ಯಲ್ಲಾಪುರದ ಗೋಪಾಲಕೃಷ್ಣ ಹೆಬ್ಬಾರ್ ಅವರು ಜೋಪಾನವಾಗಿರಿಸಿದ್ದ ಅಡಿಕೆ ಕಳ್ಳರ ಪಾಲಾಗಿದೆ. ಅವರ ಮನೆ ಹಿಂದಿನ ಶೆಡ್ಡಿಗೆ ನುಗ್ಗಿದ ಕಳ್ಳರು ಅಲ್ಲಿದ್ದ ಅಡಿಕೆ ಕದ್ದು ಪರಾರಿಯಾಗಿದ್ದಾರೆ.
ಅಡಿಕೆ ಬೆಳೆಯನ್ನು ನಂಬಿ ಬದುಕುತ್ತಿರುವ ಬೆಳೆಗಾರರಿಗೆ ಕಳ್ಳರ ಕಾಟ ನಿದ್ದೆಗೆಡಿಸಿದೆ. ಕಳ್ಳರಿಂದ ಅಡಿಕೆ ಬೆಳೆ ಸಂರಕ್ಷಿಸಿಕೊಳ್ಳುವುದೇ ಸವಾಲಾಗಿದೆ. ಶಿರಸಿ, ಕುಮಟಾ, ಸಿದ್ದಾಪುರ ಹಾಗೂ ಯಲ್ಲಾಪುರದಲ್ಲಿ ಈಚೆಗೆ ವ್ಯಾಪಕ ಪ್ರಮಾಣದಲ್ಲಿ ಅಡಿಕೆ ಕಳ್ಳತನ ಪ್ರಕರಣಗಳು ವರದಿಯಾಗುತ್ತಿದೆ.
75 ವರ್ಷದ ಗೋಪಾಲಕೃಷ್ಣ ಹೆಬ್ಬಾರ್ ಅವರು ಯಲ್ಲಾಪುರದ ಇಡಗುಂದಿಯ ಜೋಗದಮನೆಯಲ್ಲಿ ವಾಸವಾಗಿದ್ದರು. ಇಳಿ ವಯಸ್ಸಿನಲ್ಲಿಯೂ ಅವರು ಕೃಷಿ-ತೋಟಗಾರಿಕೆ ಚಟುವಟಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಅದಾಗಿಯೂ ಅವರು ದುಡಿದು ಜೋಪಾನ ಮಾಡಿದ್ದ ಅಡಿಕೆಯನ್ನು ಕಳ್ಳರು ಕದ್ದೊಯ್ದರು. ಮಾರ್ಚ 3ರಿಂದ ಏಪ್ರಿಲ್ 9ರ ಅವಧಿಯಲ್ಲಿ ಅವರ ಅರಿವಿಗೆ ಬಾರದಂತೆ ಅಡಿಕೆ ಕಳ್ಳತನ ನಡೆದಿದ್ದು, ಅಡಿಕೆ ಮರಳಿ ಸಿಗಬಹುದು ಎಂದು ಅವರು ಇಷ್ಟು ದಿನ ಕಾದರು.
ಕೊನೆಗೆ ಕುಟುಂಬದವರಲ್ಲಿ ಚರ್ಚಿಸಿ ಇದೀಗ ಅವರು ಪೊಲೀಸ್ ದೂರು ನೀಡಿದರು. ತಗಡಿನ ಶೆಡ್ಡಿನ ಒಳಗಿರಿಸಿದ್ದ 1.40 ಲಕ್ಷ ರೂ ಮೌಲ್ಯದ 7 ಕ್ವಿಂಟಲ್ ಅಡಿಕೆ ಕಳ್ಳತನ ನಡೆದ ಬಗ್ಗೆ ಅವರು ದೂರಿದ್ದಾರೆ.