥೆಗಳಲ್ಲಿ ಅಡ್ವಾನ್ಸಡ್ ಕೋರ್ಸ್ಗಳು ಅಳವಡಿಸಬೇಕು. ಕೈಗಾ, ಸೀಬರ್ಡ್ನಂತಹ ಸಂಸ್ಥೆಗಳಿದ್ದರೂ ಇಲ್ಲಿನ ಯುವ ಜನತೆಗೆ ಅಲ್ಲಿ ಉದ್ಯೋಗವಕಾಶವಿಲ್ಲ. ಈ ಸಂಸ್ಥೆಗಳಲ್ಲಿ ಇಲ್ಲಿನ ಯುವಕರಿಗೆ ನೇಮಕ ಮಾಡಿಕೊಳ್ಳಬೇಕು. ಈ ಕುರಿತಂತೆ ಅವರಿಗೆ ಅಪ್ರೆಂಟಿಸ್ ತರಬೇತಿ ನೀಡಬೇಕು. ಗೋವಾ ಮಾದರಿಯಲ್ಲಿ ಪ್ರವಾಸೋದ್ಯಮ ಅಭಿವೃದ್ದಿಪಡಿಸಬೇಕು. ಕೈಗಾರಿಕೆಗಳಿಗೆ ನಿರಂತರ ವಿದ್ಯುತ್ ಪೂರೈಕೆ ಆಗಬೇಕು. ಮೊಬೈಲ್ ನೆಟ್‌ವರ್ಕ ಸಮಸ್ಯೆಗಳನ್ನು ಸರಿಪಡಿಸಬೇಕು’ ಎಂದು ನಿವೃತ್ತ ಪ್ರಾಂಶುಪಾಲ ಮಹೇಶ ಗೋಳಿಕಟ್ಟೆ ಸಲಹೆ ನೀಡಿದರು.
`ಅಭಿವೃದ್ಧಿ ಯೋಜನೆಗಳಿಗೆ ಸಂಬ0ಧಿಸಿದ0ತೆ ಪಕ್ಕದ ಸಣ್ಣ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ನಮ್ಮ ಜಿಲ್ಲೆಯು ಅದಕ್ಕಿಂತ ದೊಡ್ಡ ಜಿಲ್ಲೆಯಾದರೂ ಅನುದಾನ ಹಂಚಿಕೆಯಲ್ಲಿ ವ್ಯತ್ಯಾಸವಾಗುತ್ತಿದೆ. 8ನೇ ತರಗತಿ ನಂತರ ಶಾಲೆಗಳಲ್ಲಿ ಕಡ್ಡಾಯವಾಗಿ ಕೌಶಲ್ಯ ಶಿಕ್ಷಣ ಅಳವಡಿಸಬೇಕು. ಜಿಲ್ಲೆಯು ಕರಾವಳಿ, ಪಶ್ಚಿಮ ಘಟ್ಟ, ಬಯಲು ಸೀಮೆ, ಮಲೆನಾಡು ಪ್ರದೇಶವನ್ನು ಹೊಂದಿದ್ದು ಜಿಲ್ಲೆಗೆ ಸಂಬoಧಿಸಿದoತೆ ಪೀಪಲ್ ಪ್ಲಾನ್ ರೂಪಿಸಿ, ಇದಕ್ಕಾಗಿ ಪ್ರತ್ಯೇಕ ಅನುದಾನ ನೀಡಬೇಕು. ಎಂಡೋ ಸಲ್ಫಾನ್ ಪೀಡಿತರಿಗೆ ಸೂಕ್ತ ನೆರವು ದೊರೆಯಬೇಕು’ ಎಂದು ಸ್ಕೂಡವೇಸ್ ಸಂಸ್ಥೆಯ ವೆಂಕಟೇಶ್ ನಾಯ್ಕ ಸಲಹೆ ನೀಡಿದರು.
ವಿವಿಧ ಅಧಿಕಾರಿಗಳು ತಮ್ಮ ಇಲಾಖೆಗಳಲ್ಲಿ ಸಿಬ್ಬಂದಿ ಕೊರತೆಯನ್ನೇ ಪ್ರಮುಖವಾಗಿ ಪ್ರಸ್ತಾಪಿಸಿದರು. `ಜಿಲ್ಲೆಯ ಹಲವು ತಾಲೂಕುಗಳಿಗೆ ಯಾವುದೇ ಅಧಿಕಾರಿಗಳು, ಸಿಬ್ಬಂದಿಗಳು, ವೈದ್ಯರು ವರ್ಗಾವಣೆಯಾದರೂ ಇಲ್ಲಿ ಬರುತ್ತಿಲ್ಲ. ಈ ತಾಲೂಕುಗಳಿಗೆ ನೇಮಕವಾಗುವವರಿಗೆ ವಿಶೇಷ ಭತ್ಯೆ ನೀಡಬೇಕು’ ಎಂಬ ಸಲಹೆ ನೀಡಿದರು. `ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ ಶಿಕ್ಷಕ ಹುದ್ದೆಗೆ ಬದಲಾಗಿ ನೇಮಕವಾಗುವ ಅತಿಥಿ ಶಿಕ್ಷಕರಿಗೆ ಸೂಕ್ತ ತರಬೇತಿ ನೀಡಬೇಕು. ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಯಾಗಬೇಕು’ ಎಂಬ ಅಭಿಪ್ರಾಯ ವ್ಯಕ್ತವಾಯಿತು.
`ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯು ಅತ್ಯಂತ ಪರಿಣಾಮಕಾರಿಯಾದ ವರದಿ ಸಲ್ಲಿಕೆಗೆ ಅಧಿಕಾರಿಗಳು, ಸಂಘ ಸಂಸ್ಥೆಗಳು, ಸಾರ್ವಜನಿಕರು ನಿಡುವ ಸಲಹೆಗಳು ಅತ್ಯಂತ ಪ್ರಮುಖವಾಗಿದೆ. ಈ ಎಲ್ಲಾ ಸಲಹೆಗಳನ್ನು ಕ್ರೂಢೀಕರಿಸಿ ಉತ್ತಮ ವರದಿಯನ್ನು ಸಲ್ಲಿಸಲಾಗುವುದು’ ಎಂದು ಸಮಿತಿಯ ಸದಸ್ಯ ಡಾ.ಎಸ್.ಟಿ. ಬಾಗಲಕೋಟಿ ಹೇಳಿದರು. ಸಭೆಯಲ್ಲಿ ಜಿ ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ ಕಾಂದೂ, ಡಿ ಎಫ್ ಓ. ರವಿಶಂಕರ್, ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯ, ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಇತರರಿದ್ದರು.